ಕಂಪ್ಲಿ: ಪಟ್ಟಣದ ಮಾರುತಿನಗರದಲ್ಲಿರುವ ಉದ್ಯಾನವನದ ಕಟ್ಟಡದಲ್ಲಿ ಆರಂಭಗೊಳ್ಳಲಿರುವ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ಕಟ್ಟಡವನ್ನು ಅಪರ ಜಿಲ್ಲಾ ನ್ಯಾಯಾಧೀಶ ಬಿ.ಜಿ. ಪ್ರಮೋದ್ ಬುಧವಾರ ಭೇಟಿ ನೀಡಿ ವೀಕ್ಷಿಸಿದರು.
ನ್ಯಾಯಾಲಯ ಆರಂಭಕ್ಕೆ ಅಗತ್ಯವಿರುವ ಸೌಕರ್ಯಗಳ ಸ್ಥಿತಿಗತಿಗಳನ್ನು ಪರಿಶೀಲಿಸಿದ ಅವರು, ಕೆಲ ಸಣ್ಣಪುಟ್ಟ ಕಾಮಗಾರಿಗಳು ಇನ್ನೂ ಬಾಕಿ ಉಳಿದಿರುವುದನ್ನು ಗಮನಿಸಿ, ಅವುಗಳನ್ನು ತಕ್ಷಣವೇ ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.ನ್ಯಾಯಾಂಗ ಸೇವೆಗಳು ಜನಸಾಮಾನ್ಯರಿಗೆ ಸುಗಮವಾಗಿ ದೊರೆಯಬೇಕಾದ ಹಿನ್ನೆಲೆಯಲ್ಲಿ ಕಟ್ಟಡದ ಒಳಾಂಗಣ ವ್ಯವಸ್ಥೆಗಳು, ಕುಳಿತುಕೊಳ್ಳುವ ವ್ಯವಸ್ಥೆ, ದಾಖಲೆ ಸಂಗ್ರಹಣಾ ಕೊಠಡಿಗಳು, ನ್ಯಾಯಾಲಯ ಕೋಣೆಗಳ ಸಿದ್ಧತೆ ಸೇರಿದಂತೆ ಹಲವು ವಿಷಯಗಳನ್ನು ಪರಿಶೀಲಿಸಿದರು.
ಜತೆಗೆ ನ್ಯಾಯಾಲಯ ಆರಂಭವಾದ ನಂತರ ಯಾವುದೇ ರೀತಿಯ ಅಡಚಣೆ ಉಂಟಾಗದಂತೆ ಪೂರ್ವಸಿದ್ಧತೆಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳುವಂತೆ ತಿಳಿಸಿದರು.ಇದೇ ವೇಳೆ ಪ್ರಜಾಸೌಧದ ಸಮೀಪದಲ್ಲಿ ಭವಿಷ್ಯದಲ್ಲಿ ನಿರ್ಮಾಣಗೊಳ್ಳಲಿರುವ ಶಾಶ್ವತ ನ್ಯಾಯಾಲಯ ಕಟ್ಟಡಕ್ಕಾಗಿ ಸರ್ಕಾರದಿಂದ ಮೀಸಲಾದ ಜಾಗ ವೀಕ್ಷಣೆ ಮಾಡಿದರು. ಆ ಜಾಗದ ಸೂಕ್ತತೆ, ಅಗತ್ಯ ಮೂಲಸೌಕರ್ಯಗಳ ಅಭಿವೃದ್ಧಿ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಈ ಕುರಿತು ತಾಲೂಕು ವಕೀಲರ ಬಳಗದ ಕಾರ್ಯದರ್ಶಿ ಹರೀಶ್ ಅಯ್ಯೋದಿ ಮಾತನಾಡಿ, ಹೊಸದಾಗಿ ಆರಂಭಗೊಳ್ಳಲಿರುವ ನ್ಯಾಯಾಲಯದ ಮೂಲಭೂತ ಸೌಲಭ್ಯಗಳನ್ನು ಪರಿಶೀಲಿಸಿದ ನ್ಯಾಯಾಧೀಶರು ತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ಏ.25ರಂದು ನ್ಯಾಯಾಲಯ ಅಧಿಕೃತವಾಗಿ ಕಾರ್ಯಾರಂಭ ಮಾಡಲಿದ್ದು, ಇದರಿಂದ ಸ್ಥಳೀಯ ಜನತೆಗೆ ನ್ಯಾಯಾಂಗ ಸೇವೆಗಳು ಇನ್ನಷ್ಟು ಸಮೀಪದಲ್ಲೇ ದೊರೆಯಲಿವೆ ಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ ಮಾತನಾಡಿ, ನ್ಯಾಯಾಲಯ ಆವರಣದ ಸುರಕ್ಷತೆ ಮತ್ತು ಸ್ವಚ್ಛತೆಯ ಮೇಲೆ ವಿಶೇಷ ಗಮನ ಹರಿಸುವಂತೆ ನ್ಯಾಯಾಧೀಶರು ಸೂಚಿಸಿದ್ದಾರೆ ಎಂದರು.ಆವರಣದ ಗೇಟ್ ಅಳವಡಿಕೆ, ಶೌಚಾಲಯಗಳ ವ್ಯವಸ್ಥೆ, ಸುತ್ತಮುತ್ತಲಿನ ಪರಿಸರ ಸ್ವಚ್ಛತೆ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ವಕೀಲರ ಬಳಗದ ಪದಾಧಿಕಾರಿಗಳಾದ ಪ್ರಭಾಕರರಾವ್, ಅಯ್ಯಪ್ಪ, ರುದ್ರಪ್ಪ, ಟಿ. ಶಿವಪ್ಪ, ಮಾರುತಿಸಿಂಗ್ ಉಪಸ್ಥಿತರಿದ್ದರು. ಜೊತೆಗೆ ಎಎಸ್‌ಐ ಬಸವರಾಜ, ಲೋಕೋಪಯೋಗಿ ಇಲಾಖೆಯ ಕಿರಿಯ ಎಂಜಿನಿಯರ್, ಗುತ್ತಿಗೆದಾರರು, ಅಧಿಕಾರಿಗಳು ಭಾಗವಹಿಸಿದ್ದರು.