ಸಾರಾಂಶ
ಯಲ್ಲಟ್ಟಿಯ ಕೊಣ್ಣೂರ ವಿಜ್ಞಾನ ಮತ್ತು ವಾಣಿಜ್ಯ ಪಿಯು ಕಾಲೇಜಿನಲ್ಲಿ ಫ್ರೇಶರ್ಸ್ ಡೇ ಕಾರ್ಯಕ್ರಮಕ್ಕೆ ಡಾ.ಜಿ. ಪೂರ್ಣಿಮಾ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಬದುಕಿನಲ್ಲಿ ಒದಗಿ ಬಂದ ಅದೃಷ್ಟದ ಬಾಗಿಲನ್ನು ನಾವು ತೆರೆಯಲು ಪ್ರಯತ್ನಿಸಬೇಕು. ಇಲ್ಲದಿದ್ದರೆ ನಿಮ್ಮ ಕನಸುಗಳು ಕನಸಾಗಿಯೇ ಉಳಿಯುತ್ತವೆ. ಕಷ್ಟಗಳ ಮಧ್ಯೆ ಬದುಕುವುದನ್ನು ಕಲಿತರೆ ಸಂತೋಷದ ಕ್ಷಣಗಳು ನಮ್ಮನ್ನು ಹುಡುಕಿಕೊಂಡು ಬರುತ್ತವೆ. ಸಾಧನೆ ಸಾಧಕನ ಸೊತ್ತು, ಹೊರತು ಸೋಮಾರಿಯಲ್ಲ ಎಂದು ಬೀದರಿನ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಸಂಸ್ಥಾಪಕಿ ಡಾ.ಜಿ. ಪೂರ್ಣಿಮಾ ಹೇಳಿದರು.ಕೊಣ್ಣೂರ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಶರ್ಸ್ ಡೇ–೨೦೨೪ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು. ಮಾತೃಭಾಷೆ ಚೆನ್ನಾಗಿ ಕಲಿತವನು ಉಳಿದ ಎಲ್ಲ ಭಾಷೆ ಚೆನ್ನಾಗಿ ಕಲಿಯುತ್ತಾನೆ. ವಿದ್ಯಾರ್ಥಿಗಳು ಪ್ರಾಮಾಣಿಕತೆ ಬೆಳೆಸಿಕೊಳ್ಳಿ, ಪ್ರಾಮಾಣಿಕತೆ ನಿಮಗೆ ಅರಿವಿಲ್ಲದೆ ನಿಮ್ಮ ಗೌರವ ಹೆಚ್ಚಿಸುತ್ತೆ, ಒಳೆಯದನ್ನು ಮಾಡಿ ಒಳ್ಳೆಯತನ ಎಲ್ಲ ಕಾಲಕ್ಕೂ ಸಲ್ಲುವಂತಹದು ಎಂದು ಹಿರಿಯ ಸಾಹಿತಿ ಸಿದ್ಧರಾಜ ಪೂಜಾರಿ ಹೇಳಿದರು.
ಪರಿಶ್ರಮ ಮತ್ತು ನಿರಂತರ ಅಭ್ಯಾಸ ನಿಮ್ಮನ್ನು ಸಾಧನೆ ಮಾರ್ಗದತ್ತ ಕರೆದೊಯ್ಯುತ್ತದೆ. ಪ್ರತಿ ದಿನವೂ ಶುಭ ದಿನ ಪ್ರತಿಕ್ಷಣ ವ್ಯರ್ಥ ಮಾಡದೇ ಅಧ್ಯಯನದಲ್ಲಿ ತೊಡಗಿಕೊಂಡಾಗ ನೀಟ್ ಮತ್ತು ಜೆ.ಇ.ಇ ಅಂತಹ ರಾಷ್ಟ್ರಮಟ್ಟದ ಪರೀಕ್ಷೆ ಎದುರಿಸಲು ಸಾಧ್ಯ ಎಂದು ಸಂಸ್ಥಾಪಕ ಅಧ್ಯಕ್ಷ, ಪ್ರಾಚಾರ್ಯ ಪ್ರೊ.ಬಿ.ಕೆ. ಕೊಣ್ಣೂರ ಅಭಿಪ್ರಾಯ ವ್ಯಕ್ತಪಡಿಸಿದರು.ಈ ಸಂದಂರ್ಭದಲ್ಲಿ ೨೦೨೩-೨೪ನೇ ಸಾಲಿನ ನೀಟ್ ಹಾಗೂ ಜೆ.ಇ.ಇ ಸಾಧಕರನ್ನು ಮತ್ತು ಪಿಯು ಬೋರ್ಡ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ೮ನೇ ರ‍್ಯಾಂಕ್ ಬಂದ ಸಾಧಕನನ್ನು ಸತ್ಕರಿಸಲಾಯಿತು, ವಿದ್ಯಾರ್ಥಿಗಳಿಂದ ಅನಿಸಿಕೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿದವು.
ಪ್ರಾಚಾರ್ಯ ಪ್ರೊ.ಬಿ.ಕೆ ಕೊಣ್ಣೂರ, ಡಾ. ಪೂರ್ಣಿಮಾ ಜಿ, ಉಪಾಧ್ಯಕ್ಷ ನಿಖಿಲ ಕೊಣ್ಣೂರ, ಆಡಳಿತಾಧಿಕಾರಿ ಶೀತಲ್ ಕೊಣ್ಣೂರ, ಉಪಪ್ರಾಚಾರ್ಯ ಶಿವಾನಂದ ಕಂದಗಲ್ ಮತ್ತು ಮಹಾವಿದ್ಯಾಲಯದ ಉಪನ್ಯಾಸಕ ಉಪಸ್ಥಿತರಿದ್ದರು.