ಕಳೆದ ತಿಂಗಳಿನಿಂದ ಪ್ರತಿ ಅಮಾವಾಸ್ಯೆಗೆ ಸಿದ್ಧಾರೂಢ ಮಠದಲ್ಲಿ ಆರಂಭಿಸಲಾಗಿರುವ ಆರೂಢ ಆರತಿಗೆ ಕಳೆದ ಬಾರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಸಿದ್ಧಾರೂಢರ ಭಕ್ತರು ಸೇರಿದ್ದರು.

ಹುಬ್ಬಳ್ಳಿ: ಇಲ್ಲಿಯ ಶ್ರೀ ಸಿದ್ಧಾರೂಢ ಮಠದ ಆವರಣದಲ್ಲಿರುವ ಪುಷ್ಕರಣಿಯಲ್ಲಿ ಭಾನುವಾರ ಸಂಜೆ ಅಪಾರ ಭಕ್ತರ ಹರ್ಷೋದ್ಗಾರದ ನಡುವೆ "ಗಂಗಾ ಆರತಿ " ಮಾದರಿಯಲ್ಲಿ "ಆರೂಢ ಆರತಿ " ಅದ್ಧೂರಿಯಾಗಿ ನೆರವೇರಿಸಲಾಯಿತು.

ಶ್ರೀ ಸಿದ್ಧಾರೂಢರ ಮತ್ತು ಶ್ರೀ ಗುರುನಾಥರೂಢರ ಜೈಕಾರ, ಹರ ಹರ ಮಹಾದೇವ ಎಂಬ ಜಯ ಘೋಷಣೆಗಳ ಮಧ್ಯೆ ಸಂಜೆ ಆರೂಢ ಆರತಿ ಬೆಳಗಲಾಯಿತು. ಗಣಪತಿ ಸ್ತೋತ್ರದೊಂದಿಗೆ ಆರಂಭಗೊಂಡ ಆರೂಢ ಆರತಿಯು ಶ್ರೀ ಸಿದ್ಧಾರೂಢರ ಸ್ತೋತ್ರ, ಶಂಖನಾದ, ಢಮರು ತಾಂಡವ ಹಾಡು, ಪುಷ್ಪಾರ್ಚನೆ ಹಾಗೂ ನಾಗಾರ್ಚನೆ ಸ್ತೋತ್ರದ ನಂತರದಲ್ಲಿ ಆರೂಢ ಆರತಿ ಬೆಳಗಿತು.

ಐದು ಜನರ ತಂಡದಿಂದ ಅತ್ಯಂತ ಅಚ್ಚುಕಟ್ಟಾಗಿ ನಡೆದ ಆರೂಢ ಆರತಿ ಭಕ್ತರ ಗಮನ ಸೆಳೆಯಿತು. ಪುಷ್ಕರಣಿ ಸುತ್ತಲೂ ನೆರೆದ ಸಿದ್ಧಾರೂಢರ ಸದ್ಭಕ್ತರು ಆರತಿ ಬೆಳಗುತ್ತಿದ್ದಂತೆ ಬಾನೆತ್ತರದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಆರೂಢ ಆರತಿ ವೇಳೆಗೆ ಪುಷ್ಕರಣಿಯಲ್ಲಿರುವ ಶ್ರೀ ಸಿದ್ಧಾರೂಢರ ಮತ್ತು ಶ್ರೀ ಗುರುನಾಥರೂಢ ಮೂರ್ತಿಗೆ ಪೂಜೆ ಸಲ್ಲಿಸಲಾಯಿತು.

