ಸರ್ಕಾರದಿಂದ ಆಶಾ ಕಾರ್ಯಕರ್ತೆಯರ ಕಡೆಗಣನೆ:ಡಿ. ನಾಗಲಕ್ಷ್ಮೀ

| Published : Oct 07 2024, 01:40 AM IST

ಸರ್ಕಾರದಿಂದ ಆಶಾ ಕಾರ್ಯಕರ್ತೆಯರ ಕಡೆಗಣನೆ:ಡಿ. ನಾಗಲಕ್ಷ್ಮೀ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರೋತ್ಸಾಹ ಧನದ ಹೆಸರಿನಲ್ಲಿ ಆಶಾ ಕಾರ್ಯಕರ್ತೆಯರನ್ನು ದಿನದ ೧೨ ಗಂಟೆಗೂ ಹೆಚ್ಚು ಕಾಲ ದುಡಿಸಿಕೊಳ್ಳಲಾಗುತ್ತಿದೆ.

ಹೊಸಪೇಟೆ; ಆಶಾ ಕಾರ್ಯಕರ್ತೆಯರನ್ನು ಗಾಣದ ಎತ್ತುಗಳಂತೆ ದುಡಿಸಿಕೊಳ್ಳುತ್ತಿರುವ ಸರ್ಕಾರ, ಅವರಿಗೆ ಕನಿಷ್ಠ ಸೌಲಭ್ಯಗಳನ್ನು ನೀಡದೇ ವಂಚಿಸುತ್ತಿದೆ ಎಂದು ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮೀ ಆರೋಪಿಸಿದರು.

ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ, ವಿಜಯನಗರ ಜಿಲ್ಲಾ ಸಮಿತಿ ವತಿಯಿಂದ ನಗರದ ಒಳಕ್ರೀಡಾ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಆಶಾ ಕಾರ್ಯಕರ್ತೆಯರ ಜಿಲ್ಲಾ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಪ್ರೋತ್ಸಾಹ ಧನದ ಹೆಸರಿನಲ್ಲಿ ಆಶಾ ಕಾರ್ಯಕರ್ತೆಯರನ್ನು ದಿನದ ೧೨ ಗಂಟೆಗೂ ಹೆಚ್ಚು ಕಾಲ ದುಡಿಸಿಕೊಳ್ಳಲಾಗುತ್ತಿದೆ. ಅವರಿಗೆ ಸಿಗಬೇಕಾದ ಕನಿಷ್ಠ ಸೌಲಭ್ಯಗಳನ್ನು ನೀಡದೇ ಕೊನೆ ಪಕ್ಷ ಅವರನ್ನು ಕಾರ್ಮಿಕರು ಎಂದು ಪರಿಗಣಿಸದೇ ಸರ್ಕಾರ ವಂಚಿಸುತ್ತಿದೆ. ಅವರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಅಲ್ಲಿತನಕ ಆಶಾಗಳನ್ನು ಕಾರ್ಮಿಕರೆಂದು ಪರಿಗಣಿಸಿ, ಅವರಿಗೆ ಸಾಮಾಜಿಕ ಭದ್ರತೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ದುಡಿಯುವ ವರ್ಗದ ಜನರ ಪರವಾಗಿ ಇರಬೇಕಾದ ಸರ್ಕಾರಗಳು, ದೊಡ್ಡ, ದೊಡ್ಡ ಕೈಗಾರಿಕೋದ್ಯಮಗಳು ಮತ್ತು ಬಂಡವಾಳಶಾಹಿಗಳ ಪರವಾಗಿವೆ. ಕಾರ್ಮಿಕರ ಹಕ್ಕುಗಳನ್ನು ತಿದ್ದುಪಡಿ ಮಾಡಿ ಮಾಲೀಕರ ಹಿತ ಕಾಪಾಡುತ್ತಿವೆ. ಸರ್ಕಾರದ ನೀತಿಯ ವಿರುದ್ಧ ಬಲಿಷ್ಠ ಹೋರಾಟ ರೂಪಗೊಳ್ಳಬೇಕಿದೆ. ಇದಕ್ಕಾಗಿ ಎಲ್ಲರೂ ಅಣಿಯಾಗಬೇಕು ಎಂದರು.

ಎಐಯುಟಿಯುಸಿ ರಾಜ್ಯ ಸಮಿತಿ ಸದಸ್ಯೆ ಕಾ.ಶಾಂತಾ ಮಾತನಾಡಿ, ಗ್ರಾಮೀಣ, ನಗರ ಪ್ರದೇಶಗಳಲ್ಲಿ ಇಂದು ತಾಯಿ ಮತ್ತು ಶಿಶು ಮರಣ ಪ್ರಮಾಣ ಕಡಿಮೆ ಆಗುವಲ್ಲಿ ಆಶಾ ಕಾರ್ಯಕರ್ತೆಯರ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಹಗಲಿರುಳು ಅವರು ಚಳಿ, ಮಳೆ, ಗಾಳಿ ಲೆಕ್ಕಿಸದೇ ಪ್ರಮಾಣಿಕವಾಗಿ ದುಡಿಯುತ್ತಿದ್ದಾರೆ. ಈ ಮಹಿಳೆಯರಿಗೆ ಸರ್ಕಾರಗಳು ಪ್ರೋತ್ಸಾಹ ಧನದ ಹೆಸರಿನಲ್ಲಿ ಶೋಷಣೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ಜಿಲ್ಲಾ ಉಪಾಧ್ಯಕ್ಷೆ ಗೀತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಕಾರ್ಯದರ್ಶಿ ಗೌರಮ್ಮ ಕೆ.ಎಸ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಷಣ್ಮುಖ ನಾಯಕ್, ಜಿಲ್ಲಾ ಮುಖಂಡರಾದ ವೀರಮ್ಮ, ನೇತ್ರಾ, ಮಂಗಳಾ, ನಾಗಮ್ಮ, ಅನ್ನಪೂರ್ಣ, ಮಂಜುಳಾ, ಮಹೇಶ್ವರಿ, ವೀಣಾ, ಚೆನ್ನಮ್ಮ, ರಾಧಮ್ಮ, ಮಾರೆಕ್ಕ, ಗೌರಿ, ರುಕ್ಮಿಣಿ ಉಪಸ್ಥಿತರಿದ್ದರು. ಆರಂಭದಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.

ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಡಾ.ಪ್ರಮೋದ್.ಎನ್, ಅಧ್ಯಕ್ಷರಾಗಿ ಗೀತಾ.ಪಿ.ಎ, ಕಾರ್ಯದರ್ಶಿಯಾಗಿ ಗೌರಮ್ಮ, ಉಪಾಧ್ಯಕ್ಷರಾಗಿ ವೀರಮ್ಮ, ನೇತ್ರಾ, ಮಂಗಳಾ, ನಾಗಮ್ಮ, ಮಹೇಶ್ವರಿ, ಚೆನ್ನಮ್ಮ, ಮಾರೆಕ್ಕ, ಅನ್ನಪೂರ್ಣ, ವೀಣಾ, ಮಂಜುಳಾ ನೇಮಕಗೊಂಡರು.