ರಾಜ್ಯ ಮತ್ತು ರಾಷ್ಟ್ರೀಯ ಪುರಾತತ್ವ ಇಲಾಖೆಗಳಿಂದ ಸಂರಕ್ಷಿಸಲ್ಪಟ್ಟಿರುವ ಇಲ್ಲಿನ ಬಾರಕೂರಿನ ಐತಿಹಾಸಿಕ ಮಹತ್ವವುಳ್ಳ ಕೋಟೆ, ಕೆರೆ, ದೇವಾಲಯಗಳ ಮೂಲಸ್ವರೂಪಕ್ಕೆ ಧಕ್ಕೆಯಾಗದ ರೀತಿಯಲ್ಲಿ ಪುನರುಜ್ಜೀವನ ಗೊಳಿಸಲಾಗುವುದು ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಹೆಚ್.ಕೆ ಪಾಟೀಲ್ ಹೇಳಿದರು.
ಉಡುಪಿ: ರಾಜ್ಯ ಮತ್ತು ರಾಷ್ಟ್ರೀಯ ಪುರಾತತ್ವ ಇಲಾಖೆಗಳಿಂದ ಸಂರಕ್ಷಿಸಲ್ಪಟ್ಟಿರುವ ಇಲ್ಲಿನ ಬಾರಕೂರಿನ ಐತಿಹಾಸಿಕ ಮಹತ್ವವುಳ್ಳ ಕೋಟೆ, ಕೆರೆ, ದೇವಾಲಯಗಳ ಮೂಲಸ್ವರೂಪಕ್ಕೆ ಧಕ್ಕೆಯಾಗದ ರೀತಿಯಲ್ಲಿ ಪುನರುಜ್ಜೀವನ ಗೊಳಿಸಲಾಗುವುದು ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಹೆಚ್.ಕೆ ಪಾಟೀಲ್ ಹೇಳಿದರು.
ಅವರು ಬುಧವಾರ ಬ್ರಹ್ಮಾವರ ತಾಲೂಕಿನ ಬಾರಕೂರಿನ ಇತಿಹಾಸ ಪ್ರಸಿದ್ಧ ಪಂಚಲಿಂಗೇಶ್ವರ ದೇವಸ್ಥಾನ ಮತ್ತು ಈ ಪರಿಸರದ ಐತಿಹಾಸಿಕ ಅವಶೇಷಗಳನ್ನು ವೀಕ್ಷಿಸಿ ಮಾತನಾಡಿದರು.ಈ ಪ್ರದೇಶದಲ್ಲಿ ಪುರಾತತ್ವ ಇಲಾಖೆಯ ಮೂಲಕ ಸರ್ವೆ ನಡೆಸಲಾಗುತ್ತಿದ್ದು, 300ಕ್ಕೂ ಹೆಚ್ಚು ಸ್ಮಾರಕಗಳನ್ನು ಗುರುತಿಸಲಾಗಿದೆ. ಹಿಂದೆ ಬಾರಕೂರು ಪ್ರತ್ಯೇಕ ರಾಜ್ಯವಾಗಿದ್ದು, ಇದನ್ನು 70 ಮಂದಿ ಆಳಿದ ಇತಿಹಾಸವಿದೆ. ಇಲ್ಲಿ ಯಾವ ರಸ್ತೆಗೆ ಹೋದರೂ ದೇವಾಲಯಗಳಿವೆ, ಕೋಟೆಕೆರೆ, ಬಸ್ತಿ, ಬಟ್ಟೆ ಗಣಪತಿ ದೇವಾಲಯ, ಕೋಟೆ, ಪಂಚಲಿಂಗೇಶ್ವರ ದೇವಾಲಯಗಳು ಸೇರಿದಂತೆ ಎಲ್ಲಾ ಸ್ಮಾರಕಗಳನ್ನು ಸಮಗ್ರವಾಗಿ ಪುನರುಜ್ಜೀವನಗೊಳಿಬೇಕಾಗಿದೆ. ಆದರೆ ಪುನರುಜ್ಜೀವ ಎಂದರೆ ಅವುಗಳನ್ನು ಆಧುನಿಕರಣ ಮಾಡುವುದಲ್ಲ, ಅವುಗಳ ಮೂಲಸ್ವರೂಪದಲ್ಲಿ ಹೇಗಿದ್ದವು ಎಂದು ಅಧ್ಯಯನ ಮಾಡಿ, ಪಾರಂಪರಿಕವಾಗಿ ಪುನರುಜ್ಜೀವನಗೊಳಿಸಬೇಕು ಎಂದವರು ಒತ್ತಿ ಹೇಳಿದರು.