ಸಾರಾಂಶ
ಅಪರ ಜಿಲ್ಲಾಧಿಕಾರಿ ಚಂದ್ರಯ್ಯಗೆ ಮನವಿ
ಕನ್ನಡಪ್ರಭ ವಾರ್ತೆ ರಾಮನಗರಜಿಲ್ಲಾ ಮಟ್ಟದ ಜಾಗೃತಿ ಮತ್ತು ಮೇಲ್ವಿಚಾರಣಾ ಸಮಿತಿ ರದ್ದುಗೊಳಿಸಿ, ಅಭ್ಯರ್ಥಿಗಳು ಸಲ್ಲಿಸಿರುವ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಪಾರದರ್ಶಕವಾಗಿ ಅರ್ಹ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕೆಂದು ಒತ್ತಾಯಿಸಿ ಸ್ವಾಭಿಮಾನಿ ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಚಂದ್ರಯ್ಯಗೆ ಮನವಿ ಸಲ್ಲಿಸಿದರು
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ಚಂದ್ರಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಪದಾಧಿಕಾರಿಗಳು, ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ ನಿಯಮಗಳು 2016ರ ನಿಯಮ 17ರಡಿ ರಚಿಸಿರುವ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಮೇಲ್ವಿಚಾರಣಾ ಸಮಿತಿ ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ, ದಲಿತ ವಿರೋಧಿ ಧೋರಣೆ ತಳೆದಿರುವ ಸಮಿತಿಯಾಗಿದೆ. ಕೂಡಲೇ ಈ ಸಮಿತಿ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.ಸಮಿತಿ ಸದಸ್ಯರ ಪಟ್ಟಿಯನ್ನು ಕಚೇರಿ ನೋಟಿಸ್ ಬೋರ್ಡ್‌ನಲ್ಲಿ ಹಾಕಿ, ಇತರೆ ಅರ್ಜಿದಾರರಿಂದ ಸಾರ್ವಜನಿಕರಿಂದ ಸೂಕ್ತ ಕಾರಣಗಳೊಂದಿಗೆ ಆಕ್ಷೇಪಣೆ ಸಲ್ಲಿಸಲು ಯಾವುದೇ ಅವಕಾಶ ನೀಡದೆ ಸರ್ವಾಧಿಕಾರಿಗಳಂತೆ ಅಂತಿಮ ಆಯ್ಕೆ ಮಾಡಿ ಸಮಿತಿ ರಚಿಸಿದ್ದಾರೆ. ಆ ಸದಸ್ಯರು ಸಲ್ಲಿಸಿರುವ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ಅಭ್ಯರ್ಥಿಗಳು ಸಲ್ಲಿಸಿರುವ ದಾಖಲೆಗಳನ್ನಷ್ಟೇ ಮಾನದಂಡವನ್ನಾಗಿ ಪರಿಗಣಿಸಿ, ಯಾವುದೇ ಉಪ ಜಾತಿ ಪಂಗಡಗಳಾಗಿ ವಿಭಾಗಿಸಿ ಸದಸ್ಯರನ್ನು ಆಯ್ಕೆ ಮಾಡದೆ, ಪ.ಜಾತಿ, ಪ.ಪಂಗಡವೆಂದಷ್ಟೇ ಪರಿಗಮಿಸಿ, ಶೋಷಿತ ಸಮುದಾಯಗಳ ಪರ ಹೋರಾಟಗಾರರು, ಸಮಾಜ ಸೇವಕರನ್ನು ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಬೇಕೆಂದು ಒತ್ತಾಯಿಸಿದರು.
ಒಕ್ಕೂಟದ ಪದಾಧಿಕಾರಿಗಳಾದ ಕೊತ್ತೀಪುರ ಗೋವಿಂದರಾಜು, ವಾಸು ನಾಯಕ್, ಸಿ.ವಿನಯ್ ಕುಮಾರ್ , ರಾಜಮ್ಮ, ಮತ್ತಿಕೆರೆ ಹನುಮಂತಯ್ಯ, ಪರಮೇಶ್ ಗೌತಮ್ಮ, ಎಸ್.ಕುಮಾರ್ , ಶ್ರೀನಿವಾಸ್ ಇತರರಿದ್ದರು.