ಸಾರಾಂಶ
ಕನ್ನಡಪ್ರಭ ವಾರ್ತೆ ಶಿಕಾರಿಪುರ / ಶಿರಾಳಕೊಪ್ಪ
ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯ ಶೈಲಾ ಯೋಗೇಶ್ ಮಡ್ಡಿ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ರೂಪ ಮಂಜುನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.22 ಸದಸ್ಯ ಬಲದ ಪಟ್ಟಣದ ಪುರಸಭೆಯಲ್ಲಿ ಬಿಜೆಪಿ 10 ಹಾಗೂ ಕಾಂಗ್ರೆಸ್ 8 ಸದಸ್ಯರಿದ್ದು, 4 ಪಕ್ಷೇತರ ಸದಸ್ಯರು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಕಾನೂನಿನ ಸಮಸ್ಯೆಯಿಂದಾಗಿ ಕಳೆದ ವರ್ಷದಿಂದ ಉಪ ವಿಭಾಗಾಧಿಕಾರಿ ಆಡಳಿತಾಧಿಕಾರಿಯಾಗಿದ್ದ ಪಟ್ಟಣದ ಪುರಸಭೆಗೆ ಇತ್ತೀಚೆಗೆ ಅಧ್ಯಕ್ಷ ಹುದ್ದೆಗೆ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ [ಅ] ಮಹಿಳೆ ಮೀಸಲಾತಿ ನಿಗದಿಯಾಗಿದ್ದು, ಬಿಜೆಪಿಯ ಆಪರೇಷನ್ ಕಮಲದಿಂದಾಗಿ ನಡೆದ ಉಪ ಚುನಾವಣೆ ಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ದೊಡ್ಡಪೇಟೆ ವಾರ್ಡ್ ನಂ.5 ರಿಂದ ಸ್ಪರ್ಧಿಸಿ ಗೆಲುವು ಸಾಧಿಸಿ ನಂತರ ಬಿಜೆಪಿಗೆ ಸೇರ್ಪಡೆಯಾಗಿದ್ದ ಶೈಲಾ ಯೋಗೇಶ್ ಮಡ್ಡಿ ರವರು ಅಧ್ಯಕ್ಷ ಸ್ಥಾನಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸೊಪ್ಪಿನಕೇರಿ ವಾರ್ಡ್ ನಂ.7 ರಿಂದ ಆಯ್ಕೆಯಾಗಿದ್ದ ರೂಪ ಮಂಜುನಾಥ್ ರವರು ಮಾತ್ರ ನಾಮಪತ್ರ ಸಲ್ಲಿಸಿದ್ದರು.
ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಯತೀಶ್ ರವರು ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅವಿರೋಧ ಆಯ್ಕೆಯನ್ನು ಘೋಷಿಸಿದರು. ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಸಂಸದ ರಾಘವೇಂದ್ರ, ಶಾಸಕ ವಿಜಯೇಂದ್ರ ಸಹಿತ ಸದಸ್ಯರು ಹಾಗೂ ಸಾರ್ವಜನಿಕರು, ಪಕ್ಷದ ಕಾರ್ಯಕರ್ತರು ಅಭಿನಂದಿಸಿ ಪಟಾಕಿ ಸಿಡಿಸಿ ಸಿಹಿ ವಿತರಿಸಿ ಸಂಭ್ರಮಿಸಿದರು.ಬೃಹತ್ ಮೆರವಣಿಗೆ ಮೂಲಕ ಮಾಳೇರಕೇರಿಯಲ್ಲಿನ ಬಿಜೆಪಿ ಕಚೇರಿಗೆ ಆಗಮಿಸಿದ ನಂತರ ಸಂಸದ ರಾಘವೇಂದ್ರ ಮಾತನಾಡಿ, ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಜವಾಬ್ದಾರಿಯುತ ಹುದ್ದೆಯಾಗಿದ್ದು, ಸಾರ್ವಜನಿಕರು ಕಚೇರಿಗೆ ಆಗಮಿಸಿದಾಗ ಪಕ್ಷಾತೀತವಾಗಿ ಪ್ರತಿಯೊಬ್ಬರನ್ನೂ ಕುಳ್ಳರಿಸಿ ಸಮಸ್ಯೆ ಪರಿಹರಿಸುವ ಮೂಲಕ ಸ್ಪಂದಿಸುವಂತೆ ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ ವಿಜಯೇಂದ್ರ ಮಾತನಾಡಿ, ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ಪಟ್ಟಣ ಸಹಿತ ಸಮಗ್ರ ತಾಲೂಕು ಅಭಿವೃದ್ಧಿಯಾಗಿದ್ದು, ಈ ಮಧ್ಯೆ ಜನತೆ ಹಲವು ನಿರೀಕ್ಷೆ ಜತೆಗೆ ಸಮಸ್ಯೆ ಎದುರಿಸುತ್ತಿದ್ದಾರೆ. ನೂತನ ಅಧ್ಯಕ್ಷ ಉಪಾಧ್ಯಕ್ಷರು ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಿ ಯಶಸ್ವಿಯಾಗುವ ನಿರೀಕ್ಷೆ ಹೊಂದಿರುವುದಾಗಿ ತಿಳಿಸಿದರು.ಈ ಸಂದರ್ಬದಲ್ಲಿ ಪುರಸಭಾ ಮುಖ್ಯಾಧಿಕಾರಿ ಭರತ್, ಸದಸ್ಯ ಮಹೇಶ್ ಹುಲ್ಮಾರ್, ಕಮಲಮ್ಮ, ಲಕ್ಷ್ಮಿ, ಜೀನಳ್ಳಿ ಪ್ರಶಾಂತ್, ರಮೇಶ್, ಫೈರೋಜಾ ಭಾನು, ಸುನಂದ, ಪಾಲಾಕ್ಷಪ್ಪ, ರೂಪಕಲಾ ಹೆಗ್ಡೆ, ರೇಖಾಬಾಯಿ, ಉಮಾವತಿ, ಗೋಣಿ ಪ್ರಕಾಶ್, ತಾಲೂಕು ಬಿಜೆಪಿ ಅಧ್ಯಕ್ಷ ಹನುಮಂತಪ್ಪ, ಉಪಾಧ್ಯಕ್ಷ ವಸಂತಗೌಡ, ಯುವ ಮೋರ್ಚಾ ಅಧ್ಯಕ್ಷ ವೀರಣ್ಣಗೌಡ, ನಗರಾಧ್ಯಕ್ಷ ಪ್ರಶಾಂತ್ ಸಾಳುಂಕೆ, ಮುಖಂಡ ಗುರುಮೂರ್ತಿ, ಎಚ್.ಟಿ ಬಳಿಗಾರ್, ರಾಮಾನಾಯ್ಕ, ಗಾಯತ್ರಿದೇವಿ, ಚನ್ನವೀರಪ್ಪ, ಮಿಲ್ಟ್ರಿ ಬಸವರಾಜ್, ಶಶಿಧರ ಚುರ್ಚುಗುಂಡಿ, ಶಂಭು, ಫಕೀರಪ್ಪ, ಸಿದ್ದಲಿಂಗ ನ್ಯಾಮತಿ, ಪಾಪಣ್ಣ, ಪ್ರವೀಣಶೆಟ್ಟಿ ಮತ್ತಿತರ ನೂರಾರು ಮುಖಂಡರು, ಕಾರ್ಯಕರ್ತರು ಹಾಜರಿದ್ದರು.ಶಿರಾಳಕೊಪ್ಪ ಪುರಸಭೆ ಈಗ ಕಾಂಗ್ರೆಸ್ ತೆಕ್ಕೆಗೆ
ಶಿರಾಳಕೊಪ್ಪ: ಪುರಸಭೆ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಮಮತ ನಿಂಗಪ್ಪ ಹಾಗೂ ಉಪಾಧ್ಯಕ್ಷರಾಗಿ ಮುದಸ್ಸೀರ್ ಅಹಮದ್ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.ಬುಧವಾರ ಪುರಸಭೆ ಯಡಿಯೂರಪ್ಪ ಸಭಾವನದಲ್ಲಿ ನಡೆದ ಚುನಾವಣೆಲ್ಲಿ ಕಾಂಗ್ರೆಸ್ ಪಕ್ಷದ ಮಮತ ಮತ್ತು ಮದಸ್ಸೀರ್ ಮಾತ್ರ ನಾಮಪತ್ರ ಸಲ್ಲಿಸಿದ ಕಾರಣ ಚುನಾವಣೆ ಅಧಿಕಾರಿ, ಉಪವಿಭಾಗಾಧಿಕಾರಿ ಯತೀಶ್ ಅವರು ಮಮತ ಅವರನ್ನು ಅಧ್ಯಕ್ಷರಾಗಿ ಮುದಸ್ಸೀರ್ ಅಹಮದ್ ಅವರನ್ನು ಉಪಾಧ್ಯಕ್ಷರಾಗಿ ಆಯ್ಕೆ ಆಗಿ ದ್ದಾರೆ ಎಂದು ಘೋಷಿಸಿದರು. ಚುನಾವಣೆಯಲ್ಲಿ ೧೨ ಸದಸ್ಯರು ಭಾಗವಹಿಸಿದ್ದು. ಕಾಂಗ್ರೆಸ್ ಪಕ್ಷದ ೭, ಜೆಡಿಎಸ್ ಪಕ್ಷದ ೩, ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಸೇರಿದ್ದ ಪಕ್ಷೇತರರು ಇಬ್ಬರು ಚುನಾವಣೆಯಲ್ಲಿ ಹಾಜರಿದ್ದರು.
