ಕನ್ನಡಪ್ರಭ ವಾರ್ತೆ ಜಮಖಂಡಿ
ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ನಕಲಿ ಪಿಎಚ್‌ಡಿ ಪದವಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ಖಾಲಿ ಇರುವ ಅಧ್ಯಾಪಕರ ಹುದ್ದೆ ಕೂಡಲೇ ಭರ್ತಿ ಮಾಡಬೇಕು ಎಂದು ಆಗ್ರಹಿಸಿ ಶುಕ್ರವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವತಿಯಿಂದ ನಗರದ ಎ.ಜಿ. ದೇಸಾಯಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ನಕಲಿ ಪಿಎಚ್‌ಡಿ ಪದವಿ ಹೊಂದಿರುವ ವ್ಯಕ್ತಿಗಳು ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಆರೋಪಗಳು ಕೇಳಿಬರುತ್ತಿವೆ. ಜಮಖಂಡಿ ಸೇರಿದಂತೆ ಹಾವೇರಿ, ಯಾದಗಿರಿ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈ ರೀತಿಯ ಪ್ರಕರಣಗಳು ಬೆಳಕಿಗೆ ಬಂದಿವೆ. ಸರ್ಕಾರ ಕೂಡಲೇ ತನಿಖೆ ನಡೆಸಬೇಕು. ನಕಲಿ ಪದವೀಧರರು ರಾಜೀನಾಮೆ ನೀಡಿ ತಪ್ಪಿಸಿಕೊಳ್ಳುತ್ತಿದ್ದು, ಅಂಥವರ ವಿರುದ್ಧ ಕ್ರಮ ಜರುಗಿಸಬೆಕೆಂದು ಆಗ್ರಹಿದರು. ನಕಲಿ ಪಿಎಚ್‌ಡಿ ಪದವಿ ನೀಡುತ್ತಿರುವ ಜಾಲ ಪತ್ತೆಹಚ್ಚಿ, ಸಂಬಂಧಪಟ್ಟವರ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಶಿಸ್ತು ಮತ್ತು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ರಾಜ್ಯದ 32 ವಿಶ್ವವಿದ್ಯಾಲಯಗಳಲ್ಲಿ ಒಟ್ಟು 9,292 ಬೋಧಕ ಮತ್ತು ಬೋಧಕೇತರ ಹುದ್ದೆಗಳು ಹಾಗೂ ಐದು ಉಪಕುಲಪತಿಗಳ ಹುದ್ದೆಗಳು ಖಾಲಿ ಇದ್ದು, ಸರ್ಕಾರ ಕೂಡಲೇ ನೇಮಕಾತಿ ನಡೆಸಬೇಕು ಹಾಗೂ ವಿಶ್ವವಿದ್ಯಾಲಯಗಳಿಗೆ ಅಗತ್ಯವಾದ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಪತ್ರಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಬಿವಿಪಿ ರಾಜ್ಯ ಸಂಚಾಲಕ ರಾಕೇಶ ಗುರವ, ನಗರ ಕಾರ್ಯದರ್ಶಿ ಪರಶುರಾಮ ಜಿಟ್ಟಿ ,ಪುಂಡಲೀಕ ಪೂಜಾರಿ, ಈರಣ್ಣ ಬುದ್ನಿ, ಸಿಕ್ರೂ ನ್ಯಾಮಗೌಡ ,ಅಲೋಕ್ ದಳವಾಯಿ, ಮಹೇಶ ಸಿಂಧೂರ ಬಸಯ್ಯ , ಸಂಕೇತ, ದರೆಪ್ಪ, ಲಕ್ಷ್ಮೀ ಬಬಲೇಶ್ವರ ಇತರರು ಇದ್ದರು. ಕಂದಾಯ ಅಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.