ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲೆಯ ಪ್ರಗತಿಗೆ ಸಂಬಂಧಿಸಿದಂತೆ ಹಲವು ಯೋಜನೆಗಳನ್ನು ರೂಪಿಸಿ ಜಾರಿಗೊಳಿಸುವ ಸಲುವಾಗಿ ಅಭಿವೃದ್ಧಿ ಪಟ್ಟಿಯೊಂದನ್ನು ಸಿದ್ಧಪಡಿಸಲಾಗಿದ್ದು, ಶುಕ್ರವಾರ ನಡೆಯುವ ಜನಸ್ಪಂದನ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ನೀಡಲಾಗುವುದು ಎಂದು ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷ ಡಾ.ಎಚ್.ಎನ್.ರವೀಂದ್ರ ಹೇಳಿದರು.ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ವಿವಿಧ ಸಂಘಟನೆಗಳ ಮುಖಂಡರೊಂದಿಗೆ ಸಭೆ ನಡೆಸಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಗಮನಕ್ಕೆ ತರುವ ನಿಟ್ಟಿನಲ್ಲಿ ರೂಪಿಸಬಹುದಾದ ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚೆ ನಡೆಸಿದರು. ರೈತರಿಗಾಗಿ ಹೊಸ ಕಾರ್ಯಕ್ರಮ, ಕೃಷಿ ಆಧಾರಿತ ಕೈಗಾರಿಕೆಗಳ ಸ್ಥಾಪನೆ, ಇಎಸ್‌ಐ ಆಸ್ಪತ್ರೆ, ಉದ್ಯೋಗ ಸೃಷ್ಟಿ, ಮೈಷುಗರ್ ಪುನಶ್ಚೇತನ ಸೇರಿ ಹಲವು ಕಾರ್ಯಕ್ರಮಗಳ ಪಟ್ಟಿ ತಯಾರಿಸಲಾಗಿದ್ದು, ಅವರಿಗೆ ಈ ಅಭಿವೃದ್ಧಿಪಟ್ಟಿಯನ್ನು ಸಲ್ಲಿಸಿ ಜಾರಿಗೆ ಒತ್ತಾಯಿಸಲಾಗುವುದು ಎಂದರು.
ಕುಮಾರಸ್ವಾಮಿ ಅವರಿಗೆ ಜಿಲ್ಲೆಯ ಜನರ ಬಗ್ಗೆ ಅಪಾರ ಪ್ರೀತಿ ಇದೆ. ಅದಕ್ಕಾಗಿ ವಿಶೇಷ ಒತ್ತು ನೀಡಿ ಅಭಿವೃದ್ಧಿಪಡಿಸುವರೆಂಬ ಭರವಸೆ ಇದೆ. ಅದಕ್ಕಾಗಿ ದೊಡ್ಡ ಕೊಡುಗೆ ನೀಡುವ ವಿಶ್ವಾಸವಿದೆ ಎಂದರು.ಇತ್ತೀಚೆಗೆ ಟಾಂಗ್ ಕೊಡುವ ರಾಜಕಾರಣ ನಡೆಯುತ್ತಿದೆ. ಇಲ್ಲಿಯವರೆಗೆ ಅಧಿಕಾರದ ರಾಜಕಾರಣ ಮಾಡಿಕೊಂಡು ಬಂದಿರುವುದರಿಂದಲೇ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗಿದೆ. ನಾಲೆ ಆಧುನೀಕರಣ ಕಾಮಗಾರಿ ಹೆಸರಲ್ಲಿ ನೀರು ಬಿಟ್ಟಿಲ್ಲ. ನಾಲೆಗಳಿಗೆ ನೀರು ಹರಿಸುವ ಹೆಚ್ಚುವರಿಯಾಗಿ 4 ಗಂಟೆ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ನೀಡುವ ಬಗ್ಗೆ ಆಲೋಚಿಸದೆ ಏರ್‌ಪೋರ್ಟ್ ಬಗ್ಗೆ ಚರ್ಚೆ ಮಾಡುತ್ತಾರೆ ಎಂದು ಟೀಕಿಸಿದರು.
