ಅನಗತ್ಯವಾಗಿ ಅರ್ಜಿ ವಿಲೇವಾರಿ ವಿಳಂಬ ಮಾಡಿದರೆ ಕ್ರಮ

| Published : Dec 21 2023, 01:15 AM IST

ಅನಗತ್ಯವಾಗಿ ಅರ್ಜಿ ವಿಲೇವಾರಿ ವಿಳಂಬ ಮಾಡಿದರೆ ಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಹಗರಿಬೊಮ್ಮನಹಳ್ಳಿ ಪಟ್ಟಣದ ಆಡಳಿತ ಸೌಧದಲ್ಲಿ ಬುಧವಾರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಜನತಾ ದರ್ಶನ ಕಾರ್ಯಕ್ರಮ ನಡೆಸಿದರು. ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ, ಕೆಲವು ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದರು. ಯಾವುದೇ ಅರ್ಜಿ ಅನಗತ್ಯ ವಿಳಂಬ ಮಾಡಿದರೆ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳಿಗೆ ಎಚ್ಚರಿಸಿದರು. ಇದಕ್ಕೂ ಮುನ್ನ ಪಟ್ಟಣದಲ್ಲಿ ಸೈಕಲ್‌ ಸವಾರಿ ನಡೆಸಿ, ವೀಕ್ಷಿಸಿದರು.

ಹಗರಿಬೊಮ್ಮನಹಳ್ಳಿ: ತಾಲೂಕಿನ ಏತ ನೀರಾವರಿ ಯೋಜನೆಗಳನ್ನು ಪುನಶ್ಚೇತನಗೊಳಿಸಬೇಕು, ಈರುಳ್ಳಿ ರಪ್ತು ನಿಷೇಧ ಹಿಂತೆಗೆಯಬೇಕು, ಬರ ಪರಿಹಾರ ವಿತರಣೆ ನೀಡಬೇಕು...

ಇಂತಹ ಹಲವು ಮನವಿಗಳು, ಬೇಡಿಕೆಗಳು ಪಟ್ಟಣದ ಆಡಳಿತ ಸೌಧದಲ್ಲಿ ಬುಧವಾರ ನಡೆದ ಜನತಾದರ್ಶನದಲ್ಲಿ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಅವರಿಗೆ ಬಂದಿವೆ.

