ಐತಿಹಾಸಿಕ ಮದಗದಕೆರೆ ಅಭಿವೃದ್ಧಿಗೆ ಕ್ರಮ: ಕೆ.ಎಸ್.ಆನಂದ್
KannadaprabhaNewsNetwork | Published : Oct 06 2023, 12:07 PM IST
ಐತಿಹಾಸಿಕ ಮದಗದಕೆರೆ ಅಭಿವೃದ್ಧಿಗೆ ಕ್ರಮ: ಕೆ.ಎಸ್.ಆನಂದ್
ಸಾರಾಂಶ
ಐತಿಹಾಸಿಕ ಮದಗದಕೆರೆ ಅಭಿವೃದ್ಧಿಗೆ ಕ್ರಮ: ಕೆ.ಎಸ್.ಆನಂದ್
ಕೋಡಿಬಿದ್ದ ಮದಗದ ಕೆರೆ ಕೆರೆಗೆ ಬಾಗಿನ ಅರ್ಪಿಸುವ ಸಮಾರಂಭ ಕನ್ಡಡ ಪ್ರಭ ವಾರ್ತೆ, ಕಡೂರು ಐತಿಹಾಸಿಕ ಮದಗದಕೆರೆಯನ್ನು ಅಭಿವೃದ್ಧಿಗೊಳಿಸುವ ಜೊತೆಗೆ ಪ್ರವಾಸಿ ತಾಣವಾಗಿ ಮಾಡಲು ಕ್ರಮ ವಹಿಸಲಾಗುವುದು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು. ತಾಲೂಕಿನ ಐತಿಹಾಸಿಕ ಮದಗದಕೆರೆ ತುಂಬಿ ಕೋಡಿಬಿದ್ದು ಹರಿಯುತ್ತಿರುವ ಹಿನ್ನೆಲೆಯಲ್ಲಿ ಮದಗದ ಕೆರೆಯ ಅಧಿದೇವತೆ ಶ್ರೀ ಕೆಂಚಾಂಬ ದೇವಿಯವರಿಗೆ ಪೂಜೆ ಸಲ್ಲಿಸಿ ನೂರಾರು ಜನರೊಂದಿಗೆ ಕೆರೆಗೆ ಬಾಗಿನ ಸಮರ್ಪಿಸಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು. 3 ವರ್ಷಕ್ಕೊಮ್ಮೆ ಮಳೆ,ಬೆಳೆ ಆನಂತರ 2 ವರ್ಷ ಬರಗಾಲ ಬರುವುದು ಇಲ್ಲಿನ ರೈತರ ಮಾತಾಗಿದೆ. ತಾವು ಕಳೆದ 2018 ರಿಂದಲೂ ಸ್ನೇಹಿತರೊಂದಿಗೆ ತೆರಳಿ ಮದಗದಕೆರೆಗೆ ಬಾಗಿನ ನೀಡುತ್ತಿದ್ದು, ಕಳೆದ ವರ್ಷ ಕೆರೆ ತುಂಬಿದಾಗ ಅನಿವಾರ್ಯ ಕಾರಣದಿಂದ ಬರಲಾಗಿರಲಿಲ್ಲ. ತಾವು ಸೋತ ಸಂದರ್ಭದಲ್ಲೂ ಬಾಗಿನ ಅರ್ಪಿಸಲು ಬಂದಾಗ ಈ ಭಾಗದ ಜನರು ತೋರಿದ ಪ್ರೀತಿ, ವಿಶ್ವಾಸ ಎಂದಿಗೂ ಮರೆಯಲಾಗದು. ರೈತರ ಕಷ್ಟ ಕಾಲದಲ್ಲಿ ಕೆರೆ ತುಂಬಿದ್ದರೆ ತೋಟಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು. ಬರಗಾಲದಲ್ಲೂ ಮದಗದಕೆರೆ ತುಂಬಿ ಕೋಡಿ ಬಿದ್ದಿರುವ ಸಂತಸದಲ್ಲಿ ನಮ್ಮ ರೈತರಿದ್ದಾರೆ. ಕೆರೆಯ ಅಚ್ಚುಕಟ್ಟುದಾರರಿಗೆ ಅನ್ಯಾಯವಾಗದ ರೀತಿಯಲ್ಲಿ ಬರುವ ಬೇಸಿಗೆಯಲ್ಲಿ ಕೆರೆಯಲ್ಲಿ 20 ಅಡಿ ನೀರು ಉಳಿಸಿ ಕೊಂಡು ಉಳಿದ ನೀರನ್ನು ಅಚ್ಚುಕಟ್ಟುದಾರರ ಬಳಕೆಗೆ ಬಿಡಲಾಗುವುದು. ರೈತರು ಗೊಂದಲಕ್ಕೆ ಒಳಗಾಗುವುದು ಬೇಡ ಎಂದು ಭರವಸೆ ನೀಡಿದರು. ಕೆರೆಗೆ ಕಾಯಕಲ್ಪ ನೀಡಲು ಸಣ್ಣ ನೀರಾವರಿ ಇಲಾಖೆ ಮುಂದಾಗಬೇಕು. ಈ ಹಿಂದೆ ನಡೆದಿರುವ ಕಾಮಗಾರಿಗೆ ಹಣದ ಕೊರತೆಯಿಂದ ವಿಳಂಬವಾಗಿದೆ. ತಾವು ನಬಾರ್ಡ್ ಯೋಜನೆಗೆ ಈ ಕೆರೆ ಸೇರಿಸಲು ಸಂಭಂಧಿಸಿದ ಸಚಿವರಿಗೆ ಮನವಿ ಮಾಡುತ್ತಿದ್ದು ಇದರಿಂದ ಕೆರೆಯ ಅಭಿವೃದ್ದಿ ಕಾಮಗಾರಿಗೆ ವೇಗ ಸಿಗಲಿದೆ ಎಂದರು. ಮದಗದಕೆರೆಯನ್ನು ಪ್ರವಾಸಿ ತಾಣವಾಗಿ ಮಾಡುವ ಆಲೋಚನೆ ಇದೆ. ಮುಂದಿನ ದಿನಗಳಲ್ಲಿ ಈ ಎಲ್ಲ ಯೋಜನೆಗಳಿಗೆ ಅನುದಾನ ತರುವುದಾಗಿ ಹೇಳಿದರು. ಕಡೂರು ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಮದಗದಕೆರೆ ತುಂಬಿದರೆ ಇದರ ಸರಣಿಯ 30 ಕೆರೆಗಳು ತುಂಬಲಿವೆ. ಕ್ಷೇತ್ರದ ರೈತರು ಮಳೆ ಇಲ್ಲದೆ ಉತ್ಸಾಹ ಕಳೆದುಕೊಂಡಿದ್ದು. ಚಿಕ್ಕಮಗಳೂರು ಎಂದರೆ ಮಲೆನಾಡು ಎಂದು ಬರ ಅಧ್ಯಯನ ತಂಡಕ್ಕೆ ತಪ್ಪು ಮಾಹಿತಿ ಇಲ್ಲದೆ ಬರುತ್ತಿಲ್ಲ, ಶಾಸಕರು ಮತ್ತು ಜಿಲ್ಲಾಡಳಿತ ಅಧ್ಯಯನ ತಂಡವನ್ನು ಕಡೂರು ಕ್ಷೇತ್ರಕ್ಕೆ ಕರೆ ತಂದು ಇಲ್ಲಿನ ವಾಸ್ತವ ಸ್ಥಿತಿ ತಿಳಿಸುವ ಕೆಲಸ ಮಾಡಬೇಕು ಎಂದು ಶಾಸಕರಿಗೆ ಮನವಿ ಮಾಡಿದರು. ತಹಸೀಲ್ದಾರ್ ಎಂ.ಪಿ.ಕವಿರಾಜ್ ಮಾತನಾಡಿ, ಕಡೂರು ತಾಲೂಕನ್ನು ಬರಗಾಲ ಪ್ರದೇಶ ಎಂದು ಘೋಷಿಸಿರುವುದರಿಂದ ಅಧ್ಯಯನ ತಂಡಕ್ಕೆ ಬರದ ಸಮಗ್ರ ಮಾಹಿತಿ ನೀಡಲಾಗುತ್ತದೆ. ಅಲ್ಲದೆ ಬೆಳೆ ನಷ್ಟದ ಬಗ್ಗೆ ಈಗಾಗಲೇ ಮಾಹಿತಿ ನೀಡಿದ್ದು, ಪರಿಹಾರಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದರು. ಬೀರೂರು