ಸಾರಾಂಶ
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಯುವಕನೊಬ್ಬ ತನ್ನ ಎದೆಗೆ ತಾನೇ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮೂವತೊಕ್ಲು ಗ್ರಾಮದಲ್ಲಿ ನಡೆದಿದೆ. ಮಾದಾಪುರ ಹೋಬಳಿಯ ಮೂವತೊಕ್ಲು ಗ್ರಾಮದ ಮಲ್ಲಾಜಿರ ಚಂಗಪ್ಪ ಹಾಗೂ ಪಾರ್ವತಿ ದಂಪತಿ ಪುತ್ರ ಪ್ರವೀಣ್ (28) ಮೃತರು.ಈತ ಗುರುವಾರ ಸಂಜೆ ಮನೆಯಲ್ಲಿ ಸ್ವಂತ ಸಿಂಗಲ್ ಬ್ಯಾರಲ್ ಕೋವಿಯಿಂದ ಗುಂಡು ಹಾರಿಸಿಕೊಂಡಿದ್ದು, ಜೀವನ್ಮರಣ ಸ್ಥಿತಿಯಲ್ಲಿದ್ದ. ಸ್ಥಳೀಯರು ಮಾದಾಪುರ ಆಸ್ಪತ್ರೆಗೆ ಸಾಗಿಸಿ,ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದರು.ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ. ಬೇರೆ ಕಡೆ ಉದ್ಯೋಗದಲ್ಲಿರುವ ಪ್ರವೀಣ್ ಕೆಲವು ದಿನಗಳ ಹಿಂದಷ್ಟೇ ಗ್ರಾಮದ ಮನೆಗೆ ಬಂದಿದ್ದ ಎನ್ನಲಾಗಿದ್ದು ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಸೋಮವಾರಪೇಟೆ ಪೋಲೀಸ್ ವೃತ್ತ ನಿರೀಕ್ಷಕರು,ಸಿಬ್ಬಂದಿ ಭೇಟಿ ನೀಡಿದ್ದು ಕುಟುಂಬಸ್ಥರ ದೂರಿನಂತೆ ತನಿಖೆ ನಡೆಸಿದ್ದಾರೆ.ಬೈಕ್‌ನಲ್ಲಿದ್ದ ಐಫೋನ್ ಕದ್ದ ಆರೋಪಿ ಬಂಧನ:
ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ನಿಲ್ಲಿಸಿದ್ದ ಬೈಕ್‌ನಿಂದ ಟೂಲ್‌ಕಿಟ್ ಬ್ಯಾಗ್ ಸಹಿತ ಐಫೋನ್ ಕದ್ದ ಆರೋಪಿಯನ್ನು ಮೂಲ್ಕಿ ಪೊಲೀಸರು ಬಂಧಿಸಿದ್ದಾರೆ.ಆರೋಪಿಯನ್ನು ಉತ್ತರ ಕರ್ನಾಟಕದ ಬಾದಾಮಿ ನಿವಾಸಿ ಮುಲ್ಕಿ ವಿಜಯಾ ಕಾಲೇಜು ರಸ್ತೆಯ ಬಾಡಿಗೆ ಮನೆಯಲ್ಲಿ ವಾಸವಿರುವ ಬಸವರಾಜು (38) ಎಂದು ಗುರುತಿಸಲಾಗಿದೆ.ಉಡುಪಿಯ ಪ್ರಶಾಂತ್ ಪೂಜಾರಿ ಕಳೆದ ಶುಕ್ರವಾರ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಬಂದವರು ಬೈಕ್‌ನ್ನು ದೇವಳದ ಉತ್ತರ ಭಾಗದ ದ್ವಾರದ ಬಳಿ ನಿಲ್ಲಿಸಿದ್ದರು. ಅದರಲ್ಲಿ ಐಫೋನ್ ಸಹಿತ ತಮ್ಮ ಟೂಲ್‌ಕಿಟ್ ಬ್ಯಾಗ್ ಇದ್ದು ದೇವರ ದರ್ಶನ ಮಾಡಿ ವಾಪಸ್ ಬಂದಾಗ ಬ್ಯಾಗ್ ನಾಪತ್ತೆಯಾಗಿತ್ತು. ಮೂಲ್ಕಿ ಪೊಲೀಸರು ದೇವಸ್ಥಾನದ ಸಿಸಿ ಕ್ಯಾಮೆರಾ ಸಹಿತ ನಗರದ ವಿವಿಧ ಸಿಸಿಟಿವಿ ಫೂಟೇಜ್‌ಗಳನ್ನು ಪರಿಶೀಲಿಸಿ ಆರೋಪಿಯ ಮಾಹಿತಿ ಕಲೆ ಹಾಕಿದ್ದರು. ಆರೋಪಿಯು ಮಂಗಳೂರು ರೈಲು ನಿಲ್ದಾಣದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು ಆತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿ ಕಳವುಮಾಡಿದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.