ಜನತಾ ದರ್ಶನ ಕಾರ್ಯಕ್ರಮದಲ್ಲಿ ಜಮೀನು ವಿವಾದ, ಮೂಲಸೌಲಭ್ಯ, ರೈತರ ವಿವಿಧ ಸಮಸ್ಯೆಗಳ ಅರ್ಜಿಗಳ ಮಹಾಪೂರವೇ ಹರಿದು ಬಂದಿತು. ಚಿಂತ್ರಪಳ್ಳಿ ಗ್ರಾಮಸ್ಥರು ಗ್ರಾಮದ ದೇವಸ್ಥಾನಗಳನ್ನು ಪುರಸಭೆ ವ್ಯಾಪ್ತಿಗೆ ಸೇರಿಸಬೇಕು. ಗ್ರಾಮದ ಠಾಣಾ ವ್ಯಾಪ್ತಿಯಲ್ಲಿ ಬರುವ ನಿವೇಶನಗಳಿಗೆ ಅಧಿಕೃತ ದಾಖಲೆಗಳನ್ನು ನೀಡಬೇಕು. ವಾರ್ಡ್‌ ನಂ. ೧೨ಮತ್ತು ೧೩ರಲ್ಲಿ ನಿವೇಶನಗಳ ಅಧಿಕೃತ ದಾಖಲೆಗಳು ಸಿಗುತ್ತಿಲ್ಲ. ಪುರಸಭೆಯಿಂದ ಫಾರಂ ನಂಬರ್ ೩ ಪಡೆಯಲು ಸಾರ್ವಜನಿಕರು ಹೆಣಗಾಡುತ್ತಿದ್ದಾರೆ. ಟ್ಯಾಕ್ಸ್ ಕಟ್ಟಿರುವ ದಾಖಲೆಗಳ ಆಧಾರದ ಮೇಲೆ ಫಾರಂ ನಂ. ೩ ನೀಡಬೇಕು ಎಂದು ಚಿಂತ್ರಪಳ್ಳಿ ಗ್ರಾಮಸ್ಥರಾದ ಸೊನ್ನದ ಗುರುಬಸವರಾಜ, ವೀರಣ್ಣ, ದೇವೇಂದ್ರಪ್ಪ ಇತರರು ಒತ್ತಾಯಿಸಿದರು.ಈರುಳ್ಳಿ ರಪ್ತು ನಿಷೇಧ ಹಿಂತೆಗೆಯಲು ರೈತ ಮುಖಂಡರಾದ ಮೈನಳ್ಳಿ ಕೊಟ್ರೇಶಪ್ಪ, ಎ. ಪ್ರಕಾಶ್, ಉತ್ತಂಗಿ ಸಿದ್ದೇಶ, ಸೋಮಣ್ಣ, ರುದ್ರಪ್ಪ, ನಾಗರಾಜ ಕುರಿತಂತೆ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಅವರಿಗೆ ಮನವಿ ಸಲ್ಲಿಸಿದರು. ಈ ಕುರಿತಂತೆ ತ್ವರಿತ ಕ್ರಮ ಕೈಗೆತ್ತಿಕೊಳ್ಳುವುದಾಗಿ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿದರು. ಪುರಸಭೆ ಸದಸ್ಯರಾಗಿ ಆಯ್ಕೆಯಾಗಿ ೨ ವರ್ಷವಾದರೂ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯಾಗಿಲ್ಲ. ಈ ಕುರಿತಂತೆ ಸರ್ಕಾರಕ್ಕೆ ಮಾಹಿತಿ ಸಲ್ಲಿಸುವಂತೆ ಪುರಸಭೆ ಸದಸ್ಯ ರಾಜೇಶ್ ಬ್ಯಾಡಗಿ ಒತ್ತಾಯಿಸಿದರು. ತಾಲೂಕಿನ ಬೆಣ್ಣಿಕಲ್ಲು ಗ್ರಾಮದ ಶಾಲೆಗೆ ಮೈದಾನಕ್ಕಾಗಿ ಈಗಾಗಲೆ ಗುರುತಿಸಲಾದ ಸರ್ಕಾರಿ ಜಮೀನು ನೀಡುವಂತೆ ಗ್ರಾಮದ ಮುಖಂಡ ಬಸವನಗೌಡ ಇತರರು ಮನವಿ ಸಲ್ಲಿಸಿದರು.

ಪಟ್ಟಣದ ಪಾದಗಟ್ಟಿ ಆಂಜನೇಯ ಸ್ವಾಮಿ ದೇಗುಲಕ್ಕೆ ಸೇರಿದ ೧೧ ಎಕರೆ ಜಮೀನು ಪರಭಾರೆಯಾಗಿದ್ದು, ಕೂಡಲೆ ರದ್ದುಗೊಳಿಸುವಂತೆ ಪಟ್ಟಣದಲ್ಲಿನ ನಾರಾಯಣದೇವರ ಕೆರೆ ದೈವಸ್ಥರು ಮನವಿ ಸಲ್ಲಿಸಿದರು. ಈ ಹಿಂದೆ ದಾನಿಗಳ ಕುಟುಂಬದ ಪೂರ್ವಜರು ಖರೀದಿಸಿದ ಪತ್ರಗಳ ಆಧಾರವಾಗಿರಿಸಿ ಪರಭಾರೆಯಾಗಿದೆ ಎಂದು ತಹಸೀಲ್ದಾರ್ ಚಂದ್ರಶೇಖರ ಗಾಳಿ ಜಿಲ್ಲಾಧಿಕಾರಿಗೆ ತಿಳಿಸಿದರು. ಅಕ್ರಮವಾಗಿ ಪರಭಾರೆಯಾಗಿದೆ, ಪೋತಿ ವಾರಸು ಕುರಿತಂತೆಯೂ ಸಂಶಯಾಸ್ಪದ ದಾಖಲೆಗಳು ಸೃಷ್ಟಿಯಾಗಿವೆ ಎಂದು ದೈವಸ್ಥರಾದ ಶಿವಶಂಕರಗೌಡ, ಹುಳ್ಳಿಪ್ರಕಾಶ, ಜೋಗಿ ಹನುಮಂತಪ್ಪ, ಬಂಗಾರಿ ಗಾಳಿರಾಜ, ಸೆರೆಗಾರ ಹುಚ್ಚಪ್ಪ ಇತರರು ಒತ್ತಾಯಿಸಿದರು. ದಾಖಲೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಡಿಸಿ ಭರವಸೆ ನೀಡಿದರು. ಕಾತ್ಯಾಯಿನಿ ಮರಡಿ ಬಸವೇಶ್ವರ ದೇಗುಲದ ಜಮೀನು ಪರಭಾರೆ ಕುರಿತಂತೆ ಚಂದ್ರಪ್ಪ, ಯಳಕಪ್ಪ ದೂರಿಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್‌ಗೆ ಸೂಚನೆ ನೀಡಿದರು. ತಾಲೂಕಿನ ಬಸರಕೋಡು ಏತ ನೀರಾವರಿ ಕಾಲುವೆಗಳ ಆಧುನೀಕರಣಕ್ಕೆ ಕ್ರಮ ಕೈಗೊಳ್ಳುವಂತೆ ಗ್ರಾಮದ ಮುಖಂಡರಾದ ಪತ್ರೇಶ್ ಹಿರೇಮಠ, ಧನಂಜಯ ಮೇಟಿ, ನಾಗಯ್ಯ, ಬಾಣದ ರುದ್ರಪ್ಪ, ಪೋರಪ್ಪ, ಚಂದ್ರಪ್ಪ, ಜಗದೇವಯ್ಯ ಇತರರು ಒತ್ತಾಯಿಸಿದಾಗ ಈ ಕುರಿತು ಕ್ರಿಯಾಯೋಜನೆ ರೂಪಿಸುವಂತೆ ಸಣ್ಣ ನೀರಾವರಿ ಇಲಾಖೆ ಎಇಇಗೆ ಆದೇಶಿಸಿದರು.

