ಸಾರಾಂಶ
ಕನ್ನಡಪ್ರಭ ವಾರ್ತೆ ರಟ್ಟೀಹಳ್ಳಿ
ರೈತರು ಕೃಷಿಯಲ್ಲಿ ಆರ್ಥಿಕವಾಗಿ ಸದೃಢರಾಗಲು ಹಾಗೂ ಕೃಷಿಯಲ್ಲಿ ಸಾಧನೆ ಮಾಡಲು ಸರಕಾರ ಹತ್ತು ಹಲವು ಯೋಜನೆಗಳನ್ನು ರೂಪಿಸಿದ್ದು, ಅದರಲ್ಲಿ ಸಮಗ್ರ ಕೃಷಿ ಪದ್ಧತಿಯ ಶ್ರೇಷ್ಠತಾ ಕೇಂದ್ರ ಒಂದು ಕಾರಣ. ರೈತರು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.ಪಟ್ಟಣದಲ್ಲಿ ನೂತನವಾಗಿ ನಿರ್ಮಾಣವಾದ ಸಮಗ್ರ ಕೃಷಿ ಪದ್ಧತಿಯ ಶ್ರೇಷ್ಠತಾ ಕೇಂದ್ರ ನೂತನ ಕಟ್ಟಡ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಈ ಹಿಂದೆ ಸಮಗ್ರ ಕೃಷಿ ಪದ್ಧತಿಯ ಬಗ್ಗೆ ಮಾಹಿತಿ ಪಡೆಯಲು ದೂರದ ಧಾರವಾಡಕ್ಕೆ, ಹಾವೇರಿಗೆ ಹೋಗುವ ಪರಿಪಾಠವಿತ್ತು. ಪ್ರಸ್ತುತ ವರ್ಷದಿಂದ ರಟ್ಟೀಹಳ್ಳಿ ಪಟ್ಟಣದಲ್ಲೆ ನೂತನ ಕಟ್ಟಡ ನಿರ್ಮಾಣವಾದ್ದರಿಂದ ಸಮಯ ಹಾಗೂ ಹಣದ ಉಳಿತಾಯವಾಗಿ ತಮ್ಮ ಹತ್ತಿರದಲ್ಲೆ ಸಮಗ್ರ ಕೃಷಿ ಪದ್ಧತಿಯ ಪ್ರಾತ್ಯಕ್ಷಿಕೆ ಹಾಗೂ ತರಬೇತಿ, ಸುಧಾರಿತ ಕೃಷಿ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಅನುಕೂಲವಾಗಿದೆ. ಕಾರಣ ರೈತರು ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.ಹಾವೇರಿ ಜಿಲ್ಲೆಗೆ ಇನ್ಸೂರೆನ್ಸ್ ಕಂಪನಿಗಳು ಬರಲು ಹಿಂದೇಟು ಹಾಕುತಿದ್ದವು. ಇಂತಹ ಸಂದರ್ಭದಲ್ಲಿ ರೈತ ಸಂಘಟನೆಗಳು ರಾಜ್ಯಮಟ್ಟದಲ್ಲಿ ನಿರಂತರ ಹೋರಾಟ ಮಾಡಿದ ಫಲವಾಗಿ ಇನ್ಸೂರೆನ್ಸ್ ಕಂಪನಿಗಳು ಮುಂದೆ ಬಂದಿವೆ. ಕಾರಣ ರೈತರು ಬೆಳೆ ನಷ್ಟ ವಿಮೆ ತುಂಬುವಲ್ಲಿ ಹಿಂದೇಟು ಹಾಕದೆ ಪ್ರತಿಯೊಬ್ಬ ರೈತರು ಬೆಳೆ ವಿಮೆ ತುಂಬಿ ಎಂದು ಮನವಿ ಮಾಡಿದರು.
