ಕೆ.ಆರ್.ಪೇಟೆ:
ರೇವತಿ ನಕ್ಷತ್ರದ ಶುಭ ದಿನವಾದ ಬುಧವಾರ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ಭೂ ವರಾಹನಾಥ ಸ್ವಾಮಿ ದೇವಾಲಯಕ್ಕೆ ಚಿತ್ರನಟರು, ರಾಜಕೀಯ ಮುಖಂಡರು ಸೇರಿದಂತೆ ಭಕ್ತರ ಪ್ರವಾಹವೇ ಹರಿದು ಬಂದಿತ್ತು.ಚಿತ್ರ ನಟ ಶರಣ್ ದಂಪತಿ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ದಂಪತಿ, ಮಾಜಿ ಸ್ವೀಕರ್ ದಿ.ಕೃಷ್ಣರ ಪತ್ನಿ ಇಂದ್ರಮ್ಮ ಕುಟುಂಬ ವರ್ಗದವರು ಹಾಗೂ ನೆರೆಯ ಆಂಧ್ರಪ್ರದೇಶದ ಧರ್ಮಾವರಂ ಕ್ಷೇತ್ರದ ಶಾಸಕ ಸೇರಿದಂತೆ ಸಾವಿರಾರು ಭಕ್ತಾದಿಗಳು ಭೂವರಹನಾಥ ಕ್ಷೇತ್ರಕ್ಕೆ ಆಗಮಿಸಿ ಸ್ವಾಮಿಯ ದರ್ಶನ ಪಡೆದು ಅಭಿಷೇಕ, ಪುಷ್ಪಾಭಿಷೇಕ, ಪಟ್ಟಾಭಿಷೇಕ, ವರಾಹ ಹೋಮ ಹಾಗೂ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು.
ಭೂ-ವರಾಹನಾಥ ಸ್ವಾಮಿಗೆ 1000 ಲೀಟರ್ ಹಾಲು, 500 ಲೀಟರ್ ಎಳನೀರು, 500 ಲೀಟರ್ ಕಬ್ಬಿನ ಹಾಲು, ಮೊಸರು, ಜೇನುತುಪ್ಪ, ಹಸುವಿನ ತುಪ್ಪ, ಸುಗಂಧದ ದ್ರವ್ಯಗಳು, ಗಂಗಾಜಲ, ಅರಿಶಿಣ ಶ್ರೀಗಂಧದಿಂದ ಅಭಿಷೇಕ ಮಾಡಿ. ಮಲ್ಲಿಗೆ, ಜಾಜಿ, ಸಂಪಿಗೆ, ಸುಗಂಧ ರಾಜ, ಸೇವಂತಿಗೆ, ಕಮಲ, ತುಳಸಿ, ಧವನ, ಪವಿತ್ರ ಪತ್ರೆಗಳು ಸೇರಿದಂತೆ 58 ಬಗೆಯ ಅಪರೂಪದ ಪುಷ್ಪಗಳಿಂದ ಪುಷ್ಪಾಭಿಷೇಕ ಮಾಡಿ ಪಟ್ಟಾಭಿಷೇಕ ನಡೆಸಿ ಲೋಕ ಕಲ್ಯಾಣಾರ್ಥವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.ಪೂಜಾಭಿಷೇಕಗಳ ಅನಂತರ ಭೂ ವರಾಹನಾಥ ಸ್ವಾಮಿ ಉತ್ಸವ ಮೂರ್ತಿಯನ್ನು ಭಕ್ತಾಧಿಗಳು ಹೆಗಲಿನಲ್ಲಿ ಹೊತ್ತು ದೇವಾಲಯದ ಸುತ್ತ ಮೆರವಣಿಗೆ ಮಾಡಿದರು.
ದೇವಾಲಯದ ವ್ಯವಸ್ಥಾಪನ ಸಮಿತಿ ಸಂಚಾಲಕ ಡಾ.ಶ್ರೀನಿವಾಸ ರಾಘವನ್ ಮಾತನಾಡಿ, ರೇವತಿ ನಕ್ಷತ್ರದ ಶುಭದಿನವಾದ ಇಂದು 17 ಅಡಿ ಎತ್ತರದ ಸಾಲಿಗ್ರಾಮ ಶ್ರೀ ಕೃಷ್ಣ ಶಿಲೆಯ ಮೂರ್ತಿಗೆ ಅಭಿಷೇಕ ಮಾಡಿ ಪಟ್ಟಾಭಿಷೇಕ ಮಾಡಿ ಲೋಕಲ್ಯಾಣಾರ್ಥವಾಗಿ ವಿಶೇಷೇ ಪೂಜೆ ಸಲ್ಲಿಸಲಾಗಿದೆ ಎಂದರು.
ದೇಗುಲಕ್ಕೆ ಮೇಘಾಲಯ ರಾಜ್ಯಪಾಲ ವಿಜಯಶಂಕರ್ ಪುತ್ರ ಶ್ರೀನಿವಾಸ್ ಸೇರಿದಂತೆ ಆಂಧ್ರಪ್ರದೇಶ, ಮಹಾರಾಷ್ಟ್ರ, ಕೇರಳ, ತಮಿಳುನಾಡು ಹಾಗೂ ಮೇಘಾಲಯ ರಾಜ್ಯದಿಂದ ಭಕ್ತಾದಿಗಳು ಆಗಮಿಸಿದ್ದು ವಿಶೇಷವಾಗಿತ್ತು.