ಸಾರಾಂಶ
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ: ದೇವೂರ ಗ್ರಾಮದಲ್ಲಿ ಅಕ್ರಮ ಮದ್ಯ ಮತ್ತು ಮಾವಾದಲ್ಲಿ ಗಾಂಜಾ ಮಿಕ್ಸ್ ಮಾಡಿ ಮಾರಾಟ ಮಾಡಲಾಗುತ್ತಿದ್ದು, ಇದನ್ನು ತಡೆದು ಮಾರಾಟಗಾರರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮಹಿಳಾ ಘಟಕದಿಂದ ತಹಸೀಲ್ದಾರ್‌ಗೆ ದೂರು ನೀಡಲಾಯಿತು.
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ: ದೇವೂರ ಗ್ರಾಮದಲ್ಲಿ ಅಕ್ರಮ ಮದ್ಯ ಮತ್ತು ಮಾವಾದಲ್ಲಿ ಗಾಂಜಾ ಮಿಕ್ಸ್ ಮಾಡಿ ಮಾರಾಟ ಮಾಡಲಾಗುತ್ತಿದ್ದು, ಇದನ್ನು ತಡೆದು ಮಾರಾಟಗಾರರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮಹಿಳಾ ಘಟಕದಿಂದ ತಹಸೀಲ್ದಾರ್‌ಗೆ ದೂರು ನೀಡಲಾಯಿತು. ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರೇಣುಕಾ ಪಾಟೀಲ ಹಾಗೂ ಗ್ರಾಮದ ಮಹಿಳೆಯರು ಪಟ್ಟಣದ ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿ ತಹಸೀಲ್ದಾರ್ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿದರು.
ಈ ವೇಳೆ ಮಾತನಾಡಿದ ರೇಣುಕಾ ಪಾಟೀಲ, ಅಕ್ರಮ ಮದ್ಯ ಮತ್ತು ಮಾವಾದಲ್ಲಿ ಗಾಂಜಾ ಮಿಕ್ಸ್ ಮಾಡಿ ಸುಮಾರು ವರ್ಷಗಳಿಂದ ಗ್ರಾಮದ ಮನೆ, ಕಿರಾಣಿ, ಪಾನ್ ಶಾಪ್ ಅಂಗಡಿಗಳಲ್ಲಿ ರಾಜಾರೋಷವಾಗಿ ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕೂಡಲೇ ಅಕ್ರಮವಾಗಿ ಮಾರಾಟ ಮಾಡುತ್ತಿರುವವರ ಮೇಲೆ ಶಿಸ್ತು ಕ್ರಮ ಜರುಗಿಸಿ, ಮದ್ಯ ಹಾಗೂ ಮಾವಾ ಮಾರಾಟ ಬಂದ್ ಮಾಡಿಸಬೇಕು. ಕ್ರಮ ಕೈಗೊಳ್ಳಲು ನಿರ್ಲಕ್ಷ್ಯವಹಿಸಿದ ಅಧಿಕಾರಿಗಳಿಗೆ ನೋಟಿಸ್ ನೀಡಬೇಕು. ಇಲ್ಲದಿದ್ದಲ್ಲಿ ಎಲ್ಲಾ ಮಹಿಳೆಯರು ಏಕಕಾಲದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ. ದಿನನಿತ್ಯ ದುಡಿದು ಬಂದು ಜೀವಕ್ಕೆ ವಿಶ್ರಾಂತಿ ಇಲ್ಲದಂತಾಗಿದೆ ಎಂದು ಗ್ರಾಮದ ಮಹಿಳೆಯರು ಅಳಲು ತೋಡಿಕೊಂಡರು.
ಮನವಿ ಸ್ವೀಕರಿಸಿದ ತಹಸೀಲ್ದಾರ್ ಪ್ರಕಾಶ ಸಿಂದಗಿ ಅವರು, ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ, ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಈ ವೇಳೆ ಮಹಿಳೆಯರಾದ ಶೋಭಾ ಬಿರಾದಾರ, ಸುಂದ್ರವ್ವ ಪಾಟೀಲ, ಮಂಜುಳಾ ಬಿರಾದಾರ, ಶಾಂತಾಬಾಯಿ ಮೆಟಗಾರ, ಮಹಾದೇವಿ ಗುಡ್ಯಾಳ, ಎಂ.ಆರ್.ಪಾಟೀಲ್, ಪಾರ್ವತಿ ಪಾಟೀಲ, ಅನುಸೂಯಬಾಯಿ ಮಾದರ, ಮಹಾದೇವಿ ಮಾದರ, ನೀಲವ್ವ ಮಾದರ ಸೇರಿದಂತೆ ಇನ್ನು ಹಲವರು ಇದ್ದರು.