ಸಭೆಯಲ್ಲಿ ಸಾಹಿತಿ ಪ್ರೊ.ಜಿ.ಟಿ.ವೀರಪ್ಪ, ಹೋರಾಟಗಾರ ಎಂ.ಬಿ.ನಾಗಣ್ಣ, ವಕೀಲರಾದ ಬಿ.ಟಿ.ವಿಶ್ವನಾಥ್, ಕಬ್ಬುಬೆಳೆಗಾರರ ಸಂಘದ ಅಧ್ಯಕ್ಷ ಕೃಷ್ಣ ಸೇರಿ ಹಲವರು ಭಾಗಿಯಾಗಿದ್ದರು.ಇಂದು, ನಾಳೆ ನೀರು ಸರಬರಾಜು ವ್ಯತ್ಯಯ
ಮಂಡ್ಯ: ನಗರದ ಮಹಾವೀರ ಸರ್ಕಲ್ ಸಮೀಪ 700 ಮಿ ಮೀ. ವ್ಯಾಸದ ಎಂ.ಎಸ್.ನೀರು ಸರಬರಾಜು ಕೊಳವೆ ಮಾರ್ಗದಲ್ಲಿ ಗಣನೀಯ ಪ್ರಮಾಣದಲ್ಲಿ ನೀರು ಸೋರುವಿಕೆ ಕಂಡು ಬಂದಿದೆ. ಸದರಿ ಕೊಳವೆ ಮಾರ್ಗದ ದುರಸ್ಥಿ ಕಾಮಗಾರಿ ನಡೆಯುತ್ತಿದ್ದು, ಜುಲೈ 5 ಮತ್ತು 6 ರಂದು ನೀರನ್ನು ಪಂಪು ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಮಂಡ್ಯ ನಗರದ ಸಾರ್ವಜನಿಕರಿಗೆ ಜುಲೈ 5 ಮತ್ತು 6 ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ನೀರು ಬಂದ ವೇಳೆ ಶೇಖರಿಸಿಟ್ಟುಕೊಂಡು ಜಲಮಂಡಳಿಯೊಂದಿಗೆ ಸಹಕರಿಸಬೇಕೇಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.ವಿಕಲಚೇತನರಿಂದ ಅರ್ಜಿ ಆಹ್ವಾನನಾಗಮಂಗಲ: ತಾಲೂಕಿನ ಬೆಳ್ಳೂರು ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಅನುಷ್ಠಾನಗೊಂಡಿರುವ ಮುಖ್ಯಮಂತ್ರಿಗಳ ಅಮೃತ್ ನಗರೋತ್ಥಾನ (ಮುನ್ಸಿಪಾಲಿಟಿ) ಹಂತ-4 ರಲ್ಲಿನ ವಿಕಲಚೇತನರ ಕಲ್ಯಾಣ ಕಾರ್ಯಕ್ರಮದಡಿ ಪಪಂ ವ್ಯಾಪ್ತಿಯಲ್ಲಿನ ವಿಕಲಚೇತನರ ವ್ಯಕ್ತಿಗತ ಅನುಕೂಲಕ್ಕಾಗಿ ವಾಹನ ಮತ್ತು ಇತರ ಸಲಕರಣೆಗಳನ್ನು ಒದಗಿಸಲು ವಿಶೇಷ ಚೇತನ ವ್ಯಕ್ತಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು ಜುಲೈ 20ರೊಳಗೆ ಜಾತಿ ಮತ್ತು ಆದಾಯ ದೃಢೀಕರನ ಪತ್ರ, ಆಧಾರ್ ಕಾರ್ಡ್, ಭಾವಚಿತ್ರ-2, ಇತರೆ ಸೌಲಭ್ಯ ಸಂಬಂಧಿತ ದಾಖಲಾತಿಗಳೊಂದಿಗೆ ಬೆಳ್ಳೂರು ಪಪಂ ಕಚೇರಿಗೆ ಸಲ್ಲಿಸುವಂತೆ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.