ಕಂಪ್ಲಿ: ತಾಲೂಕಿನ ಭದ್ರತೆ ಮತ್ತು ತುರ್ತು ಸೇವೆಗಳ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಮುಂದಾಗಿದ್ದೇವೆ ಎಂದು ಶಾಸಕ ಜೆ.ಎನ್.ಗಣೇಶ ತಿಳಿಸಿದರು.
ತಾಲೂಕಿನ ನಂ.10 ಮುದ್ದಾಪುರ ಗ್ರಾಪಂ ವ್ಯಾಪ್ತಿಯ ಪ್ರಜಾಸೌಧ ಸಮೀಪದಲ್ಲಿ ರಾಜ್ಯ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕಾಗಿ ಕೆಕೆಆರ್‌ಡಿಬಿಯಿಂದ ₹2.18 ಕೋಟಿ ಅನುದಾನದಲ್ಲಿ ನಿರ್ಮಾಣಗೊಳ್ಳುತ್ತಿರುವ ಅಗ್ನಿಶಾಮಕ ಠಾಣೆ ಕಟ್ಟಡದ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.ತಾಲೂಕಿನಲ್ಲಿ ಆಗಾಗ್ಗೆ ಸಂಭವಿಸುವ ಬೆಂಕಿ ಅವಘಡಗಳನ್ನು ನಿಯಂತ್ರಿಸಲು ಇದುವರೆಗೆ ಗಂಗಾವತಿ, ಕುರುಗೋಡು, ಹೊಸಪೇಟೆಯಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಬೇಕಾಗುತ್ತಿತ್ತು. ಇದರಿಂದ ವಿಳಂಬ ಉಂಟಾಗಿ ನಷ್ಟ ಹೆಚ್ಚಾಗುತ್ತಿತ್ತು. ಈಗ ಸ್ಥಳೀಯವಾಗಿ ಅಗ್ನಿಶಾಮಕ ಠಾಣೆ ನಿರ್ಮಾಣವಾಗುತ್ತಿರುವುದರಿಂದ ತುರ್ತು ಪರಿಸ್ಥಿತಿಗಳಲ್ಲಿ ತಕ್ಷಣ ಸ್ಪಂದನೆ ಸಾಧ್ಯವಾಗಲಿದೆ..ಅಗ್ನಿಶಾಮಕ ಠಾಣೆ ನಿರ್ಮಾಣಕ್ಕಾಗಿ ಸುಮಾರು 2 ಎಕರೆ ಭೂಮಿ ಮೀಸಲಿಡಲಾಗಿದೆ. ₹2.18 ಕೋಟಿ ವೆಚ್ಚದಲ್ಲಿ ಆಧುನಿಕ ಸೌಲಭ್ಯಗಳೊಂದಿಗೆ ಎರಡು ವಾಹನ ಗ್ಯಾರೇಜುಗಳನ್ನು ಒಳಗೊಂಡ ಕಟ್ಟಡ ನಿರ್ಮಿಸಲಾಗುತ್ತದೆ ಎಂದು ಹೇಳಿದರು.
ಇನ್ನು ಪಟ್ಟಣದಲ್ಲಿ ಬಸ್ ಡಿಪೋ ನಿರ್ಮಾಣಕ್ಕೆ ಅನುದಾನ ಇದ್ದರೂ ಜಾಗದ ಕೊರತೆ ಎದುರಾಗಿದೆ. ತಾಲೂಕು ಕ್ರೀಡಾಂಗಣಕ್ಕೂ ಸೂಕ್ತ ಸ್ಥಳದ ಅಗತ್ಯವಿದೆ ಎಂದು ಹೇಳಿದರು.ಮುಂದಿನ ಕಂಪ್ಲಿ-ತುಂಗಭದ್ರಾ ನದಿ ಸೇತುವೆ ನಿರ್ಮಾಣ ಹಾಗೂ ಸೋಮಪ್ಪ ಕೆರೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಪಟ್ಟಣದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ₹4.60 ಕೋಟಿ ವೆಚ್ಚದಲ್ಲಿ 36 ರಸ್ತೆಗಳನ್ನು ಅಭಿವೃದ್ಧಿಪಡಿಸುವ ಯೋಜನೆ ರೂಪಿಸಲಾಗಿದೆ. 5 ಮತ್ತು 12ನೇ ವಾರ್ಡುಗಳಲ್ಲಿ ₹33 ಕೋಟಿ ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಮಹತ್ವಾಕಾಂಕ್ಷಿ ಯೋಜನೆಯೂ ಸಿದ್ಧವಾಗಿದೆ ಎಂದು ವಿವರಿಸಿದರು.
ಪ್ರಜಾಸೌಧ ಮುಂಭಾಗದ ಅಭಿವೃದ್ಧಿಗೆ ₹3 ಕೋಟಿ ಮೀಸಲಿಡಲಾಗಿದೆ. ಆ ಪ್ರದೇಶದಲ್ಲಿ ಇರುವ ಆಪು ಮತ್ತು ಜಲಸಸ್ಯಗಳನ್ನು ತೆರವುಗೊಳಿಸಿ, ಸಿಸಿ ಅಳವಡಿಸಿ ಸುಧಾರಣೆಗೊಳಿಸಿದ ನಂತರ ಮುಖ್ಯಮಂತ್ರಿ ಅವರನ್ನು ಆಹ್ವಾನಿಸಿ ಉದ್ಘಾಟನೆ ನೆರವೇರಿಸಲಾಗುವುದು ಎಂದು ತಿಳಿಸಿದರು.
ಪಟ್ಟಣದ ಬಸ್ ಶೆಲ್ಟರ್‌ಗಳ ದುರಸ್ತಿಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ಅವಶ್ಯಕತೆಗಳ ಪಟ್ಟಿ ತಯಾರಿಸಿ, ಅನುದಾನ ಲಭ್ಯವಾದ ಬಳಿಕ ದುರಸ್ತಿ ಅಥವಾ ಹೊಸ ನಿರ್ಮಾಣ ಕೈಗೊಳ್ಳಲಾಗುವುದು ಎಂದರು.ಬಳಿಕ ತಾಲೂಕಿನ ಕಣಿವೆ ತಿಮ್ಮಲಾಪುರದಲ್ಲಿ ₹3 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಕೆ.ತಿಮ್ಮಾರೆಡ್ಡಿ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಹನುಮನಗೌಡ ಪೊಲೀಸ್ ಪಾಟೀಲ್, ಪೊಲೀಸ್ ಗೃಹ ನಿರ್ಮಾಣ ಮಂಡಳಿಯ ಎಇಇ ಚಂದ್ರಕಾಂತ, ಜೆ.ಇ. ರವಿಕುಮಾರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶ್ರೀನಿವಾಸ್ ರಾವ್, ಮುಖಂಡರಾದ ಕೆ.ಎಂ. ಹೇಮಯ್ಯ ಸ್ವಾಮಿ ಇದ್ದರು.