ನಟ ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

| Published : Jul 23 2025, 01:45 AM IST

ಸಾರಾಂಶ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 7 ಆರೋಪಿಗಳ ಜಾಮೀನು ರದ್ದು ಕೋರಿ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಮೇಲ್ಮನವಿ ಅರ್ಜಿಯ ವಿಚಾರಣೆ ಜು.24ಕ್ಕೆ ಮುಂದೂಡಿಕೆಯಾಗಿದೆ.

ಕನ್ನಡಪ್ರಭ ವಾರ್ತೆ ನವದೆಹಲಿಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 7 ಆರೋಪಿಗಳ ಜಾಮೀನು ರದ್ದು ಕೋರಿ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಮೇಲ್ಮನವಿ ಅರ್ಜಿಯ ವಿಚಾರಣೆ ಜು.24ಕ್ಕೆ ಮುಂದೂಡಿಕೆಯಾಗಿದೆ.

ಕರ್ನಾಟಕ ಹೈಕೋರ್ಟ್‌ ನೀಡಿರುವ ಜಾಮೀನು ರದ್ದುಗೊಳಿಸುವಂತೆ ಕೋರಿ ಬೆಂಗಳೂರು ಪೊಲೀಸರು ಸಲ್ಲಿಸಿರುವ ಮೇಲ್ಮನವಿ ಅರ್ಜಿಯ ವಿಚಾರಣೆ ಮಂಗಳವಾರ ನಡೆಯಬೇಕಿತ್ತು. ಆದರೆ, ದರ್ಶನ್ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಲಿಲ್ಲ. ಅವರು ಗೈರಾದ ಕಾರಣ ನಟನ ಪರ ಸಿದ್ಧಾರ್ಥ್ ದಾವೆ ಕೋರ್ಟ್‌ಗೆ ಹಾಜರಾದರು.

ಹೀಗಾಗಿ, ತಾವು ಈ ಕೇಸ್‌ನ ಅಧ್ಯಯನ ನಡೆಸಬೇಕು, ಅದಕ್ಕಾಗಿ ಒಂದು ದಿನದ ಕಾಲಾವಕಾಶ ನೀಡಬೇಕು ಎಂದು ದಾವೆಯವರು ನ್ಯಾಯಪೀಠಕ್ಕೆ ಮನವಿ ಮಾಡಿಕೊಂಡರು. ಅವರ ಮನವಿಯನ್ನು ಪರಿಗಣಿಸಿದ ನ್ಯಾಯಾಲಯ, ವಿಚಾರಣೆಯನ್ನು ಜು.24ಕ್ಕೆ ಮುಂದೂಡಿತು.

ಈ ಮಧ್ಯೆ, ಲಿಖಿತ ರೂಪದಲ್ಲಿ ದಾಖಲೆ ತಯಾರಿಡಲು ದರ್ಶನ್‌ ಪರ ವಕೀಲರಿಗೆ ಕೋರ್ಟ್ ಸೂಚನೆ ನೀಡಿದ್ದು, ಅಂದೆ ತೀರ್ಪು ಬರುವ ಸಾಧ್ಯತೆಯಿದೆ. ಕಳೆದ ಗುರುವಾರ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‌, ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿರುವ ಕರ್ನಾಟಕ ಹೈಕೋರ್ಟ್‌ ತೀರ್ಪಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು. ++++2024ರ ಜೂ.8ರಂದು ರೇಣುಕಾಸ್ವಾಮಿ ಅವರನ್ನು ಅಪಹರಿಸಿ ಕೊಲೆ ಮಾಡಿದ್ದಾರೆ ಎಂಬ ಆರೋಪದಡಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಮಂದಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದರು. ಬಂಧನವಾಗಿ 6 ತಿಂಗಳ ಬಳಿಕ, 2024ರ ಡಿ.13 ರಂದು ಹೈಕೋರ್ಟ್‌ ಅವರಿಗೆ ಜಾಮೀನು ನೀಡಿತ್ತು. ಹೈಕೋರ್ಟ್‌ ದರ್ಶನ್‌, ಪವಿತ್ರಾ ಸೇರಿ 7 ಮಂದಿಗೆ, ವಿಚಾರಣಾಧೀನ ನ್ಯಾಯಾಲಯ ಇತರರಿಗೆ ಜಾಮೀನು ಮಂಜೂರು ಮಾಡಿತ್ತು. ಈ 7 ಮಂದಿಗೆ ಹೈಕೋರ್ಟ್‌ ನೀಡಿರುವ ಜಾಮೀನು ಪ್ರಶ್ನಿಸಿ ಬೆಂಗಳೂರು ನಗರ ಪೊಲೀಸರು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.