ಜಿಲ್ಲಾಧಿಕಾರಿ ಆರಂಭದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸೈಕಲ್ ಸಂಚಾರ ನಡೆಸಿ ಪಟ್ಟಣದ ಹಲವೆಡೆ ಸಂಚಾರ ದಟ್ಟಣೆ ಮತ್ತು ಅಡಚಣೆ ಗಮನಿಸಿದರು. ಪಟ್ಟಣದ ಬಸವೇಶ್ವರ ಬಜಾರದಲ್ಲಿ ವಾಹನಗಳನ್ನು ರಸ್ತೆಬದಿಯಲ್ಲೆ ನಿಲುಗಡೆ ಮಾಡುತ್ತಿರುವ ಕುರಿತು ಕ್ರಮ ಕೈಗೊಳ್ಳುವಂತೆ ಪಿಎಸ್‌ಐಗೆ ಸೂಚನೆ ನೀಡಿದರು. ಬಸ್‌ ನಿಲ್ದಾಣದ ಬಳಿ ಸ್ವಚ್ಛತೆ ಕಾಯ್ದುಕೊಳ್ಳುವಂತೆ ಆದೇಶಿಸಿದರು.

ಶಾಸಕ ಕೆ. ನೇಮರಾಜ ನಾಯ್ಕ ಉದ್ಘಾಟಿಸಿ ಮಾತನಾಡಿ, ರೈತರ ಬೇಡಿಕೆಗಳನ್ನು ಈಡೇರಿಸಲು ಅಗತ್ಯ ಅನುದಾನ ನೀಡಲಾಗುವುದು. ತಾಲೂಕು ಮಟ್ಟದ ಅಧಿಕಾರಿಗಳು ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಬೇಕು. ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಮಾತನಾಡಿ, ಅನಗತ್ಯವಾಗಿ ಅರ್ಜಿ ವಿಲೇವಾರಿ ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು. ಜನತಾದರ್ಶನದಲ್ಲಿನ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿಗೊಳಿಸಲಾಗುವುದು ಎಂದು ತಿಳಿಸಿದರು. ಜಿಪಂ ಸಿಇಒ ಸದಾಶಿವ ಪ್ರಭು, ತಹಸೀಲ್ದಾರ್ ಚಂದ್ರಶೇಖರ ಗಾಳಿ, ತಾಪಂ ಇಒ ಡಾ. ಜಿ. ಪರಮೇಶ್ವರ ವಿವಿಧ ಇಲಾಖೆ ಅಧಿಕಾರಿಗಳಿದ್ದರು.