ಕನ್ನಡಪ್ರಭ ವಾರ್ತೆ ಬಾಗಲಕೋಟೆ

ನಿಯಮಿತ ಆರೋಗ್ಯ ತಪಾಸಣೆ ಹಾಗೂ ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಂಡಾಗ ಮಾತ್ರ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾದ್ಯವೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್ ಹೇಳಿದರು.

ನವನಗರದ ಧಾತ್ರಿ ಮಂಗಳ ಭವನದಲ್ಲಿ ಶನಿವಾರ ಜಿಲ್ಲಾ ಪೊಲೀಸ್ ಹಾಗೂ ಅಮರೇಶ್ವರ ಕ್ಲಿನಿಕ್, ಬಸವನ ಬಾಗೇವಾಡಿ ಇವರ ಸಹಯೋಗದಲ್ಲಿ ಆರಕ್ಷಕರ ನಡಿಗೆ ಆರೋಗ್ಯದ ಕಡೆಗೆ ಎಂಬ ದ್ಯೇಯ ಸಂಕಲ್ಪದೊಂದಿಗೆ ಹಮ್ಮಿಕೊಂಡ ಪೊಲೀಸ್ ಸಿಬ್ಬಂದಿಗೆ ಉಚಿವಾಗಿ ಆರೋಗ್ಯ ತಪಾಸಣೆ ಮತ್ತು ಔಷಧಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪೊಲೀಸ್ ಸಿಬ್ಬಂದಿ ಸಾರ್ವಜನಿಕ ಸೇವೆಯಲ್ಲಿ ಹಗಲಿರುಳು ನಿರಂತರ ಕರ್ತವ್ಯ ನಿರ್ವಹಿಸುತ್ತಿದ್ದು, ಒತ್ತಡದ ಬದುಕಿನ ನಡುವೆ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಗತ್ಯವಾಗಿದೆ. ಇಂತಹ ಆರೋಗ್ಯ ಶಿಬಿರಗಳು ಸಿಬ್ಬಂದಿಗಳಲ್ಲಿ ಆರೋಗ್ಯದ ಜಾಗೃತಿ ಮೂಡಿಸುವುದರ ಜತೆಗೆ ವಿವಿಧ ಕಾಯಿಲೆಗಳನ್ನು ಆರಂಭ ಹಂತದಲ್ಲಿಯೇ ಪತ್ತೆಹಚ್ಚಲು ಸಹಕಾರಿಯಾಗುತ್ತವೆ. ಬಸವನ ಬಾಗೇವಾಡಿಯ ಅಮರೇಶ್ವರ ಕ್ಲಿನಿಕ್ನ ನೇತೃತ್ವದಲ್ಲಿ ಉಚಿತವಾಗಿ ಆರೋಗ್ಯ ತಪಾಸಣೆ ಶಿಬಿರಿ ಹಮ್ಮಿಕೊಂಡಿರುವ ಕಾರ್ಯ ಶ್ಲಾಘನೀಯವಾದುದು ಎಂದರು.

ಅಮರೇಶ್ವರ ಕ್ಲಿನಿಕ್ನ ಡಾ.ಅಮರೇಶ ಮಿಣಜಗಿ ಮಾತನಾಡಿದರು.ಆರೋಗ್ಯ ಶಿಬಿರದಲ್ಲಿ ಅಮರೇಶ್ವರ ಕ್ಲಿನಿಕ್ ತಜ್ಞ ವೈದ್ಯರ ತಂಡ ತೂಕ, ರಕ್ತದೊತ್ತಡ ತಪಾಸಣೆ, ಮಧುವೇಹ ತಪಾಸಣೆ, ಇಸಿಜಿ ತಪಾಸಣೆ, ಕಣ್ಣಿನ ತಪಾಸಣೆ, ಎಲುಬು ಮತ್ತು ಕೀಲುಗಳ ತಪಾಸಣೆ, ಹೃದಯ ರೋಗ ತಪಾಸಣೆ, ಬಾಡಿ ಕಾಂಪೋಜಿಷನ್ ತಪಾಸಣೆ ಸೇರಿದಂತೆ ಎಲ್ಲ ತರಹದ ಸಾಮಾನ್ಯ ರೋಗಗಳ ಪರೀಕ್ಷೆಗಳನ್ನು ನಡೆಸಲಾಯಿತು. ಅಗತ್ಯವಿರುವ ಸಿಬ್ಬಂದಿಗೆ ವೈದ್ಯಕೀಯ ಸಲಹೆ, ಮುಂದಿನ ಚಿಕಿತ್ಸೆಗೆ ಮಾರ್ಗದರ್ಶನ ನೀಡಲಾಯಿತು.


ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಜಗದೀಶ ಸೇರಿದಂತೆ ಇತರೆ ಎಲ್ಲ ಪೊಲೀಸ್ ಸಿಬ್ಬಂದಿಗಳು ಶಿಬಿರದಲ್ಲಿ ಭಾಗವಹಿಸಿ ಉಚಿತ ಆರೋಗ್ಯ ತಪಾಸಣೆಯ ಸೌಲಭ್ಯವನ್ನು ಪಡೆದುಕೊಂಡರು. ಶಿಬಿರದಲ್ಲಿ ಆರೋಗ್ಯಕರ ಜೀವನಶೈಲಿ, ಸಮತೋಲನ ಆಹಾರ, ನಿಯಮಿತ ವ್ಯಾಯಾಮ ಹಾಗೂ ಅವಧಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದರು.

ನಮ್ಮ ದೇಶದ ರಕ್ಷಣೆ ಮಾಡುತ್ತಿರುವ ಸೈನಿಕರು ಒಂದು ಕಣ್ಣು ಆದರೆ, ಇನ್ನೊಂದು ಕಣ್ಣು ನಮ್ಮ ಪೊಲೀಸರು. ವಿಶ್ರಾಂತಿ ಇಲ್ಲದೇ ಹಗಲಿರುಳು ಸಾರ್ವಜನಿಕರ ಸೇವೆಯಲ್ಲಿ ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಯ ಆರೋಗ್ಯ ಬಗ್ಗೆ ಕಾಳಜಿ ವಹಿಸುವ ಉದ್ದೇಶದಿಂದ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ. ಕರ್ತವ್ಯದ ಒತ್ತಡದ ನಡುವೆಯು ಸಿಬ್ಬಂದಿ ತಮ್ಮ ಆರೋಗ್ಯ ನಿರ್ಲಕ್ಷಿಸದೇ ನಿಯಮಿತ ಆರೋಗ್ಯ ತಪಾಸಣೆ ಮಾಡಿಕೊಳ್ಳುವುದು ಅಗತ್ಯವಾಗಿದೆ. -ಡಾ.ಅಮರೇಶ ಮಿಣಜಗಿ, ಅಮರೇಶ್ವರ ಕ್ಲಿನಿಕ್‌