ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ವಿವಿಧ ಸಭೆ,ಸಮಾರಂಭ, ಕಾರ್ಯಕ್ರಮಗಳು ಯಶಸ್ವಿಯಾಗಬೇಕಾದರೆ ಪಾಕತಜ್ಞರ ಪಾತ್ರ ಬಹಳ ಮಹತ್ವ ಹೊಂದಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಸ್. ರಘುನಾಥ್ ಅಭಿಪ್ರಾಯಪಟ್ಟರು.ನಗರದ ಹಾರನಹಳ್ಳಿ ರಾಮಸ್ವಾಮಿ ಸಮುದಾಯ ಭವನದಲ್ಲಿ ಜಿಲ್ಲಾ ವಿಪ್ರ ಪಾಕತಜ್ಞರ 21ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾವು ಮಾಡುವ ವೃತ್ತಿಯನ್ನು ಗೌರವಿಸಬೇಕು, ಸಮಾರಂಭಗಳಲ್ಲಿ ರುಚಿಕರವಾಗಿ ಅಡುಗೆ ಸಿದ್ಧಗೊಳಿಸಿದಾಗ ಮಾತ್ರ ಕಾರ್ಯಕ್ರಮ ಯಶಸ್ವಿಯಾಗುತ್ತದೆ. ಬಂದವರೆಲ್ಲರೂ ಊಟ ಚೆನ್ನಾಗಿತ್ತು ಎಂದು ಹೇಳುತ್ತಾರೆ ಹೊರತು ಬೇರೇನನ್ನೂ ಹೇಳುವುದಿಲ್ಲ, ಪಾಕತಜ್ಞರ ಸಂಘಟನೆ ಬಹಳ ಅಗತ್ಯ ಇದೆ. ತಮಗೆ ಎಷ್ಟೇ ಆಯಾಸವಾಗಿದ್ದರೂ ಸಹ ನಗುಮೊಗದಲ್ಲಿ ಅಡುಗೆ ಮಾಡಿ ಬಡಿಸುತ್ತಿರುವ ನಿಮ್ಮ ಸೇವೆ ಶ್ಲಾಘನೀಯ ಎಂದು ಹೇಳಿ, ರಾಜ್ಯ ಸಂಘಕ್ಕೆ ಸದಸ್ಯರಾಗಿರಿ ಎಂದು ಮನವಿ ಮಾಡಿದರು.
ಹಾಸನ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಮಂಜುನಾಥ್ ಮೂರ್ತಿ ಮಾತನಾಡಿ, ಪಾಕ ತಜ್ಞರು ಪರಿಶ್ರಮ ಮತ್ತು ತಮ್ಮ ಹಲವು ಸಮಸ್ಯೆಗಳ ನಡುವೆಯೂ ಅವರು ನೀಡುವ ಸೇವೆ ನಿಜಕ್ಕೂ ಸಂತೋಷದಾಯಕ ಎಂದು ಶ್ಲಾಘಿಸಿ, ಹಾಸನ ಜಿಲ್ಲಾ ಬ್ರಾಹ್ಮಣ ಮಹಾಸಭಾ ಸದಸ್ಯತ್ವವನ್ನು ಜಿಲ್ಲಾ ಸಮಾಜ ಬಾಂಧವರು ಪಡೆಯಬೇಕೆಂದು ಅವರು ಮನವಿ ಮಾಡಿದರು. ಅರಸೀಕೆರೆ ತಾಲೂಕು ಬ್ರಾಹ್ಮಣ ಸಂಘದ ಉಪಾಧ್ಯಕ್ಷ ಹಿರಣ್ಣಯ್ಯ ಮಾತನಾಡಿ, ಮುಂದಿನ ದಿನಗಳಲ್ಲಿ ಅಡುಗೆಯವರು ಸಿಗುವುದು ಕಷ್ಟವಾಗುತ್ತದೆ, ಮಕ್ಕಳು