ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಶುಚಿಗೊಂಡ ಮನದಲ್ಲಿ ಪರಮಾತ್ಮನ ದರ್ಶನ ಸಾಧ್ಯವಿದೆ ಎಂದು ಲಿಂಗಾಯತ ಮಹಾ ಮಠದ ಪ್ರಭುದೇವ ಸ್ವಾಮಿ ಅಭಿಪ್ರಾಯಪಟ್ಟರು.ಲಿಂಗಾಯತ ಮಹಾ ಮಠದಿಂದ ನಗರದ ಬಸವಗಿರಿಯಲ್ಲಿ ಸೋಮವಾರ ಆಯೋಜಿಸಿದ್ದ ಪ್ರಭುದೇವ ಸ್ವಾಮೀಜಿ ಅವರ 21 ದಿನಗಳ ಶಿವಯೋಗ ಸಾಧನೆ ಹಾಗೂ ಮೌನ ಅನುಷ್ಠಾನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಪರಮಾತ್ಮನ ಒಲುಮೆಯಾಗಲು ಮನಸ್ಸೆಂಬ ಮನೆಯನ್ನು ಖಾಲಿ ಮಾಡಬೇಕು. ವಿಷಯಗಳನ್ನು ತ್ಯಜಿಸಬೇಕು ಎಂದು ತಿಳಿಸಿದರು.
ತನ್ನೊಳಗಿನ ಕಸ ಗುಡಿಸಿಕೊಳ್ಳಲು ಅನುಷ್ಠಾನ ಸಹಾಯಕ. ಅಂತರಂಗದ ವಿಕಾಸ ಮತ್ತು ಸಮಾಜ ಸೇವೆಗೆ ಹೆಚ್ಚು ಸದೃಢವಾಗಲು ಅನುಷ್ಠಾನ ಕೈಗೊಳ್ಳಲಾಗಿದೆ. ಗುರು ಕೃಪೆಯಿಂದ ಅನುಷ್ಠಾನ ಯಶಸ್ವಿಯಾಗಿದೆ ಎಂದು ಹೇಳಿದರು.ಭಾಲ್ಕಿ ಹಿರೇಮಠ ಸಂಸ್ಥಾನ ಗುರುಬಸವ ಪಟ್ಟದ್ದೇವರು ಸಾನಿಧ್ಯ ವಹಿಸಿ ಮಾತನಾಡಿ, ಪ್ರಭುದೇವ ಸ್ವಾಮೀಜಿ ಅವರಲ್ಲಿ ಅದ್ಭುತ ಪ್ರತಿಭೆ ಇದೆ. ಕಿರಿಯ ವಯಸ್ಸಿನಲ್ಲೇ ಈ ಭಾಗದ ಅತ್ಯುತ್ತಮ ಪ್ರವಚನಕಾರರಲ್ಲಿ ಒಬ್ಬರಾಗಿ ಹೊರ ಹೊಮ್ಮಿದ್ದಾರೆ. ಸಮಾಜದಲ್ಲಿನ ಮೌಢ್ಯ, ಮೂಢನಂಬಿಕೆ, ಕಂದಾಚಾರಗಳನ್ನು ಕಳೆಯುತ್ತಿದ್ದಾರೆ. ಅಕ್ಕ ಅನ್ನಪೂರ್ಣತಾಯಿ ಅವರಂತೆ ಸೇವೆಗೈಯುವ ಮೂಲಕ ಎತ್ತರಕ್ಕೆ ಏರಿದ್ದಾರೆ ಎಂದರು.
ಹುಲಸೂರಿನ ಶಿವಾನಂದ ಸ್ವಾಮೀಜಿ ಮಾತನಾಡಿ, ಅಕ್ಕ ಅನ್ನಪೂರ್ಣತಾಯಿ ಅವರು ಬಸವ ತತ್ವದ ಧೃವತಾರೆಯಾಗಿ ಬೆಳಗಿದವರು. ಅವರ ಕರಕಮಲ ಸಂಜಾತರಾದ ಪ್ರಭುದೇವರು ಅದೇ ದಾರಿಯಲ್ಲಿ ಮುನ್ನಡೆಯುತ್ತಿದ್ದಾರೆ ಎಂದು ತಿಳಿಸಿದರು.ಬರುವ ಜನಗಣತಿಯಲ್ಲಿ ಲಿಂಗಾಯತರು ಉಪ ಜಾತಿಗಳನ್ನು ಬರೆಸದೆ ಲಿಂಗಾಯತ ಎಂದೇ ಬರೆಸಬೇಕು. ಲಿಂಗಾಯತ ಯಾವತ್ತೂ ಸ್ವತಂತ್ರ ಧರ್ಮ. ನಾವು ನಡೆಸುತ್ತಿರುವ ಹೋರಾಟ ಯಾರ ವಿರುದ್ಧವೂ ಅಲ್ಲ. ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗಾಗಿ ಮಾತ್ರ ಎಂದು ತಿಳಿಸಿದರು.
ಸಾಹಿತಿ ರಮೇಶ ಮಠಪತಿ ಮಾತನಾಡಿದರು. ನಿವೃತ್ತ ಶಿಕ್ಷಕ ಬಾಬುರಾವ್ ರಾಜೋಳೆ ಗೋರಟಾ, ಯೋಗಗುರು ಲೋಕೇಶ, ಪರುಷಕಟ್ಟೆ ಚನ್ನಬಸವಣ್ಣ ಇದ್ದರು.ಇದಕ್ಕೂ ಮುನ್ನ ಅನುಷ್ಠಾನದ ಗುಡಿಸಲಿನಲ್ಲಿ ಭಕ್ತಾದಿಗಳಿಂದ ಅಕ್ಕನ ಯೋಗಾಂಗ ತ್ರಿವಿಧಿಗಳ ಸಾಮೂಹಿಕ ಪಾರಾಯಣ ನಡೆಯಿತು.