ಸಾರಾಂಶ
ಈಗಾಗಲೇ ರೋಣ ಪಟ್ಟಣದ ಮುಖ್ಯ ರಸ್ತೆಗೆ ಹೊಂದಿಕೊಂಡ ಚರಂಡಿಯಲ್ಲಿ ಘನತ್ಯಾಜ್ಯ, ಅತಿಕ್ರಮಣ ಗೂಡಂಗಡಿ ತೆರವುಗೊಳಿಸಲಾಗಿದೆ. ಸ್ವಚ್ಛತೆ ಹಾಗೂ ಅತಿಕ್ರಮಣ ತೆರವಿಗೆ ವ್ಯಾಪಾರಸ್ಥರು ಸಹಕಾರ ನೀಡಿದ್ದು ಸ್ವಾಹತಾರ್ಹ
ರೋಣ: ಪಟ್ಟಣದ ಸೌಂದರ್ಯ ವೃದ್ಧಿ ಹಾಗೂ ಅಭಿವೃದ್ಧಿ ಹಿತದೃಷ್ಟಿಯಿಂದ ವ್ಯಾಪಾರಸ್ಥರು ರಸ್ತೆ ಮತ್ತು ಚರಂಡಿ ಅತೀಕ್ರಮಣ ಮಾಡಿಕೊಂಡಲ್ಲಿ ಯಾವುದೇ ನೋಟಿಸ್ ನೀಡದೇ ಮುಲಾಜಿಲ್ಲದೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭೆ ಅಧ್ಯಕ್ಷೆ ಗೀತಾ ಮಾಡಲಗೇರಿ ಸೂಚನೆ ನೀಡಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ರೋಣ ಪಟ್ಟಣದ ಮುಖ್ಯ ರಸ್ತೆಗೆ ಹೊಂದಿಕೊಂಡ ಚರಂಡಿಯಲ್ಲಿ ಘನತ್ಯಾಜ್ಯ, ಅತಿಕ್ರಮಣ ಗೂಡಂಗಡಿ ತೆರವುಗೊಳಿಸಲಾಗಿದೆ. ಸ್ವಚ್ಛತೆ ಹಾಗೂ ಅತಿಕ್ರಮಣ ತೆರವಿಗೆ ವ್ಯಾಪಾರಸ್ಥರು ಸಹಕಾರ ನೀಡಿದ್ದು ಸ್ವಾಹತಾರ್ಹ. ಇನ್ನು ಮುಂದೆ ವ್ಯಾಪರಸ್ಥರು ಪುರಸಭೆ ವ್ಯಾಪ್ತಿಯ ಚರಂಡಿ ಜಾಗೆ ಮತ್ತು ರಸ್ತೆಗಳಲ್ಲಿ ಅತಿಕ್ರಮಣ ಮಾಡಿಕೊಳ್ಳಬಾರದು. ಬೀದಿ ಬದಿ ವ್ಯಾಪಾರಸ್ಥರು ಗೂಡಂಗಡಿಗಳನ್ನು ರಸ್ತೆ ಹಾಗೂ ಚರಂಡಿ ಮೇಲೆ ನಿರ್ಮಿಸದೇ ಕೇವಲ ತಳ್ಳುಗಾಡಿಗಳ ಮೂಲಕ ವ್ಯಾಪರ ಕೈಗೊಳ್ಳಬೇಕು ಎಂದರು.ಚರಂಡಿಯಲ್ಲಿ ಹೂಳು ತುಂಬಿ ಮಳೆಗಾಲದಲ್ಲಿ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿತ್ತು ಇದರಿಂದ ವಾಹನ ಸವಾರರು, ಪಾದಾಚಾರಿಗಳಿಗೆ ತೀವ್ರ ತೊಂದರೆ ಆಗುತ್ತಿತ್ತು. ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಆಗುವ ಹಿನ್ನೆಲೆಯಲ್ಲಿ ಪುರಸಭೆಯ ವತಿಯಿಂದ ಚರಂಡಿ ಸ್ವಚ್ಛಗೊಳಿಸುವ ಕಾರ್ಯ ಪ್ರಾರಂಭಿಸಲಾಗಿದೆ. ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ನಮಗೆ ಸಹಕಾರ ನೀಡಿದ್ದಾರೆ.ರೋಣ ಪಟ್ಟಣದ ಅಭಿವೃದ್ಧಿ ಹಾಗೂ ಸೌಂದರ್ಯ ಹೆಚ್ಚಿಸುವ ಉದ್ದೇಶದಿಂದ ಸ್ವಚ್ಛತೆ ಕಾರ್ಯ ಪ್ರಾರಂಭಿಸಲಾಗಿದ್ದು, ಪುರಸಭೆ ವ್ಯಾಪ್ತಿಯ ಚರಂಡಿ ಹಾಗೂ ರಸ್ತೆಯ ಜಾಗೆಯಲ್ಲಿ ಗೂಡಂಗಡಿ ಇಡಬಾರದು ಜಾಗ ಅತಿಕ್ರಮಣ ಮಾಡುವಂತಿಲ್ಲ. ಚರಂಡಿ ವ್ಯಾಪ್ತಿ ಬಿಟ್ಟು ಬೇರಡೆ ವ್ಯಾಪಾರ, ವಹಿವಾಟು ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಗೂಡಗಂಡಿ ಇಡದೇ ತಳ್ಳು ಗಾಡಿಗಳ ಮೂಲಕ ಮಾತ್ರ ವ್ಯಾಪರ ವಹಿವಾಟು ನಡೆಸಬೇಕು. ಪುರಸಭೆ ವ್ಯಾಪ್ತಿಯ ಜಾಗವನ್ನು ಅತಿಕ್ರಮಣ ಮಾಡಿದವರ ವಿರುದ್ಧ ನಿರ್ಧಾಕ್ಷಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.