ಓದಿ ನೌಕರಿಯತ್ತ ಹೋಗುತ್ತಿದ್ದಾರೆ. ಇದು ಒಂದು ಸಮಾಜ ಸೇವೆ ಮತ್ತು ಇದರಲ್ಲೂ ಉತ್ತಮವಾಗಿ ಬದುಕನ್ನು ಕಟ್ಟಿಕೊಳ್ಳಬಹುದು ಎಂಬುದಕ್ಕೆ ನಮ್ಮೆದುರಿಗೆ ನಿದರ್ಶನಗಳು ಇವೆ. ಈ ವೃತ್ತಿಯಲ್ಲಿಯೇ ಹಲವರು ಯಶಸ್ಸನ್ನು ಕಂಡಿದ್ದಾರೆ, ವೃತ್ತಿಯನ್ನು ಗೌರವಿಸಬೇಕು ಎಂದರು.ಅರಸೀಕೆರೆ ತಾಲೂಕು ಬ್ರಾಹ್ಮಣ ಸಂಘದ ಗೌರವ ಅಧ್ಯಕ್ಷ ರಮೇಶ್ ಮಾತನಾಡಿ, ಅರಸೀಕೆರೆಯಲ್ಲಿ ಇಂತಹ ಒಂದು ಕಾರ್ಯಕ್ರಮ ನಡೆಯುತ್ತಿರುವುದು ಸಂತೋಷ ತಂದಿದೆ, ರಾಜ್ಯಾಧ್ಯಕ್ಷರು ಕಾರ್ಯಕ್ರಮಕ್ಕೆ ಆಗಮಿಸಿ ಮೆರಗು ನೀಡಿದ್ದಾರೆ. ಇಲ್ಲಿನ ಪಾಕ ತಜ್ಞರು ಸಮಾಜದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದು, ಉತ್ತಮ ಸೇವೆಯನ್ನು ನೀಡುತ್ತಿದ್ದಾರೆ ಎಂದು ಹೇಳಿ, ಕಾರ್ಯಕ್ರಮ ಆಯೋಜನೆಗೆ ಅಭಿನಂದನೆ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಪಾಕ ತಜ್ಞರ ಸಂಘದ ಅಧ್ಯಕ್ಷ ಎಸ್. ವೆಂಕಟೇಶ್, ಕಿಂಕೋ ನಾಗರಾಜ್, ಅರಸೀಕೆರೆ ತಾಲೂಕು ಬ್ರಾಹ್ಮಣ ಸಂಘದ ಕಾರ್ಯದರ್ಶಿ ಸುಬ್ರಹ್ಮಣ್ಯ, ವಿಪ್ರ ನೌಕರರ ಸಂಘದ ಅಧ್ಯಕ್ಷ ಮೋಹನ್ ಕುಮಾರ್, ಗಾಯತ್ರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹರೀಶ್, ಸೀತಾ ಮಹಿಳಾ ಸಂಘದ ಅಧ್ಯಕ್ಷೆ ಪ್ರೇಮಾ, ಯುವಕ ಸಂಘದ ಅಧ್ಯಕ್ಷ ಚೈತನ್ಯ ಕಶ್ಯಪ್, ಅರಸೀಕೆರೆ ತಾಲೂಕು ಪಾಕ ತಜ್ಞರ ಸಂಘದ ಅಧ್ಯಕ್ಷ ರಾಘವೇಂದ್ರ (ರಾಘು) ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾ ಪಾಕ ತಜ್ಞರ ಕ್ಷೇಮಾಭಿವೃದ್ಧಿ ಸಂಘದ ಸರ್ವ ಸದಸ್ಯರ ಸಭೆಯು ಅಧ್ಯಕ್ಷ ವೆಂಕಟೇಶ್ ಅವರ ನೇತೃತ್ವದಲ್ಲಿ ನೆರವೇರಿತು.