ಉಡುಪಿ ಜಿಲ್ಲೆಯ ಬಗ್ಗೆ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆ ಕೈಬಿಟ್ಟು ಜಿಲ್ಲೆಯ ಅಗ್ನಿಶಾಮಕ ದಳದ ಬಲವರ್ಧನೆ ಮಾಡಿ ಇಲಾಖೆಗೆ ಹೆಚ್ಚುವರಿ ವಾಹನ, ಅಗತ್ಯ ಸಿಬ್ಬಂದಿಗಳನ್ನು ನೇಮಕ ಮಾಡುವಂತೆ ಆಗ್ರಹಿಸಿ ಬಿಜೆಪಿ ಯುವಮೋರ್ಚಾ ಮುಖ್ಯಮಂತ್ರಿಗಳಿಗೆ ಉಡುಪಿ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿತು.

ಉಡುಪಿ: ಉಡುಪಿ ಜಿಲ್ಲೆಯ ಬಗ್ಗೆ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆ ಕೈಬಿಟ್ಟು ಜಿಲ್ಲೆಯ ಅಗ್ನಿಶಾಮಕ ದಳದ ಬಲವರ್ಧನೆ ಮಾಡಿ ಇಲಾಖೆಗೆ ಹೆಚ್ಚುವರಿ ವಾಹನ, ಅಗತ್ಯ ಸಿಬ್ಬಂದಿಗಳನ್ನು ನೇಮಕ ಮಾಡುವಂತೆ ಆಗ್ರಹಿಸಿ ಬಿಜೆಪಿ ಯುವಮೋರ್ಚಾ ಮುಖ್ಯಮಂತ್ರಿಗಳಿಗೆ ಉಡುಪಿ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿತು.ಉಡುಪಿ ಜಿಲ್ಲೆಯ ಬಗ್ಗೆ ರಾಜ್ಯ ಸರ್ಕಾರದ ನಿರ್ಲಕ್ಯ ಧೋರಣೆಗೆ ಜಿಲ್ಲೆಯಲ್ಲಿ ಅಗ್ನಿಶಾಮಕ ದಳದ ತುರ್ತು ಸೇವಾ ವೈಫಲ್ಯವೇ ಸಾಕ್ಷಿ. ಮೊನ್ನೆ ಉಡುಪಿ ನಗರದ ಹೃದಯ ಭಾಗದಲ್ಲಿ ಅಗ್ನಿ ಅವಘಡ ಸಂಭವಿಸಿದಾಗ ಕೇವಲ 2 ಕಿಮೀ ದೂರದ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ತಲುಪಲು 45 ನಿಮಿಷ ತೆಗೆದುಕೊಳ್ಳುವ ಮೂಲಕ ಇಲಾಖೆಯ ಸಾಮರ್ಥ್ಯದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಉಡುಪಿ ಜಿಲ್ಲೆಯಾಗಿ 28 ವರ್ಷಗಳು ಕಳೆದರೂ ತುರ್ತು ಕಾರ್ಯಾಚರಣೆಯ ಸಂದರ್ಭದಲ್ಲಿ ನೆರೆಯ ಜಿಲ್ಲೆಯನ್ನು ಅವಲಂಬಿಸುವ ಸನ್ನಿವೇಶ ನಿರ್ಮಾಣವಾಗಿರುವುದು ದುರದೃಷ್ಟಕರ. ಮಣಿಪಾಲ ಹಾಗೂ ಬ್ರಹ್ಮಾವರ ಭಾಗಕ್ಕೆ ಅಗ್ನಿಶಾಮಕ ದಳ ಘಟಕಗಳಿಗೆ ಸರ್ಕಾರ ಮಂಜೂರಾತಿ ನೀಡಿದ್ದರೂ, ಬ್ರಹ್ಮಾವರ ಅಗ್ನಿಶಾಮಕದಳ ಘಟಕಕ್ಕೆ ಇನ್ನು ಅನುದಾನ ಮಂಜೂರಾಗಿಲ್ಲ. ಕೇರಳದ ವಯನಾಡಿನಲ್ಲಿ ದುರಂತ ಸಂಭವಿಸಿದಾಗ ರಾಜ್ಯದ ಜನರ ಕೋಟ್ಯಾಂತರ ರೂಪಾಯಿ ತೆರಿಗೆ ಹಣವನ್ನು ಮುತುವರ್ಜಿ ವಹಿಸಿ ನೀಡಿದ ರಾಜ್ಯ ಸರ್ಕಾರ ಉಡುಪಿ ಜಿಲ್ಲೆಯ ಬಗ್ಗೆ ಮಲತಾಯಿ ಧೋರಣೆ ತಳೆದಿರುವುದು ಅಕ್ಷಮ್ಯ.

ಮೀನುಗಾರಿಕೆ, ಆರೋಗ್ಯ, ಶಿಕ್ಷಣ, ಬ್ಯಾಂಕಿಂಗ್, ಕೈಗಾರಿಕಾ ಕ್ಷೇತ್ರದಲ್ಲಿ ದಿನೇ ದಿನೇ ಬೆಳೆಯುತ್ತಿರುವ ಉಡುಪಿ ಜಿಲ್ಲೆಗೆ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಅಗ್ನಿಶಾಮಕ ದಳ ಅತ್ಯಂತ ಅಗತ್ಯವಾಗಿದ್ದು, ರಾಜ್ಯ ಸರ್ಕಾರ ಜಿಲ್ಲೆಯ ಜನತೆಯ ತಾಳ್ಮೆ ಪರೀಕ್ಷೆ ಮಾಡಿದರೆ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ. ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳಾದ ಪ್ರದೀಪ್ ಕುಂದರ್, ಸುಶಾಂತ್ ಪೂಜಾರಿ, ಮಿಥುನ್ ಅಮೀನ್, ಸಚಿನ್ ಪೂಜಾರಿ, ಗಣೇಶ್ ಸೂರಲು, ಭರತ್ ಪೂಜಾರಿ, ಅವಿನಾಶ್, ನಿತಿನ್ ಪೈ, ನಿಖಿಲ್ ಮಡಿವಾಳ್, ಭೂಷಣ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.