ಇಲ್ಲಿನ ಸ್ಮಾರಕಗಳನ್ನು ನೋಡಿದಾಗ ನನಗೆ ಅಚ್ಚರಿಯಾಯಿತು, ಅವುಗಳನ್ನು ಉಳಿಸುವಲ್ಲಿ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಇನ್ನಾದರೂ ಅವುಗಳನ್ನು ಹೇಗಿವೆಯೋ ಹಾಗೇ ಉಳಿಸಿ ಸಂರಕ್ಷಿಸುವಂತೆ ಸೂಚಿಸಿದರು.ಇಲ್ಲಿನ ಇತಿಹಾಸದ ಬಗ್ಗೆ ಸಮಗ್ರವಾಗಿ ಅಧ್ಯಯನ ನಡೆಸಲು, ಸ್ಥಳೀಯರಾದ, ಇತಿಹಾಸ ತಜ್ಞ ಡಾ. ಜಗದೀಶ್ ಶೆಟ್ಟಿ ಅವರ ಸಮಿತಿಯನ್ನು ರಚಿಸಲಾಗುವುದು ಮತ್ತು ಪುನರುಜ್ಜೀವನಕ್ಕೆ ಅಗತ್ಯ ಯೋಜನಾ ವರದಿಯನ್ನು ಶೀಘ್ರ ರಚಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ, ಅಳುಪ ಮನೆತನದ ಆಕಾಶ್‌ರಾಜ್ ಜೈನ್ ಹಾಗೂ ಮತ್ತಿತರರಿದ್ದರು.ವರ್ಷದೊಳಗೆ ಲಕ್ಕುಂಡಿ ಯೋಜನೆ ಪೂರ್ಣ: ಇತ್ತೀಚೆಗೆ ಲಕ್ಕುಂಡಿಯ ಬಾವಿ, ಕೆರೆಕಟ್ಟೆಗಳಲ್ಲಿ ದೊರೆತ ಅತ್ಯಧ್ಭುತವಾದ ಸುಮಾರು 3500 ಪ್ರಾಚ್ಯಾವಶೇಷಗಳನ್ನು ಸಂಗ್ರಹಿಸಿ, ಬಯಲು ಮ್ಯೂಸಿಯಂ ಮಾಡಲು ನಿರ್ಧರಿಸಲಾಗಿದೆ. ಒಂದೇ ಹಳ್ಳಿಯಲ್ಲಿ ಭಾರೀ ಪ್ರಮಾಣದಲ್ಲಿ ಪ್ರಾಚ್ಯಾವಶೇಷ ದೊರೆತಿದ್ದು, ಆ ಸ್ಥಳಕ್ಕೆ ಬಹುದೊಡ್ಡ ಇತಿಹಾಸವಿದೆ. ಈಗಾಗಲೇ ಸುಮಾರು 35 ದೇವಸ್ಥಾನ, 35 ಬಾವಿ ಗುರುತಿಸಿ, ದುರಸ್ತಿಗೊಳಿಸಿ, ರಕ್ಷಿಸಲಾಗುತ್ತಿದ್ದು, ಅವುಗಳ ಮೂಲ ಸ್ವರೂಪಕ್ಕೆ ತರಲಾಗುತ್ತಿದೆ ಎಂದ ಸಚಿವರು, ವರ್ಷದೊಳಗೆ ಇತಿಹಾಸದಲ್ಲಿ ಉಲ್ಲೇಖಿಸಿದಂತೆ ಲಕ್ಕುಂಡಿಯಲ್ಲಿರುವ 101 ಬಾವಿ, 101 ದೇವಸ್ಥಾನಗಳನ್ನು ಗುರುತಿಸಿ, ಅವುಗಳನ್ನು ಅನಾವರಣಗೊಳಿಸುವ ಯೋಜನೆ ರೂಪಿಸಲಾಗಿದೆ ಎಂದರು.