ಕನ್ನಡಪ್ರಭ ವಾರ್ತೆ ತುಮಕೂರು

ವಿದ್ಯಾರ್ಥಿಗಳು ತಮ್ಮ ಕುಟುಂಬದ ಹಿನ್ನೆಲೆ, ತಂದೆ ತಾಯಿಯ ಆಶಯವನ್ನು ಪದೇ ಪದೇ ಮೆಲುಕು ಹಾಕಿಕೊಳ್ಳಬೇಕು. ಇದರಿಂದ ತಾವು ಗುರಿ ಸಾಧಿಸಲು ಪ್ರೇರಣೆಯಾಗುತ್ತದೆ. ಹೆತ್ತವರ ಕಷ್ಟ, ಕನಸುಗಳನ್ನು ಸಾಕಾರಗೊಳಿಸಿ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬಹುದು ಎಂದು ವಿಧಾನ ಪರಿಷತ್ ಸದಸ್ಯ ಡಿ.ಟಿ. ಶ್ರೀನಿವಾಸ್ ಹೇಳಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆ, ಜಿಲ್ಲಾ ಪ್ರಾಚಾರ್ಯರ ಸಂಘ ಹಾಗೂ ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯ ಸಹಯೋಗದಲ್ಲಿ ಭಾನುವಾರ ನಗರದ ಶ್ರೀದೇವಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ಪ್ರಾಚಾರ್ಯರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ ತಂದೆ, ತಾಯಿಯ ಕನಸಿನೊಂದಿಗೆ ಪ್ರಯಾಣ ಮಾಡಿದರೆ ಉನ್ನತ ಸ್ಥಾನದೊಂದಿಗೆ ಸಂಸ್ಕಾರವಂತ ಪ್ರಜೆಗಳಾಗಿ ರೂಪುಗೊಳ್ಳುವಿರಿ ಎಂದರು. ಹದಿಹರೆಯದ ವಿದ್ಯಾರ್ಥಿಗಳು ತಮ್ಮ ಮನಸ್ಸು ಚಂಚಲವಾಗಲು ಬಿಡದೆ ಗುರಿ ಸಾಧನೆ ಪೂರಕವಾಗಿ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು, ಅಧ್ಯಯನ, ಜ್ಞಾನಾರ್ಜನೆ ಆದ್ಯತೆಯಾಗಬೇಕು. ತಂತ್ರಜ್ಞಾನ ಬಳಕೆಯಿಂದ ಒಳ್ಳೆಯದು, ಕೆಟ್ಟದು ಸಿಗುತ್ತದೆ. ಒಳ್ಳೆಯದನ್ನು ಮಾತ್ರ ಬಳಸಿಕೊಂಡರೆ ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಬಹುದು. ಈ ವಯಸ್ಸಿನಲ್ಲಿ ವಿದ್ಯಾರ್ಥಿಗಳು ತಂದೆತಾಯಿಯ, ಹಿರಿಯರ, ಅನುಭವಿಗಳ ಮಾರ್ಗದರ್ಶನ ಪಡೆಯಬೇಕು, ಸರಿಯಾದುದನ್ನೇ ಆಯ್ಕೆ ಮಾಡಿಕೊಳ್ಳುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಡಿ.ಟಿ. ಶ್ರೀನಿವಾಸ್ ಹೇಳಿದರು.

ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಕ್ಷೇತ್ರ ಆಯ್ಕೆ ಮಾಡಿಕೊಳ್ಳಲು ಪಿಯುಸಿ ಪ್ರಮುಖ ಘಟ್ಟ. ಈ ಅವಧಿಯಲ್ಲಿ ಸರಿಯಾದ ಆಯ್ಕೆ ಮಾಡಿಕೊಳ್ಳಬೇಕು. ಪಿಯೂಸಿ ನಂತರ ಕೇವಲ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಮಾತ್ರವಲ್ಲ, ಹಲವಾರು ಕ್ಷೇತ್ರಗಳಲ್ಲಿ ವಿಶಾಲವಾದ ಅವಕಾಶಗಳಿವೆ. ಅವುಗಳಲ್ಲಿ ತಮ್ಮ ಆಸಕ್ತಿಗೆ ಪೂರಕವಾದ ಕ್ಷೇತ್ರ ಆಯ್ಕೆ ಮಾಡಿಕೊಳ್ಳಿ ಎಂದು ಸಲಹೆ ಮಾಡಿದರು.


