ಸಾರಾಂಶ
ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ನಗರದ ಪಾಂಡೇಶ್ವರ ಹಾಗೂ ಕುದ್ರೋಳಿ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಹೋಮ್ ವೋಟಿಂಗ್ ಕಾರ್ಯವನ್ನು ಖುದ್ದು ಪರಿಶೀಲಿಸಿ, ಮತದಾರರ ಸ್ಪಂದನೆ ಹಾಗೂ ಚುನಾವಣಾ ಸಿಬ್ಬಂದಿ ಕಾರ್ಯವನ್ನು ಶ್ಲಾಘಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ಶೇ.40ಕ್ಕಿಂತ ಹೆಚ್ಚಿನ ಅಂಗವೈಕಲ್ಯ ಹೊಂದಿರುವ ವಿಶೇಷಚೇತನರು ಸೇರಿ ಒಟ್ಟು 8,010 ಮತದಾರರಿಗೆ ಮನೆಯಲ್ಲಿಯೇ ಮತದಾನ ಮಾಡುವ ಅವಕಾಶ ಕಲ್ಪಿಸಲಾಗಿದ್ದು, ಸೋಮವಾರದವರೆಗೆ 5,011 ಹಿರಿಯ ನಾಗರಿಕರು ಹಾಗೂ 1,647 ವಿಶೇಷ ಚೇತನರು ಸೇರಿ ಒಟ್ಟು 6,658 ಮತದಾರರು ಮತ ಚಲಾಯಿಸಿದ್ದಾರೆ. ರಾಜ್ಯದಲ್ಲಿಯೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಹಿರಿಯ ನಾಗರಿಕರು ಹಾಗೂ ವಿಕಲಚೇತನರು ಮನೆಯಲ್ಲಿಯೇ ಮತದಾನ ಮಾಡುವ ಪ್ರಕ್ರಿಯೆಯನ್ನು ಆಯ್ಕೆ ಮಾಡಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ತಿಳಿಸಿದ್ದಾರೆ.ಹಿರಿಯ ನಾಗರಿಕರು ಮತ್ತು ವಿಶೇಷ ಚೇತನರು ಮತಗಟ್ಟೆಗೆ ತೆರಳಿ ಮತ ಚಲಾಯಿಸುವ ಬದಲಿಗೆ ಮನೆಯಲ್ಲಿಯೇ ತಮಗೆ ಮತದಾನದ ಅವಕಾಶ ನೀಡಿದ್ದಕ್ಕಾಗಿ ಸಂತಸ ಹಂಚಿಕೊಂಡಿದ್ದಾರೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರೂ ಆಗಿರುವ ಆನಂದ್ ಕೆ. ಸಂತಸ ವ್ಯಕ್ತಪಡಿಸಿದ್ದಾರೆ.ಜಿಲ್ಲಾ ಚುನಾವಣಾಧಿಕಾರಿ ಪರಿಶೀಲನೆ:
ಈ ವರ್ಗದ ಮತದಾರರ ಮನೆ ಮತದಾನ ಕಾರ್ಯವು ಪ್ರತಿದಿನ ಬೆಳಗ್ಗೆ 7ರಿಂದ ಆರಂಭಗೊಳ್ಳುತ್ತಿದ್ದು, ನಿಗದಿಪಡಿಸಲಾದ ಮಾರ್ಗದಂತೆಯೇ ಸಾಗುತ್ತಿದೆ. ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ನಗರದ ಪಾಂಡೇಶ್ವರ ಹಾಗೂ ಕುದ್ರೋಳಿ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಹೋಮ್ ವೋಟಿಂಗ್ ಕಾರ್ಯವನ್ನು ಖುದ್ದು ಪರಿಶೀಲಿಸಿ, ಮತದಾರರ ಸ್ಪಂದನೆ ಹಾಗೂ ಚುನಾವಣಾ ಸಿಬ್ಬಂದಿ ಕಾರ್ಯವನ್ನು ಶ್ಲಾಘಿಸಿದರು.