ಬೆಳೆ ವಿಮೆ ನ್ಯೂನ್ಯತೆಗಳ ಬಗ್ಗೆ ರೈತರು ನನ್ನ ಗಮನಕ್ಕೆ ತಂದಿದ್ದು, ಮುಂದಿನ ದಿನಗಳಲ್ಲಿ ಎಲ್ಲ ನ್ಯೂನ್ಯತೆಗಳನ್ನು ಸರಿಪಡಿಸಲಾಗುವುದು. ಕೆಲ ಪಂಚಾಯಿತಿ ಮಟ್ಟದಲ್ಲಿ ವಿಮೆ ಬರದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಸರಕಾರ ಬಾಕಿ ಉಳಿದ ಪಂಚಾಯತ್‌ಗಳನ್ನು ಸೇರಿಸಲು ಸೂಚಿಸಿದ್ದು, ಮುಂದಿನ ದಿನಗಳಲ್ಲಿ ರೈತರ ಯಾವುದೇ ಸಮಸ್ಯೆಗಳಿದ್ದರೂ ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾಗುತ್ತೇನೆ ಎಂದು ಭರವಸೆ ನೀಡಿದರು.ಇದೇ ಸಂದರ್ಭದಲ್ಲಿ ಕೃಷಿಕ ಸಮಾಜದ ತಾಲೂಕಾಧ್ಯಕ್ಷ ಜಿ. ಶಿವನಗೌಡ್ರ ಮಾತನಾಡಿ, ಭಾರತ ದೇಶ ಕೃಷಿ ಪ್ರಧಾನ ಎಂದು ಹೆಳಿಕೋಳ್ಳುವುದಷ್ಟೇ ಆಗಿದೆ. ರಾಜ್ಯ ಹಾಗೂ ಕೇಂದ್ರ ಸರಕಾರ ರೈತರ ಸಮಸ್ಯೆಗಳ ಬಗ್ಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಹಿಂದೆ ಬಿದ್ದಿವೆ. ರೈತ ಸಮುದಾಯಕ್ಕೆ ಎಲ್ಲ ರೀತಿಯಿಂದಲೂ ಅನ್ಯಾಯವಾಗುತ್ತಿದೆ. ಬೆಳೆ ಬೆಳೆಯುವ ಹಾಗೂ ಮಾರಾಟ ಮಾಡುವಾಗಲೂ ಸಾಕಷ್ಟು ತೊಂದರೆಗಳಾಗುತ್ತಿದ್ದರೂ ನಮ್ಮನ್ನಾಳುವ ಸರಕಾರ ಮಾತ್ರ ನಿರ್ಲಕ್ಷ್ಯ ವಹಿಸುತ್ತಿರುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಹೆಚ್ಚಿನ ಒತ್ತು ನೀಡಿ ಎಂದು ಮನವಿ ಮಾಡಿದರು.
ರೈತ ಸಂಘದ ತಾಲೂಕಾಧ್ಯಕ್ಷ ಶಂಕರಗೌಡ ಶಿರಗಂಬಿ ಮಾತನಾಡಿ, ಪ್ರಸ್ತುತ ಕೃಷಿ ಮಾಡುವ ಇಳಿಕೆ ಕಂಡಿದೆ. ಇದೇ ರೀತಿ ಮುಂದುವರಿದರೆ ದೇಶದ ಜನ ಅನ್ನ ತಿನ್ನುವ ಬದಲು ಹಣ ತಿನ್ನಬೇಕಾದ ಪರಿಸ್ಥಿತಿ ನಿರ್ಮಾಣವಾದರೂ ಅಚ್ಚರಿಯಿಲ್ಲ. ಆದ್ದರಿಂದ ಸರಕಾರಗಳು ಹೆಚ್ಚಿನ ಕಾಳಜಿವಹಿಲಿ ಎಂದರು.ರೈತ ಸಂಪರ್ಕ ಕೇಂದ್ರಗಳು ಕೇವಲ ಬೀಜ, ಗೊಬ್ಬರ ಕೊಡುವ ಕೇಂದ್ರಗಳಾಗಿವೆ. ಹೊರತು ಕಚೇರಿಗಳಲ್ಲಿ ಯಾವೊಬ್ಬ ಕೃಷಿ ಅಧಿಕಾರಿಗಳು ರೈತರಿಗೆ ಸುಧಾರಿತ ಕೃಷಿ ಬಗ್ಗೆ ಮಾಹಿತಿ ಸಿಗದಂತಾಗಿದೆ. ರಟ್ಟೀಹಳ್ಳಿ ತಾಲೂಕಿಗೆ ಕೇವಲ ಇಬ್ಬರು ಕೃಷಿ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದು ಅವರು ಕೂಡ ರೈತರ ಸಂಪರ್ಕಕ್ಕೆ ಸಿಗದಂತಾಗಿದ್ದಾರೆ ಎಂದು ಆರೋಪಿಸಿದರು.
ಇದೇ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕ ಎಚ್.ಬಿ. ಗೌಡಪ್ಪಳವರ, ಉಪ ಕೃಷಿ ಸಹಾಯಕ ಕೃಷಿ ನಿರ್ದೇಶಕ ರೇವಣಸಿದ್ದನಗೌಡ ಎಚ್.ಕೆ., ಎ.ಒ ಜಿ.ಎಂ. ಬತ್ತಿಕೊಪ್ಪ, ಅಖಿಲ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಹನುಮಂತಪ್ಪ ದ್ವೀಗಿಹಳ್ಳಿ, ಬಸನಗೌಡ ಗಂಗಪ್ಪಳವರ, ಪಿ.ಡಿ. ಬಸನಗೌಡ್ರ, ರವಿ ಮುದಿಯಪ್ಪನವರ, ವೀರನಗೌಡ ಪ್ಯಾಟಿಗೌಡ್ರ, ಪರಮೇಶಪ್ಪ ಕಟ್ಟೇಕಾರ, ಸುಮಿತ್ರಾ ಪಾಟೀಲ್, ಮಾಲತೇಶ ಕಮ್ಮಾರ ಮುಂತಾದವರು ಇದ್ದರು.