ಪರೀಕ್ಷೆಯ ಅಂಕವೇ ವಿದ್ಯಾರ್ಥಿಯ ಪ್ರತಿಭೆಗೆ ಮಾನದಂಡವಲ್ಲ, ಅಂಕಗಳ ಜೊತೆಗೆ ಕೌಶಲ್ಯ, ಕ್ರಿಯಾಶೀಲತೆಯನ್ನು ಬೆಳೆಸಿಕೊಳ್ಳಬೇಕು. ಈಗ ಕೌಶಲ್ಯಕ್ಕೆ ಹೆಚ್ಚು ಬೆಲೆ. ಉಪನ್ಯಾಸಕರು ಕೂಡಾ ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಕೌಶಲ್ಯ ವೃದ್ಧಿ ವಿಚಾರಗಳನ್ನು ಹೇಳಿಕೊಡಬೇಕು. ಈಗ ಯಾವ ಉದ್ಯೋಗವೂ ಸುರಕ್ಷತೆ ಅಲ್ಲ ಎನ್ನುವಂತಹ ಕಾಲಘಟ್ಟದಲ್ಲಿ ಕೌಶಲ್ಯ ರೂಢಿಸಿಕೊಂಡರೆ ಭವಿಷ್ಯದ ಸುರಕ್ಷತೆ ಕಾಣಬಹುದು ಎಂದರು.

ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರೂ ವಿಧಾನ ಪರಿಷತ್ ಮಾಜಿ ಸದಸ್ಯರಾದ ಡಾ.ಎಂ.ಆರ್. ಹುಲಿನಾಯ್ಕರ್ ಸಮಾರಂಭದ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳಿಗೆ ಅಧ್ಯಯನವೇ ಆದ್ಯತೆ ಆಗಬೇಕು. ಅನ್ಯ ವಿಚಾರಗಳಿಗೆ ಗಮನಹರಿಸದೆ ಶ್ರದ್ಧೆ, ಪರಿಶ್ರಮದಿಂದ ಗುರಿ ಸಾಧಿಸುವ ಕಡೆ ಯೋಚಿಸಬೇಕು. ಈಗ ನಿರ್ಲಕ್ಷ್ಯ ಮಾಡಿದರೆ ಮುಂದೆ ಉತ್ತಮ ಭವಿಷ್ಯ ಕಳೆದುಕೊಳ್ಳುವ ಅಪಾಯವಿದೆ ಎಂದು ಹೇಳಿದರು.

ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎಂ.ಎಸ್. ರಾಧಾ ಜಿಲ್ಲಾ ಪ್ರಾಚಾರ್ಯರ ಸಂಘದ ಅಧ್ಯಕ್ಷ ನೇ.ರಂ. ನಾಗರಾಜ, ಕಾರ್ಯದರ್ಶಿ ಸತೀಶ್ ಸಿ.ಜಿ, ಖಜಾಂಚಿ ಎಂ.ಡಿ. ಶಿವಕುಮಾರ್, ರಾಜ್ಯ ಪ್ರತಿನಿಧಿ ಚಂದ್ರಯ್ಯ, ಅನುದಾನಿತ ಪದವಿಪೂರ್ವ ಕಾಲೇಜುಗಳ ಒಕ್ಕೂಟದ ಅಧ್ಯಕ್ಷ ಆರ್. ಪರಮೇಶ್ವರಪ್ಪ, ರಾಜ್ಯ ಪದವಿ ಪೂರ್ವ ಕಾಲೇಜುಗಳ ದೈಹಿಕ ಉಪನ್ಯಾಸಕರ ಸಂಘದ ಅಧ್ಯಕ್ಷ ಬಸವರಾಜು, ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಕೆ.ಜೆ. ಕುಮಾರ್, ಅನುದಾನರಹಿತ ಪ.ಪೂ. ಕಾಲೇಜುಗಳ ಒಕ್ಕೂಟದ ಅಧ್ಯಕ್ಷ ರವಿಕುಮಾರ್, ಶಾರದಾಂಬ ಪ.ಪೂ. ಕಾಲೇಜು ಆಡಳಿತಾಧಿಕಾರಿ ಲಕ್ಷ್ಮೀಕಾಂತ್, ಸಮಾಜ ಸೇವಕ ಶಶಿಹುಲಿಕುಂಟೆಮಠ್ ಸೇರಿದಂತೆ ವಿವಿಧ ಕಾಲೇಜುಗಳ ಪ್ರಾಚಾರ್ಯರು ಭಾಗವಹಿಸಿದ್ದರು. ಈ ವೇಳೆ ನಿವೃತ್ತರಾದ ಪ್ರಾಚಾರ್ಯರನ್ನು ಸನ್ಮಾನಿಸಿ ಅವರ ಸೇವೆ ಗೌರವಿಸಲಾಯಿತು.