ಮೂಡುಬಿದಿರೆ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯದ ಮೊದಲ ಹತ್ತು ರ‍್ಯಾಂಕ್‌ಗಳ ಒಳಗೆ ಸ್ಥಾನ ಪಡೆದ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ಕಡಿಮೆ ಅಂಕ ಗಳಿಸಿ ಪಿಯುಸಿಯಲ್ಲಿ ಶೇ. 95ಕ್ಕಿಂತ ಅಧಿಕ ಅಂಕ ಪಡೆದ 103 ವಿದ್ಯಾರ್ಥಿಗಳನ್ನು ಸಂಸ್ಥೆಯ ವತಿಯಿಂದ ಭಾನುವಾರ ನುಡಿಸಿರಿ ಸಭಾಂಗಣದಲ್ಲಿ ಗೌರವಿಸಲಾಯಿತು.ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ, ಸಾಧನೆ ಮಾಡಿದ ನೀವು ಸಂಸ್ಥೆಯ ರಾಯಭಾರಿಗಳಾಗಿದ್ದೀರಿ ಎಂದು ತಿಳಿಸಿದರು. ಇಲ್ಲಿ ಕಲಿತ ಶಿಸ್ತು, ಉತ್ತಮ ಸ್ವಭಾವ, ಹೋರಾಟದ ಮನೋಭಾವ ಹಾಗೂ ಸಾಮರಸ್ಯದ ಗುಣಗಳು ಭವಿಷ್ಯದ ದಾರಿದೀಪವಾಗಲಿ ಎಂದು ಆಶಿಸಿದರು. ಆಳ್ವಾಸ್ ಸಂಸ್ಥೆಯು ಮಿನಿ ಇಂಡಿಯಾ ಇದ್ದಂತೆ ಎಂದು ಬಣ್ಣಿಸಿದ ಅವರು, ವಿವಿಧ ಭಾಗಗಳಿಂದ ಬಂದ ವಿದ್ಯಾರ್ಥಿಗಳು ಇಲ್ಲಿ ಒಂದೇ ಕುಟುಂಬದಂತೆ ಬದುಕುತ್ತಾರೆ. ಈ ವೈವಿಧ್ಯತೆ ಮತ್ತು ಒಗ್ಗಟ್ಟು ನಿಮ್ಮನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುತ್ತದೆ. ಸಮಾಜಕ್ಕೆ ಈ ಒಗ್ಗಟ್ಟಿನ ಸಂದೇಶ ಹಂಚುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದರು.
ವಾಣಿಜ್ಯ ವಿಭಾಗದಲ್ಲಿ 600ಕ್ಕೆ 600 ಅಂಕ ಪಡೆದ ದಿಶಾಳಿಗೆ 3 ಲಕ್ಷ ರೂಪಾಯಿ ನಗದು ಹಾಗೂ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ರಕ್ಷಿತಾ ಮಂಜುನಾಥ್‌ಗೆ 2 ಲಕ್ಷ ರೂಪಾಯಿ ನಗದು ನೀಡಿ ಸನ್ಮಾನಿಸಲಾಯಿತು.ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ. ಮೊಹಮ್ಮದ್ ಸದಾಕತ್, ಉಪಪ್ರಾಂಶುಪಾಲೆ ಝಾನ್ಸಿ ಪಿ. ಎನ್. ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.