ಹೂ, ಹಣ್ಣು ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ: ಹೂ, ಹಣ್ಣು ಸೇರಿದಂತೆ ಇತರೆ ವ್ಯಾಪಾರಸ್ಥರು ರಸ್ತೆ ಮೇಲೆ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದು, ಇದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತದೆ. ಹೂ,ಹಣ್ಣು ವ್ಯಾಪಾರಸ್ಥರು ಇನ್ನೂ ಮುಂದೆ ಹೊಸ ಸಂತೆ ಬಜಾರದಲ್ಲಿ ವ್ಯಾಪಾರ ವಹಿವಾಟು ನಡೆಸಲು ಪರ್ಯಾಯ ವ್ಯವಸ್ಥೆ ಕಲ್ಪಿಸಿ ಕೊಡಲಾಗುವುದು ಎಂದರು.
ಕಸ ವಿಲೇವಾರಿಗೆ ಕ್ರಮ: ಪುರಸಭೆ ಉಪಾಧ್ಯಕ್ಷ ದುರ್ಗಪ್ಪ ಹಿರೇಮನಿ ಮಾತನಾಡಿ, ಹಲವು ಅಂಗಡಿಗಳಿಂದ ಬರುವ ತಾಜ್ಯ ರಸ್ತೆ, ಚರಂಡಿ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಬಿಸಾಡುವಂತಿಲ್ಲ. ಪುರಸಭೆಯಿಂದ ಬರುವ ವಾಹನಗಳಿಗೆ ಕಸ, ಘನತ್ಯಾಜ್ಯ ಹಾಕಬೇಕು. ಚರಂಡಿ ಸ್ವಚ್ಛತೆ ವೇಳೆ ತೆರವುಗೊಳಿಸಲಾದ ಗೂಡಂಗಡಿ ಮತ್ತೆ ಚರಂಡಿ ಅಥವಾ ರಸ್ತೆ ಮೇಲೆ ಇಡಬಾರದು. ತಳ್ಳುಗಾಡಿ ಮೂಲಕ ವ್ಯಾಪಾರ ಮಾಡಿಕೊಂಡು ಸಂಜೆ ವೇಳೆ ಮತ್ತೆ ತಳ್ಳುಗಾಡಿಗಳನ್ನು ತಮ್ಮ ಮನೆಗೆ ತಗೆದುಕೊಂಡು ಹೋಗಬೇಕು. ಪುರಸಭೆ ಪಟ್ಟಣದ ಸೌಂದರ್ಯಕ್ಕೆ ಆದ್ಯತೆ ನೀಡಿದ್ದು, ಇದಕ್ಕೆ ವ್ಯಾಪಾರಸ್ಥರು, ಸಾರ್ವಜನಿಕರ ಸಹಕಾರ ಅತೀ ಮುಖ್ಯವಾಗಿದೆ. ಪಟ್ಟಣದ ಪ್ರಮುಖ ರಸ್ತೆ ಅಭಿವೃದ್ಧಿಗೆ ₹20 ಕೋಟಿ ಅನುದಾನವನ್ನು ಶಾಸಕ ಜಿ.ಎಸ್.ಪಾಟೀಲ ಬಿಡುಗಡೆ ಮಾಡಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭಗೊಳ್ಳಲಿದ್ದು, ಅಭಿವೃದ್ಧಿಗೆ ಜನತೆ ಸಹಕರಿಸಬೇಕು ಎಂದರು.ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಗದಿಗೆಪ್ಪ ಕಿರೇಸೂರ, ಸಂಗಪ್ಪ ಜಿಡ್ಡಿಬಾಗಿಲ, ಈಶ್ವರ ಕಡಬಲಕಟ್ಟಿ, ಹನುಮಂತ ತಳ್ಳಿಕೇರಿ, ರಂಗವ್ವ ಭಜಂತ್ರಿ, ದಾವಲಸಾಬ್ ಬಾಡಿನ, ಮಲ್ಲಯ್ಯ ಮಹಾಪುರುಷಮಠ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.