ಸಾರಾಂಶ
ನಿವೃತ್ತ ಮುಖ್ಯಶಿಕ್ಷಕ ಹನುಮಂತ ಅಭಿಮತ । ಧರ್ಮಸ್ಥಳ ಯೋಜನೆಯಿಂದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಕೋಲಾರರೋಗ ಮುಕ್ತ ಜೀವನಕ್ಕಾಗಿ ಸ್ವಚ್ಛತೆ, ವ್ಯಾಯಾಮ, ಯೋಗ, ಹಸಿರು ತರಕಾರಿಗಳಿರುವ ಉತ್ತಮ ಆಹಾರ ಸೇವನೆ ನಿಮ್ಮ ಆದ್ಯತೆಯಾಗಿರಬೇಕು ಆಗ ಮಾತ್ರ ಕಲಿಕೆಯ ಹಾದಿಯೂ ಸುಗಮವಾಗಿರುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಪನ್ಮೂಲ ವ್ಯಕ್ತಿ ನಿವೃತ್ತ ಮುಖ್ಯಶಿಕ್ಷಕ ಹನುಮಂತಪ್ಪ ತಿಳಿಸಿದರು.
ತಾಲೂಕಿನ ಅರಾಭಿಕೊತ್ತನೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನರಸಾಪುರ ವಲಯದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಸ್ವಾಸ್ಥ್ಯ ಸಂಕಲ್ಪ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಉತ್ತಮ ಕಲಿಕೆಗೆ ಆರೋಗ್ಯ ಮತ್ತು ಉತ್ತಮ ಪರಿಸರದ ಅಗತ್ಯವಿದೆ ಎಂದ ಅವರು, ಹಸಿರು ತರಕಾರಿ ಹೆಚ್ಚು ಸೇವಿಸಿ, ಶಾಲೆಯಲ್ಲಿ ಬಿಸಿಯೂಟದಲ್ಲಿ ನೀಡುವ ತರಕಾರಿ ಬಿಸಾಡದಿರಿ, ನಿರಂತರವಾಗಿ ಸೊಪ್ಪು, ಮೊಳಕೆ ಕಾಳು ಹೆಚ್ಚು ಸೇವಿಸಿ ಎಂದು ಕಿವಿಮಾತು ಹೇಳಿದರು.
ಜೀವನದಲ್ಲಿ ಸಾಧನೆ ಮಾಡಲು ನಿರಂತರ ಅಧ್ಯಯನ ಅತಿ ಮುಖ್ಯವೆಂದ ಅವರು, ಡಾ. ಅಂಬೇಡ್ಕರ್ ನಿತ್ಯ ೧೮ ಗಂಟೆಗಳ ಅಧ್ಯಯನ ಮಾಡುತ್ತಿದ್ದರಿಂದಲೇ ಅವರು ನಮ್ಮ ದೇಶಕ್ಕೆ ಉತ್ತಮ ಸಂವಿಧಾನ ನೀಡಲು ಸಾಧ್ಯವಾಯಿತು. ತಂಬಾಕು ಸೇವನೆ, ಮಾದಕ ವಸ್ತುಗಳ ಬಳಕೆ ಚಟವಾದರೆ ಬದುಕು ಶೂನ್ಯವಾಗುತ್ತದೆ ಎಂದು ಎಚ್ಚರಿಸಿದ ಅವರು, ನಿಮ್ಮ ಹೆತ್ತವರು ನಿಮ್ಮ ಮೇಲಿಟ್ಟಿರುವ ನಂಬಿಕೆಗೆ ದ್ರೋಹ ಬಗೆಯದಿರಿ, ಚೆನ್ನಾಗಿ ಓದಿ ಸಾಧಕರಾಗಿ ಹೊರಹೊಮ್ಮಿ ಎಂದು ತಿಳಿಸಿದರು.ಯೋಜನೆಯ ನರಸಾಪುರ ವಲಯ ಮೇಲ್ವಿಚಾರಕಿ ಕೆ.ಉಷಾ ಮಾತನಾಡಿ, ಧರ್ಮಸ್ಥಳ ಯೋಜನೆಯಿಂದ ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ, ವಿದ್ಯಾರ್ಥಿಗಳು ಶಾಲೆ ಆವರಣ, ಮನೆಯ ಬಳಿ ಗಿಡ ನೆಟ್ಟು, ಪೋಷಿಸಿ ಪರಿಸರಕ್ಕೆ ನಿಮ್ಮ ಕೊಡುಗೆ ನೀಡಿ ಎಂದು ಕರೆ ನೀಡಿದರು.
