- ಸೋಮಶೇಖರ ಶಿವಾಚಾರ್ಯ ಶ್ರೀ ಸಲಹೆ । ನೊಳಂಬ ಸಂಘದಿಂದ ಪುರಸ್ಕಾರ, ಸನ್ಮಾನ ಕಾರ್ಯಕ್ರಮ

- - -

ಕನ್ಕಡಪ್ರಭ ವಾರ್ತೆ ಹೊನ್ನಾ‍ಳಿ

ಪೋಷಕರು ತಮ್ಮ ಮಕ್ಕಳು ನೀಟ್ ಪರೀಕ್ಷೆ ಬರೆದು ಅತಿ ಹೆಚ್ಚು ಅಂಕಗಳ ಪಡೆಯಬೇಕೆಂಬ ನಿರೀಕ್ಷೆಯಲ್ಲಿ ಅವರನ್ನು ತಯಾರು ಮಾಡುತ್ತಿದ್ದಾರೆಯೇ ಹೊರತು, ಮಕ್ಕಳು ಭವಿಷ್ಯದ ಜೀವನದಲ್ಲಿ ನೀಟಾಗಿ ಬದುಕುವುದನ್ನು ಕಲಿಸುವ ಕಡೆಗೆ ತಲೆಕಡೆಸಿಕೊಳ್ಳುವುದಿಲ್ಲ ಎಂದು ಬೇಲೂರು ತಾಲೂಕಿನ ಹಳೇಬೀಡು ಶ್ರೀ ಪುಷ್ಪಗಿರಿ ಮಹಾಸಂಸ್ಥಾನದ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ದಾವಣಗೆರೆ ಜಿಲ್ಲಾ ನೊಳಂಬ ವೀರಶೈವ ಲಿಂಗಾಯತ ಸಂಘದಿಂದ ಭಾನುವಾರ ಹಿರೇಕಲ್ಮಠದ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜದ ಸಾಧಕರಿಗೆ ಹಾಗೂ ನಿವೃತ್ತ ಯೋಧರಿಗೆ ಸನ್ಮಾನ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.


ಒಂದು ಕಾಲದಲ್ಲಿ ಪೆನ್ನಿಗೆ ಮಹತ್ವ ಇತ್ತು, ನಂತರ ಮಾತಿಗೆ ಮಹತ್ವ ಬಂತ್ತು. ಆದರೆ ಇದೀಗ ವಾಯ್ಸ್‌ಗೆ (ಧ್ವನಿ) ಮಹತ್ವ ಬಂದಿದೆ. ಅಂದರೆ ಯಾವ ಸಮಾಜ ಅಥವಾ ಸಂಘಟನೆಗಳು ಅನ್ಯಾಯದ ವಿರುದ್ಧ ಅಥವಾ ನ್ಯಾಯದ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡುತ್ತವೆಯೋ ಆ ಸಂಘಟನೆಗಳು ಮಾತ್ರ ತಾವು ಅಂದುಕೊಂಡದ್ದನ್ನು ಸಾಧಿಸಲು ಸಾಧ್ಯ ಎಂದು ಸಂಘಟನೆಯ ಮಹತ್ವ ಕುರಿತು ಹೇಳಿದರು.

ಶಾಸಕ ಡಿ.ಜಿ.ಶಾಂತನಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಮ್ಮ ರಾಜಕೀಯ ಬೆಳವಣಿಗೆಯಲ್ಲಿ ನೊಳಂಬ ವೀರಶೈವ ಲಿಂಗಾಯತ ಸಮಾಜದ ಕೊಡುಗೆ ಅಪಾರವಾಗಿದೆ. ಮತದಾನ ನಿಮ್ಮ ಹಕ್ಕು, ಅದನ್ನು ಸರಿಯಾಗಿ ಬಳಸಿ ಕ್ಷೇತ್ರದ ಅಭಿವೃದ್ಧಿಗೆ ಕೈ ಜೋಡಿಸಬೇಕು. ಇದುವರೆಗೂ ಪಕ್ಷಾತೀತ, ಜಾತ್ಯತೀತ ಹಾಗೂ ವರ್ಗಾತೀತವಾಗಿ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡಿದ್ದೇನೆ ಎಂದು ಹೇಳಿದರು.