ದೇವರಾಜ್ ಮಾತನಾಡಿ, ಕಳೆದ 30 ವರ್ಷಗಳಿಂದ ಈ ಕೆರೆ ಮಾಹಿತಿ ತಮಗಿದೆ. ತಾಲೂಕಿನ ರೈತರ ಜೀವ ನಾಡಿಯಾಗಿ ನೀರು ನೀಡುತ್ತಿದೆ. ಈ ಕೆರೆ ತುಂಬಿರುವುದು ನಮಗೆಲ್ಲಾ ಸಂತಸ ತಂದಿದೆ ಎಂದರು. ಕಾಂಗ್ರೆಸ್ ಜಿಲ್ಲಾ ಮುಖಂಡರಾದ ಎಂ.ಎಚ್.ಚಂದ್ರಪ್ಪ, ದಾಸಯ್ಯನಗುತ್ತಿ ಚಂದ್ರಪ್ಪ, ತಾಪಂ ಇಒ ಪ್ರವೀಣ್, ವಿವಿಧ ಇಲಾಖೆ ಅಧಿಕಾರಿಗಳು, ಮುಖಂಡರಾದ ಹೊಗರೇಹಳ್ಳಿ ಶಶಿ, ಕೆ.ಎಚ್.ಶಂಕರ್, ಸೋಮೇಶ್, ಆಸಂದಿ ಕಲ್ಲೇಶ್, ಬಾಸೂರು ಚಂದ್ರ ಮೌಳಿ, ಕಂಸಾಗರ ಸೋಮಶೇಖರ್, ಗ್ರಾಪಂ ಅಧ್ಯಕ್ಷ ರಮೇಶ್,ವಿನಯ್ ಮತ್ತಿತರರು ಇದ್ದರು. ---ಬಾಕ್ಸ್ ಸುದ್ದಿ--- ಐತಿಹಾಸಿಕ ಈ ಮದಗದಕೆರೆ 1899 ರಲ್ಲಿ ನಿರ್ಮಾಣವಾದಾಗಿ ನಿಂದ ಇದುವರೆಗೂ ಅಂದರೆ 124 ವರ್ಷಗಳಿಂದ ಕೆರೆ ತಾಲೂಕಿನ ಜನರ- ರೈತಾಪಿ ವರ್ಗದ ಜೀವನಾಡಿಯಾಗಿದೆ. 0.5 ಟಿಎಂಸಿ ನೀರಿನ ಶೇಖರಣೆ ಸಾಮರ್ಥ್ಯವನ್ನು ಕೆರೆ ಹೊಂದಿದೆ. ಸುಮಾರು 1950 ಹೆಕ್ಟೇರ್ ಭೂ ಪ್ರದೇಶಕ್ಕೆ ನೀರು ಹರಿಯುತ್ತಿದೆ. ಅಂತಿಮವಾಗಿ ಹಿರಿಯೂರು ತಾಲೂಕಿನ ವಾಣಿ ವಿಲಾಸ ಸಾಗರ ಸೇರುತ್ತದೆ ಎಂದು ಸಣ್ಣ ನೀರಾವರಿ ಇಲಾಖೆ ಮುಖ್ಯ ಎಂಜಿನಿಯರ್ ದಯಾಶಂಕರ್ ಮಾಹಿತಿ ನೀಡಿದರು. 5ಕೆಕೆಡಿಯು1. ಕಡೂರು ತಾಲೂಕಿನ ಮದಗದಕೆರೆಗೆ ಬಾಗಿನ ಅಪರ್ತಣೆ ಯಲ್ಲಿ ಶಾಸಕ ಕೆ.ಎಸ್.ಆನಂದ್ ರವರನ್ನು ಸನ್ಮಾನಿಸಲಾಯಿತು. ಕಡೂರು ತಾಲೂಕಿನ ಮದಗದಕೆರೆ ತುಂಬಿ ಕೋಡಿಬಿದ್ದ ಹಿನ್ನೆಲೆಯಲ್ಲಿ ಶಾಸಕ ಕೆ.ಎಸ್.ಆನಂದ್ ಮುಖಂಡರು ಮತ್ತು ನೂರಾರು ಜನರೊಂದಿಗೆ ಬಾಗಿನ ಸಮರ್ಪಿಸಿದರು. 5ಕೆಕೆಡಿಯು1ಎ. ಕಡೂರು ತಾಲೂಕಿನ ಎಮ್ಮೇದೊಡ್ಡಿಯ ಮದಗದಕೆರೆಗೆ ಬಾಗಿನ ಅಪರ್ತಣೆ ಯಲ್ಲಿ ಶಾಸಕ ಕೆ.ಎಸ್.ಆನಂದ್ ರವರನ್ನು ಸನ್ಮಾನಿಸಲಾಯಿತು.