ಇದಕ್ಕೂ ಪೂರ್ವದಲ್ಲಿ ನಡೆದ ಆರೂಢ ಆರತಿ ಕಾರ್ಯಕ್ರಮವನ್ನು ಸ್ವರ್ಣಾ ಗ್ರೂಪ್‌ ಆಫ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಡಾ. ಸಿಎಚ್‌. ವಿ.ಎಸ್‌.ವಿ. ಪ್ರಸಾದ ಉದ್ಘಾಟಿಸಿ ಮಾತನಾಡಿ, ಕಾಶಿಯಲ್ಲಿ ನೆರವೇರಿಸಲಾಗುವ ಗಂಗಾ ಆರತಿಯಂತೆಯೇ ಶ್ರೀ ಸಿದ್ಧಾರೂಢ ಮಠದ ಆವರಣದ ಪುಷ್ಕರಣಿಯಲ್ಲಿ ಆರೂಢ ಆರತಿ ಬೆಳಗಿಸಲಾಗುತ್ತಿದೆ. ಉತ್ತರ ಭಾರತದಲ್ಲಿ ನಡೆಯುವ ಗಂಗಾ ಆರತಿಯನ್ನು ಕೆಲವರು ನೋಡಿರಬಹುದು. ಆದರೆ, ಬಹುತೇಕರಿಗೆ ಇದನ್ನು ನೋಡುವ ಭಾಗ್ಯ ಸಿಕ್ಕಿರಲಿಲ್ಲ. ಆದರೀಗ ಶ್ರೀಮಠದ ಟ್ರಸ್ಟ್‌ ಕಮಿಟಿಯು ಅದೇ ಮಾದರಿಯಲ್ಲಿ "ಆರೂಢ ಆರತಿ " ಬೆಳಗಿಸುತ್ತಿರುವುದು ಈ ಭಾಗದ ಜನರಲ್ಲಿ ಸಂತಸ ಮೂಡಿಸುತ್ತಿದೆ. ಅಲ್ಲದೇ, ಇದು ದಕ್ಷಿಣ ಭಾರತದಲ್ಲಿ ಸುಪ್ರಸಿದ್ಧಿ ಪಡೆಯಲಿದೆ ಎಂದರು.

ಶಾಂತಾಶ್ರಮದ ಅಭಿನವ ಶ್ರೀ ಸಿದ್ಧಾರೂಢ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶ್ರೀ ಮಠದ ಸಿದ್ಧಾರೂಢ ಮಠದ ಟ್ರಸ್ಟ್‌ ಕಮಿಟಿ ಅಧ್ಯಕ್ಷ ಚನ್ನವೀರ ಮುಂಗರವಾಡಿ, ಜಿಲ್ಲಾ ನ್ಯಾಯಾಧೀಶರಾದ ವೀಣಾ ನಾಯ್ಕರ, ಡಿಸಿಪಿ ಮಹಾನಿಂಗ ನಂದಗಾವಿ, ಟ್ರಸ್ಟಿಗಳಾದ ಬಸವರಾಜ ಕಲ್ಯಾಣಶೆಟ್ಟರ, ಶ್ಯಾಮಾನಂದ ಪೂಜೇರಿ, ಉದಯಕುಮಾರ ನಾಯ್ಕ, ವಸಂತ ಸಾಲಗಟ್ಟಿ, ಬಾಳು ಮಗಜಿಕೊಂಡಿ, ಗೀತಾ ಕಲಬುರ್ಗಿ, ವಿಎಕೆ ಫೌಂಡೇಶನ್‌ ಅಧ್ಯಕ್ಷ ವೆಂಕಟೇಶ ಕಾಟವೆ ಸೇರಿದಂತೆ ಹಲವರಿದ್ದರು. ಹರಿದು ಬಂದ ಭಕ್ತರ ದಂಡು

ಪ್ರತಿ ಅಮಾವಾಸ್ಯೆ ದಿನ ಆರೂಢ ಆರತಿ ಬೆಳಗಿಸಲು ಟ್ರಸ್ಟ್‌ ಕಮಿಟಿ ನಿರ್ಧರಿಸಿದೆ. ಕಳೆದ ಅಮಾವಾಸ್ಯೆಯಿಂದ ಆರಂಭವಾಗಿರುವ ಈ ಆರೂಢ ಆರತಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿರುವುದು ಕಂಡುಬಂದಿತು. ಒಂದು ರೀತಿಯಲ್ಲಿ ಶ್ರೀ ಸಿದ್ಧಾರೂಢರ ಜಾತ್ರಾ ಮಹೋತ್ಸವದಲ್ಲಿ ಕಂಡು ಬರುತ್ತಿದ್ದ ಜನಸಂದಣಿ ಆರೂಢ ಆರತಿ ಸಂದರ್ಭದಲ್ಲಿ ಕಂಡುಬಂದಿತು. ಪುಷ್ಕರಣಿಯ ಸುತ್ತಲೂ ಕಿಕ್ಕಿರಿದು ಕುಳಿತುಕೊಂಡಿದ್ದ ಭಕ್ತರು ಆರೂಢ ಆರತಿಯನ್ನು ಭಕ್ತಿ-ಭಾವದಿಂದ ಕಣ್ತುಂಬಿಕೊಂಡರು.