ಗ್ರಾಮೀಣ ಪ್ರದೇಶದಲ್ಲಿ ದೇವಾಲಯಗಳ ಜೀರ್ಣೋದ್ಧಾರಕ್ಕಾಗಿ ಧರ್ಮಸ್ಥಳ ಯೋಜನೆಯಿಂದ ನೆರವು ನೀಡಲಾಗುತ್ತಿದೆ, ನಮ್ಮ ಕೆರೆ ನಮ್ಮ ಊರು ಯೋಜನೆಯಡಿ ಅರಾಭಿಕೊತ್ತನೂರು ಕೆರೆಯ ಪುನಶ್ಚೇತನ ಮಾಡಿದ್ದರಿಂದ ಇಂದು ಕೆರೆಯಲ್ಲಿ ನೀರು ಹೇರಳವಾಗಿ ನಿಂತಿದೆ, ಇದರಿಂದ ಅಂತರ್ಜಲ ವೃದ್ಧಿಗೂ ಸಹಕಾರಿಯಾಗಿದೆ ಎಂದು ತಿಳಿಸಿದರು.ಶಾಲೆಯ ಮುಖ್ಯಶಿಕ್ಷಕಿ ತಾಹೇರಾ ನುಸ್ರತ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಮ್ಮ ಶಾಲೆಗೂ ಮಧ್ಯಾಹ್ನದ ಬಿಸಿಯೂಟದ ಅನ್ನಪೂರ್ಣ ಅಡುಗೆ ಮನೆ ನಿರ್ಮಾಣಕ್ಕೆ ೫೦ ಸಾವಿರ ರು. ನೆರವು ನೀಡಿದೆ, ನಮ್ಮ ಶಾಲೆಯಲ್ಲಿ ಅತಿಥಿ ಶಿಕ್ಷಕರ ನೇಮಕಕ್ಕೂ ನೆರವಾಗಿದೆ ಎಂದು ತಿಳಿಸಿ ಧನ್ಯವಾದ ಸಲ್ಲಿಸಿದರು.
ಕಾಯಕ್ರಮದಲ್ಲಿ ಜಿಲ್ಲಾ ಜನ ಜಾಗೃತಿ ಸಮಿತಿ ಸದಸ್ಯ ನಾರಾಯಣಶೆಟ್ಟಿ, ಧರ್ಮಸ್ಥಳ ಯೋಜನೆ ಜಿಲ್ಲೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಕ್ರಮಗಳು, ಅನಾಥರಿಗೆ ಮಾಸಾಶನ ಮತ್ತಿತರ ಜನಪರ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.ಶಿಕ್ಷಕರಾದ ಎಂ.ಆರ್.ಗೋಪಾಲಕೃಷ್ಣ, ವೆಂಕಟರೆಡ್ಡಿ, ಸುಗುಣಾ, ಫರೀದಾ, ಶ್ರೀನಿವಾಸಲು, ರಮಾದೇವಿ, ಡಿ.ಚಂದ್ರಶೇಖರ್, ಧರ್ಮಸ್ಥಳ ಯೋಜನೆಯ ಸೇವಾ ಪ್ರತಿನಿಧಿ ಕವಿತಾ ಇದ್ದರು.-------
ಅರಾಭಿಕೊತ್ತನೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನರಸಾಪುರ ವಲಯದಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಸಂಪನ್ಮೂಲ ವ್ಯಕ್ತಿ ನಿವೃತ್ತ ಮುಖ್ಯಶಿಕ್ಷಕ ಹನುಮಂತಪ್ಪ ಉದ್ಘಾಟಿಸಿದರು.