ಸಾರಾಂಶ
ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಪರ ಪುತ್ರ ನಿಖಿಲ್‌ಕುಮಾರಸ್ವಾಮಿ ತಾಲೂಕಿನ ಹಲವೆಡೆ ಪ್ರಚಾರ ನಡೆಸಿದ್ದಾರೆ. ಈ ವಿಷಯ ಪ್ರಚಾರಸಭೆ ಮುಕ್ತಾಯಗೊಂಡ ಬಳಿಕ ನಮ್ಮ ಗಮನಕ್ಕೆ ಬಂದಿದೆ. ನಮ್ಮನ್ನು ದೂರವಿಟ್ಟು ಪ್ರತ್ಯೇಕವಾಗಿ ಪ್ರಚಾರ ಸಭೆ ನಡೆಸುತ್ತಿದ್ದಾರೆಂಬುದು ಗೊತ್ತಿಲ್ಲ. ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಪಕ್ಷದ ಜಿಲ್ಲಾಧ್ಯಕ್ಷರು ಮತ್ತು ರಾಜ್ಯದ ನಾಯಕರ ಗಮನಕ್ಕೆ ತಂದಿದ್ದೇವೆ.
ಕನ್ನಡಪ್ರಭ ವಾರ್ತೆ ನಾಗಮಂಗಲ
ಸ್ಥಳೀಯ ಜೆಡಿಎಸ್ ನಾಯಕರು ನಮ್ಮನ್ನು ಯಾವೊಂದು ಸಭೆ ಸಮಾರಂಭಗಳಿಗೆ ಕರೆಯದೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡರ ಪುತ್ರ ಹಾಗೂ ಬಿಜೆಪಿ ಮುಖಂಡ ಎಲ್.ಎಸ್.ಚೇತನ್‌ಗೌಡ ಬೇಸರ ವ್ಯಕ್ತಪಡಿಸಿದರು.ತಾಲೂಕಿನ ಕಂಬದಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಧರ್ಮ ಪಾಲನೆ- ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಗೆಲುವಿಗೆ ಪೂರಕವಾಗಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ತಾಲೂಕಿನಾದ್ಯಂತ ಪ್ರಾಮಾಣಿಕವಾಗಿ ಪ್ರಚಾರ ನಡೆಸುತ್ತಿದ್ದೇವೆ. ಆದರೆ, ಬಿಜೆಪಿ ಬೆಳೆಯುತ್ತದೆ ಎಂಬ ಕಾರಣಕ್ಕೆ ಸ್ಥಳೀಯ ಜೆಡಿಎಸ್ ನಾಯಕರು ಚುನಾವಣೆಗೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮಗಳನ್ನು ನಮ್ಮ ಗಮನಕ್ಕೆ ಬಾರದಂತೆ ನಡೆಸುತ್ತಿದ್ದಾರೆ ಎಂದು ಮಾಜಿ ಶಾಸಕ ಸುರೇಶ್‌ಗೌಡ ವಿರುದ್ಧ ದೂರಿದರು.
ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಜೆಡಿಎಸ್ ನಾಯಕರು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಈ ಬಗ್ಗೆ ಹಲವು ಬಾರಿ ನಮ್ಮ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ, ಅಭ್ಯರ್ಥಿ ಎಚ್ಡಿಕೆ ಅವರ ಗಮನಕ್ಕೂ ತಂದಿದ್ದೇವೆ. ಆದರೂ ಉದಾಸೀನ ತೋರುತ್ತಿದ್ದಾರೆ ಎಂದರು.ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಪರ ಪುತ್ರ ನಿಖಿಲ್‌ಕುಮಾರಸ್ವಾಮಿ ತಾಲೂಕಿನ ಹಲವೆಡೆ ಪ್ರಚಾರ ನಡೆಸಿದ್ದಾರೆ. ಈ ವಿಷಯ ಪ್ರಚಾರಸಭೆ ಮುಕ್ತಾಯಗೊಂಡ ಬಳಿಕ ನಮ್ಮ ಗಮನಕ್ಕೆ ಬಂದಿದೆ. ನಮ್ಮನ್ನು ದೂರವಿಟ್ಟು ಪ್ರತ್ಯೇಕವಾಗಿ ಪ್ರಚಾರ ಸಭೆ ನಡೆಸುತ್ತಿದ್ದಾರೆಂಬುದು ಗೊತ್ತಿಲ್ಲ. ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಪಕ್ಷದ ಜಿಲ್ಲಾಧ್ಯಕ್ಷರು ಮತ್ತು ರಾಜ್ಯದ ನಾಯಕರ ಗಮನಕ್ಕೆ ತಂದಿದ್ದೇವೆ ಎಂದರು.
ಈ ವೇಳೆ ತಾಲೂಕು ಬಿಜೆಪಿ ಅಧ್ಯಕ್ಷ ಸೋಮಶೇಖರ್, ಮುಖಂಡರಾದ ತೊಳಲಿ ಕೃಷ್ಣಮೂರ್ತಿ, ನರೇಂದ್ರ, ಸುರೇಶ್‌ಉಪ್ಪಾರ್ ಸೇರಿದಂತೆ ಹಲವರು ಇದ್ದರು.