ಬಯಲುಸೀಮೆ ಪ್ರದೇಶ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್.ಬಿ.ಮಂಜಪ್ಪ ಮಾತನಾಡಿ, ಪ್ರತಿಭಾ ಪುರಸ್ಕಾರಗಳು ಸಾಧನೆಗೆ ಪ್ರೋತ್ಸಾಹ ನೀಡುತ್ತವೆ. ಪ್ರತಿಭೆ ಎನ್ನುವುದು ಜಾತಿ, ಮತ, ಧರ್ಮ, ಬಡವ, ಶ್ರಿಮಂತ ಎನ್ನುವ ಸೀಮೆಯನ್ನು ಮೀರಿದ್ದಾಗಿದೆ ಎಂದರು.

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾನಿಲಯ ಶಿವಮೊಗ್ಗದ ಉಪ ಕುಲಪತಿ ಡಾ. ಎಂ.ವಿ. ಧನಂಜಯ ಅವರು ಪ್ರಸ್ತುತ ಸಮಾಜದ ಸ್ಥಿತಿಗತಿಗಳ ಕುರಿತು ಮಾತನಾಡಿದರು. ನೊಳಂಬ ಸಂಘದ ಜಿಲ್ಲಾಧ್ಯಕ್ಷ ಡಾ. ಆಶೋಕ್ ಕುಮಾರ್ ವಿ.ಪಾಳೇದ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಸಂಘದ ನಿರ್ದೇಶಕ, ತಾಲೂಕು ಮುಖಂಡ ಬಸವನಗೌಡ ಸಣ್ಣಕ್ಕಿ, ಡಾ. ಈ. ವಿರೂಪಾಕ್ಷಪ್ಪ, ಹೈದರಾಬಾದ್ ನ ಉದ್ಯಮಿ ಪರಮೇಶ್ವರಪ್ಪ ಕಾಗಿನೆಲ್ಲಿ, ಸಾಹಿತಿ ಕತ್ತಿಗೆ ಚೆನ್ನಪ್ಪ ಮುಂತಾದವರು ಮಾತನಾಡಿದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ಸಾಧಕರಿಗೆ ಸನ್ಮಾನ, ನಿವೃತ್ತ ಯೋಧರಿಗೆ ಸಮಾಜದ ಗಣ್ಯರಿಂದ ಸನ್ಮಾನಿಸಲಾಯಿತು.

ಸಂಘದ ಕಾರ್ಯದರ್ಶಿ, ಡಾ. ಈ.ವಿರೂಪಾಕ್ಷಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ರಾಕೇಶ್ ಬಿ.ಸಿ., ಮಲ್ಲಿಕಾರ್ಜುನ ಹೆಗ್ಗೊಳ್ಳಿ ಟಿ.ಎ. ಕುಸಗಟ್ಟಿ, ಕಡದಕಟ್ಟೆ ಜಗದೀಶ್ ಸೇರಿದಂತೆ ನೊಳಂಬ ಸಮಾಜದ ಹಲವಾರು ಮುಖಂಡರು ಇದ್ದರು. ಜ್ಯೋತಿ ದೇವರಮನೆ ನಿರೂಪಿಸಿದರು.

- - -

(ಕೋಟ್‌) ಪ್ರತಿಭಾ ಪುರಸ್ಕಾರ ಮಾಡುತ್ತಾರೆ ಎನ್ನುವ ಕಾರಣಕ್ಕೆ ಯಾರೂ ವಿದ್ಯಾಭ್ಯಾಸ ಮಾಡುವುದಿಲ್ಲ. ಆದರೆ ಭವಿಷ್ಯದ ಉತ್ತಮ ಜೀವನಕ್ಕಾಗಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಾರೆ. ಪ್ರಸ್ತುತ ದಿನಗಳಲ್ಲಿ ಪ್ರತಿಭೆಯೊಂದೇ ಸಾಧನೆಗೆ ಮಾನದಂಡವಾಗಿದೆ.

- ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ.

- - -

-26ಎಚ್,ಎಲ್.ಐ1: ಕಾರ್ಯಕ್ರಮವನ್ನು ಶಾಸಕ ಡಿ.ಜಿ.ಶಾಂತನಗೌಡ ಉದ್ಘಾಟಿಸಿದರು. ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮೀಜಿ, ರೇಣುಕಾಚಾರ್ಯ, ಎಚ್‌.ಬಿ.ಮಂಜಪ್ಪ ಇತರರಿದ್ದರು.