ಸಾರಾಂಶ
ಕರ್ನಾಟಕ ಲೋಕಸೇವಾ ಆಯೋಗವು 2023-24ನೇ ಸಾಲಿನ ಗೆಜೆಟೆಡ್ ಪ್ರೊಬೆಷನರ್ 384 ಹುದ್ದೆಗಳ ನೇಮಕಕ್ಕೆ ನಡೆದ ಪೂರ್ವಭಾವಿ ಮರು ಪರೀಕ್ಷೆ ಭಾನುವಾರ ಸುಸೂತ್ರವಾಗಿ ಮುಕ್ತಾಯಗೊಂಡಿತು.
ಹಾವೇರಿ: ಕರ್ನಾಟಕ ಲೋಕಸೇವಾ ಆಯೋಗವು 2023-24ನೇ ಸಾಲಿನ ಗೆಜೆಟೆಡ್ ಪ್ರೊಬೆಷನರ್ 384 ಹುದ್ದೆಗಳ ನೇಮಕಕ್ಕೆ ನಡೆದ ಪೂರ್ವಭಾವಿ ಮರು ಪರೀಕ್ಷೆ ಭಾನುವಾರ ಸುಸೂತ್ರವಾಗಿ ಮುಕ್ತಾಯಗೊಂಡಿತು.
ನಗರದ ಜಿ.ಎಚ್.ಕಾಲೇಜು, ಗಾಂಧಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನಗರದ ಸರ್ಕಾರಿ ಪದವಿ ಪೂರ್ವ ಬಾಲಕರ ಕಾಲೇಜು, ಇಜಾರಿಲಕಮ್ಮಾಪೂರ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ನಗರದ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಭೇಟಿ ನೀಡಿ ಪರಿಶೀಲಸಿದರು.ಪರೀಕ್ಷೆಗಳು ನಡೆಯುತ್ತಿರುವ ಕೊಠಡಿಗಳಿಗೆ ತೆರಳಿ ಪರೀಕ್ಷೆಯು ಸುಗಮವಾಗಿ ನಡೆಯುತ್ತಿರುವ ಬಗ್ಗೆ ಪರಿಶೀಲಿಸಿದರು. ಪರೀಕ್ಷಾ ಕೇಂದ್ರಗಳಿಗೆ ಪೊಲೀಸ್ ಇಲಾಖೆಯಿಂದ ಕೈಗೊಂಡಿರುವ ಬಿಗಿಭದ್ರತೆ ಮತ್ತು ಪರೀಕ್ಷಾ ಕೊಠಡಿಯಲ್ಲಿ ಅಳವಡಿಸಿದ ಸಿಸಿಟಿವಿ ಕ್ಯಾಮೆರಾ, ಪರೀಕ್ಷಾರ್ಥಿಗಳು ಕೊಠಡಿ ಪ್ರವೇಶಿಸುವಾಗ ಹ್ಯಾಂಡ್ ಮೆಟಲ್ ಡಿಟೇಕ್ಟರ್ ಮತ್ತು ಮೊಬೈಲ್ ನೆಟ್ವರ್ಕ್ ಕಡಿತಗೊಳಿಸಲು ಅಳವಡಿಸಿರುವ ಜಾಮರ್, ವಿದ್ಯುತ್ ವ್ಯವಸ್ಥೆ ಇವುಗಳ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ ಪಡೆದು ಪರಿಶೀಲಿಸಿದರು. ಪರೀಕ್ಷೆಗಳು ಸುಗಮವಾಗಿ ನಡೆಯಬೇಕು ಯಾವುದೇ ಗೊಂದಲ ಉಂಟಾಗಬಾರದು ಪರೀಕ್ಷಾ ಕೊಠಡಿಯಲ್ಲಿ ಸಮಸ್ಯೆ ಆದಲ್ಲಿ ಕೂಡಲೇ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರುವಂತೆ ಪರೀಕ್ಷೆಗೆ ನೇಮಕಗೊಂಡ ಮೇಲ್ವಿಚಾರಕರಿಗೆ ಸೂಚಿಸಿದರು.
ಕಟ್ಟುನಿಟ್ಟಿನ ವಸ್ತ್ರ ಸಂಹಿತೆ ಬಗ್ಗೆ ಅಭ್ಯರ್ಥಿಗಳಿಗೆ ಮೊದಲೇ ಸೂಚನೆ ನೀಡಿದ್ದರೂ ಕೆಲವರು ಉದ್ದ ತೋಳಿನ ಅಂಗಿ ತೊಟ್ಟಿದ್ದರು. ಮಹಿಳಾ ಅಭ್ಯರ್ಥಿಗಳನೇಕರು ಕೂಡ ಉದ್ದ ತೋಳಿನ ಚೂಡಿದಾರ್ ಧರಿಸಿ ಆಗಮಿಸಿದ್ದರು. ಉದ್ದನೆಯ ತೋಳಿನ ಭಾಗವನ್ನು ಪರೀಕ್ಷಾ ಕೇಂದ್ರದ ಸಿಬ್ಬಂದಿ ಕತ್ತರಿ ಹಾಕಿ ಕಟ್ ಮಾಡಿದರು.