ಸಾರಾಂಶ
ಬಳ್ಳಾರಿ: ನಗರದ ಸ್ವಚ್ಛತೆ ಬಗ್ಗೆ ಯಾವುದೇ ಕಾಳಜಿಯಿಲ್ಲದೆ ಕಂಡ ಕಂಡಲ್ಲಿ ಕಸ ಹಾಕುವವರನ್ನು ನಿಯಂತ್ರಿಸಲು ಮಹಾನಗರ ಪಾಲಿಕೆಯಿಂದ ಎಲ್ಲ ವಾರ್ಡ್‌ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆಗೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ತಿಳಿಸಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮೇಯರ್ ಬಿ. ಶ್ವೇತಾ ಅಧ್ಯಕ್ಷತೆಯಲ್ಲಿ ಜರುಗಿದ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡಿದ್ದ ಅವರು, ರಸ್ತೆಯಲ್ಲಿ ಕಸ ಹಾಕುವವರ ನಿಯಂತ್ರಿಸಲು ಕ್ಯಾಮೆರಾ ಅಳವಡಿಕೆ ಸೂಕ್ತ ಎಂದರು. ಸಚಿವರ ನಿಲುವಿಗೆ ಎಲ್ಲ ಸದಸ್ಯರು ಸಹಮತ ವ್ಯಕ್ತಪಡಿಸಿದರು.ಸ್ವಚ್ಛ ಮತ್ತು ಸ್ವಸ್ಥ ಬಳ್ಳಾರಿಯನ್ನಾಗಿ ನಿರ್ಮಾಣ ಮಾಡಲು ಸಾರ್ವಜನಿಕರ ಪಾತ್ರ ಪ್ರಮುಖವಾದದ್ದು. ಜನರಲ್ಲಿ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಅರಿವು ಮೂಡಿಸುವ ಕೆಲಸವಾಗಬೇಕು ಎಂದು ಪಾಲಿಕೆಯ ಸದಸ್ಯರು ಒತ್ತಾಯಿಸಿದರು. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿಕ್ರಿಯಿಸಿ, ಜನಜಾಗೃತಿಗೆ ಆಯಾ ವಾರ್ಡ್‍ಗಳ ಯುವಕರ ಸಂಘ- ಸಂಸ್ಥೆಗಳ ಸಹಕಾರ ತೆಗೆದುಕೊಳ್ಳಬೇಕು. ಸಿಸಿ ಕ್ಯಾಮೆರಾ ಅಳವಡಿಸಿ ಕಸ ಹಾಕುವವರನ್ನು ನಿಯಂತ್ರಿಸುವಂತಾಗಬೇಕು ಎಂದು ಸಲಹೆ ನೀಡಿದರು.
ನಗರದಲ್ಲಿ ಬಿಡಾಡಿ ದನಗಳ ಹಾವಳಿ ತೀವ್ರವಾಗಿದ್ದು, ವಾಹನ ಸವಾರರಿಗೆ ಅಡ್ಡಿಯನ್ನುಂಟು ಮಾಡುತ್ತಿವೆ ಎಂದು ಸದಸ್ಯರು ಸಚಿವರ ಗಮನಕ್ಕೆ ತಂದರು. ಪ್ರತಿಕ್ರಿಯಿಸಿದ ಸಚಿವರು, ಬಿಡಾಡಿ ದನಗಳ ಮಾಲೀಕರು ತಮ್ಮ ಆವರಣದಲ್ಲಿಯೇ ಕಟ್ಟಿ ಹಾಕಿಕೊಳ್ಳಬೇಕು. ಇಲ್ಲದಿದ್ದರೆ ಅಧಿಕಾರಿಗಳು ಕೇಸ್ ದಾಖಲು ಮತ್ತು ದಂಡ ವಿಧಿಸುವ ಕುರಿತು ಎಚ್ಚರಿಕೆ ನೀಡಬೇಕು. ಮಾಲೀಕತ್ವ ಇಲ್ಲದವುಗಳನ್ನು ಕೂಡಲೇ ವಶಕ್ಕೆ ಪಡೆದು, ಗೋಶಾಲೆಗಳಿಗೆ ರವಾನಿಸುವ ಕ್ರಮ ವಹಿಸಬೇಕು ಎಂದು ಪಾಲಿಕೆಯ ಅಧಿಕಾರಿಗಳಿಗೆ ಸೂಚಿಸಿದರು.ನಗರದಲ್ಲಿನ ಹಳೆಯ ತಹಸೀಲ್ದಾರರ ಕಚೇರಿ ಆವರಣವನ್ನು ಮುಂದಿನ ದಿನಗಳಲ್ಲಿ ಸುಮಾರು ₹30 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿ ಪಾಲಿಕೆಯ ಸದಸ್ಯರ ಕೊಠಡಿ ನಿರ್ಮಾಣ ಮಾಡಿಕೊಡಲಾಗುವುದು ಎಂದು ಸಚಿವ ಬಿ. ನಾಗೇಂದ್ರ ಅವರು ಪ್ರಸ್ತಾಪಿಸಿದರು. ಇದಕ್ಕೆ ಸದಸ್ಯರೆಲ್ಲರೂ ಸಮ್ಮತಿ ವ್ಯಕ್ತಪಡಿಸಿದರು.
ಪಾಲಿಕೆಯ ವಿವಿಧ ವಾರ್ಡ್‍ಗಳಲ್ಲಿ ರಾತ್ರಿ ಸಮಯದಲ್ಲಿ ಮನೆ ದರೋಡೆಯಂತಹ ಘಟನೆಗಳು ನಡೆಯುತ್ತಿದೆ ಎಂದು ಸದಸ್ಯರೊಬ್ಬರು ಸಭೆಯ ಗಮನಕ್ಕೆ ತಂದರು. ರಾತ್ರಿ ವೇಳೆಯಲ್ಲಿ ಪೊಲೀಸ್ ಗಸ್ತು ಹೆಚ್ಚಾಗಬೇಕು. ಈ ಬಗ್ಗೆ ಸಂಬಂಧಿಸಿದ ಪೊಲೀಸ್ ಅಧಿಕಾರಿಗಳು ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.ನಗರದಲ್ಲಿ ಬೀದಿನಾಯಿಗಳಿಗೆ ಆಂಟಿರೇಬೀಸ್ ವ್ಯಾಕ್ಸಿನೇಷನ್ ಮತ್ತು ಸಂತಾನಹರಣ ಚಿಕಿತ್ಸೆಯ ಕಾರ್ಯಕ್ಕೆ ಬಾಕಿ ಉಳಿದ ಹಣವನ್ನು ಪಾಲಿಕೆಯ ಸಾಮಾನ್ಯ ನಿಧಿಯಡಿಯಲ್ಲಿ ಪಾವತಿ ಮಂಜೂರಾತಿಗೆ ಸದಸ್ಯರು ಅನುಮೋದನೆ ನೀಡಿದರು.
ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಉಪಮೇಯರ್ ಬಿ. ಜಾನಕಿ, ಹಣಕಾಸು ಮತ್ತು ಅಫೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷ ನೂರ್ ಮೊಹಮ್ಮದ್, ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ಆಸೀಫ್ ಭಾಷಾ, ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಯ ಅಧ್ಯಕ್ಷ ಹನುಮಂತಪ್ಪ. ಪಾಲಿಕೆಯ ಆಯುಕ್ತ ಜಿ. ಖಲೀಲ್ ಸಾಬ್ ಸೇರಿದಂತೆ ಪಾಲಿಕೆಯ ಸದಸ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.