ಸಾರಾಂಶ
ಸಿಂಧನೂರಿನ ಸಂಗಮ್ ಪ್ಯಾಲೇಸ್ ಬಳಿ ಲಾರಿ-ಕಾರು ನಡುವೆ ಡಿಕ್ಕಿ ಸಂಭವಿಸಿ ಕಾರು ಜಖಂಗೊಂಡಿದೆ. ಕವಿತಾಳ ಬಳಿಯಿರುವ ಗೋಲದಿನ್ನಿ ಗ್ರಾಮದ ನಿವಾಸಿಗಳಾದ ವೀರೇಶ ಮತ್ತು ಸಹನಾ ಮೃತ ದಂಪತಿಯಾಗಿದ್ದಾರೆ.
ಸಿಂಧನೂರು: ನಗರದ ರಾಯಚೂರು ರಸ್ತೆಯಲ್ಲಿರುವ ಸಂಗಮ್ ಪ್ಯಾಲೇಸ್ ಬಳಿ ಲಾರಿ ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ಸೋಮವಾರ ಬೆಳಗಿನ ಜಾವ ನಡೆದಿದೆ.
ಕವಿತಾಳ ಬಳಿಯಿರುವ ಗೋಲದಿನ್ನಿ ಗ್ರಾಮದ ನಿವಾಸಿಗಳಾದ ವೀರೇಶ (42) ಮತ್ತು ಸಹನಾ (38) ಮೃತ ದಂಪತಿ. ಇವರೊಂದಿಗೆ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ಇವರ ಪುತ್ರ ಕುಶಾಲ ಪಾಟೀಲ್ (10)ಗೆ ಸಣ್ಣಪುಟ್ಟ ಗಾಯಗಳಾಗಿವೆ. ವೀರೇಶ ಅವರ ಸಹೋದರಿಯ ಪುತ್ರಿ ವಿನೂತ ಕಾಲು ಮುರಿದಿದ್ದು, ಸಿಂಧನೂರು ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರು ಚಾಲಕ ಮಹ್ಮದ್ ಹನೀಫ್ ಅವರಿಗೂ ತೀವ್ರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.ಏ.21ರಂದು ವೀರೇಶ ಅವರ ಅಕ್ಕನ ಮಗಳಾದ ವಿನೂತ ಮದುವೆ ನಿಶ್ಚಯವಾಗಿದ್ದು, ಅದರ ನಿಮಿತ್ತ ಭಾನುವಾರ ಹಂಪಿ ಮತ್ತು ಹೊಸಪೇಟೆಯಲ್ಲಿ ಫ್ರೀ ವೆಡ್ಡಿಂಗ್ ಶೂಟ್ ಮುಗಿಸಿಕೊಂಡು, ವಾಪಾಸ್ ಗೋಲದಿನ್ನಿ ಗ್ರಾಮಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ರಾಯಚೂರು ಕಡೆಯಿಂದ ಬಂದ ಲಾರಿಯು ಸಿಂಧನೂರಿನ ಸಂಗಮ್ ಪ್ಯಾಲೇಸ್ ಬಳಿ ಕಾರಿಗೆ ಡಿಕ್ಕಿ ಹೊಡೆದಿದ್ದರಿಂದ ಈ ದುರ್ಘಟನೆ ನಡೆದಿದೆ. ಲಾರಿ ಉತ್ತರಪ್ರದೇಶದ ಫೀರೋಜಾಬಾದ್ ಮೂಲದ್ದಾಗಿದ್ದು ಚಾಲಕ ನಂದಸಿಂಗ್ ಪೊಲೀಸರ ವಶದಲ್ಲಿದ್ದಾನೆ. ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.