ಬಿಜೆಪಿಯ ಇಬ್ಬರು ಹಾಗೂ ಪಕ್ಷೇತರರಾದ ಟಿ.ರಾಜು ಮತ್ತು ಮಂಜುಳಾ ಟಿ.ರಾಜು ಗೈರು ಹಾಜರಾಗಿದ್ದರು. ಒಟ್ಟು ೧೭ ಸದಸ್ಯ ಬಲ ಹೊಂದಿದ್ದ ಪುರಸಭೆಯಲ್ಲಿ ಒಬ್ಬ ಸದಸ್ಯರು ಮೃತಪಟ್ಟ ಹಿನ್ನೆಲೆಯಲ್ಲಿ ಈಗ ೧೬ ಸದಸ್ಯರಿರುವರು. ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಘೋಷಣೆ ಆಗುತ್ತಿದ್ದದಂತೆಯೇ ಪುರಸಭೆ ಆಗಮಿಸಿದ ಕಾಂಗ್ರೆಸ್ ಪಕ್ಷದ ಮುಖಂಡ ನಾಗರಾಜ್ ಗೌಡ ಹಾಗೂ ಬ್ಲಾಕ್ ಅಧ್ಯಕ್ಷ ವೀರನಗೌಡ, ಕೆಪಿಸಿಸಿ ಸದಸ್ಯ ಹಿರೇಜಂಬೂರ ಚಂದ್ರಣ್ಣ, ಸಯ್ಯದ್ ಬಿಲ್ಲಾಲ್ ಹಾಗೂ ಕಾರ್ಯಕರ್ತರು ಆಗಮಿಸಿ ಹಾರ ಹಾಕಿ ನೂತನವಾಗಿ ಆಯ್ಕೆ ಆದ ಅಧ್ಯಕ್ಷೆ ಮಮತ ಹಾಗೂ ಉಪಾಧ್ಯಕ್ಷ ಮುದಸ್ಸೀರ್ ಅವರನ್ನು ಅಭಿನಂದಿಸಿದರು.ಶಿರಾಳಕೊಪ್ಪ ಪುರಸಭೆಯಲ್ಲಿ ಕಳೆದ ೨೫ ವರ್ಷಗಳಲ್ಲಿ ೧೦ ತಿಂಗಳು ಮಾತ್ರ ಕಾಂಗ್ರೆಸ್ ಪಕ್ಷ ಆಡಳಿತ ನಡೆಸಿತ್ತು. ಉಳಿದ ಸಮಯದಲ್ಲಿ ಬಿಜೆಪಿ ಅಧಿಕಾರ ನಡೆಸಿತ್ತು.ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಪಕ್ಷದ ಮುಖಂಡ ನಾಗರಾಜ ಗೌಡ, ಈ ಹಿಂದೆ ಬಿಜೆಪಿ ಆಡಳಿತ ಇದ್ದ ಪುರಸಭೆಯಲ್ಲಿ ಎಲ್ಲ ಸದಸ್ಯರ ಬೆಂಬಲದೊಂದಿಗೆ ಕಾಂಗ್ರೆಸ್ ಪಕ್ಷದ ಸರ್ಕಾರ ಆಯ್ಕೆ ಆಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದು, ಇಲ್ಲಿ ಸಹಕಾರ ಕೊಟ್ಟು ಉತ್ತಮ ಆಡಳಿತ ನಡೆಸಲಿದ್ದೇವೆ, ಉಳಿದ ಸದಸ್ಯರು ಸಹಕಾರ ನೀಡಬೇಕು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಮಲ್ಲೇಶಪ್ಪ ಪೂಜಾರ್, ಮುಖ್ಯಾಧಿಕಾರಿ ಹೇಮಂತ್ ಡೊಳ್ಳೆ ಉಪವಿಭಾಗಾಧಿಕಾರಿಯೊಂದಿಗೆ ಇದ್ದು ಸಹಕಾರ ನೀಡಿದರು. ಕಾಂಗ್ರೇಸ್ ಪಕ್ಷದ ನೂರಾರು ಪಕ್ಷದ ಅಭಿಮಾನಿಗಳು ಹಾಜರಿದ್ದರು.