ಸದಾಚಾರ, ಸಾತ್ವಿಕ ಜೀವನ ಅಳವಡಿಸಿಕೊಳ್ಳಿ: ಪ್ರೊ. ಮಾರುತಿ ಶಿಡ್ಲಾಪೂರ

| Published : Sep 21 2025, 02:02 AM IST

ಸಾರಾಂಶ

ನಮ್ಮ ಆಹಾರ ಪದ್ಧತಿಗಳಲ್ಲಿ ಹೆಚ್ಚು ದೋಷದ ಮೂಲಕ ಆರೋಗ್ಯ ಸಮಸ್ಯೆ ಆವರಿಸುತ್ತಿವೆ.

ಹಾನಗಲ್ಲ: ಬೌದ್ಧಿಕ ವಿಕಾಸದ ಇಚ್ಛಾಶಕ್ತಿ ಹೊಂದಿ ಸಮಾಜಮುಖಿ ಜೀವನಾದರ್ಶಗಳನ್ನು ಶಿಕ್ಷಣದ ಮೂಲಕ ಸಂಪತ್ತನ್ನಾಗಿ ಪಡೆಯಬೇಕೆ ಹೊರತು ಮನಸ್ಸನ್ನು ವಿಕಾರಗೊಳಿಸುವ ಪ್ರಭಾವಳಿ ನಮ್ಮನ್ನು ಸುತ್ತಿಕೊಳ್ಳುವಂತಾಗಬಾರದು ಎಂದು ಸಾಹಿತಿ ಪ್ರೊ. ಮಾರುತಿ ಶಿಡ್ಲಾಪೂರ ತಿಳಿಸಿದರು.

ಪಟ್ಟಣದ ಕೆಎಲ್‌ಇ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಆಯೋಜಿಸಿದ್ದ ಸ್ವಾಸ್ಥ್ಯ ಸಂಕಲ್ಪ ಹಾಗೂ ಸುಜ್ಞಾನ ನಿಧಿ ಶಿಷ್ಯವೇತನ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮ ಆಹಾರ ಪದ್ಧತಿಗಳಲ್ಲಿ ಹೆಚ್ಚು ದೋಷದ ಮೂಲಕ ಆರೋಗ್ಯ ಸಮಸ್ಯೆ ಆವರಿಸುತ್ತಿವೆ. ನಮ್ಮ ಸಾಂಪ್ರದಾಯಿಕ ಅಡುಗೆ ಪದ್ಧತಿ ಬದಲಾಗಿ ಮಾರುಕಟ್ಟೆಯ ಸಿದ್ಧ ಅಡುಗೆ ಆಹಾರಕ್ಕೆ ಮಾರುಹೋಗುತ್ತಿದ್ದೇವೆ. ಎಲ್ಲೆಂದರಲ್ಲಿ ನಮ್ಮನ್ನು ದುರಭ್ಯಾಸಗಳಿಗೆ ಪ್ರಚೋದಿಸಿ ಆಕರ್ಷಿಸುವ ಬಣ್ಣ ಬಣ್ಣದ ಲೋಕದ ಬಗೆಗೆ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದರು.

ಯುವ ಸಮುದಾಯ ದಾರಿ ತಪ್ಪಿಸುವ ಪ್ರಕಟಣೆಗಳು ಅವರ ಇಡೀ ಬದುಕನ್ನೇ ಕುಬ್ಜಗೊಳಿಸುವ ಅಪಾಯ ತಂದೊಡ್ಡುತ್ತಿವೆ. ತಂದೆ- ತಾಯಿ, ಗುರು- ಹಿರಿಯರ ಮಾರ್ಗದರ್ಶನದಲ್ಲಿ ಶುದ್ಧ ಬದುಕಿಗಾಗಿ ನಮ್ಮನ್ನು ನಾವೇ ಸಿದ್ಧಪಡಿಸಿಕೊಳ್ಳದಿದ್ದರೆ ಅಪಾಯ ತಪ್ಪಿದ್ದಲ್ಲ. ದುಶ್ಚಟಗಳ ದಾಸರಾಗದೆ ಸದಾಚಾರ ಅಳವಡಿಸಿಕೊಂಡು ಸಾತ್ವಿಕ ಜೀವನ ವಿಧಾನ ಅನುಸರಿಸೋಣ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆಎಲ್‌ಇ ಕಾಲೇಜಿನ ಪ್ರಾಚಾರ್ಯ ದಿವಾಕರ ಕಮ್ಮಾರ, ಯುವಕರೇ ಈ ದೇಶದ ಸಂಪತ್ತು. ನಮ್ಮ ಬದುಕಿನ ಯಶಸ್ಸಿಗಾಗಿ ಶಿಕ್ಷಣದ ಜತೆ ಉತ್ತಮ ಸಂಸ್ಕಾರ ಪಡೆಯುವ ಅಗತ್ಯವಿದೆ. ಬದಲಾದ ಕಾಲಮಾನದಲ್ಲಿ ಜ್ಞಾನಾರ್ಜನೆ ತೀರ ಅವಶ್ಯ. ಸ್ಪರ್ಧಾತ್ಮಕ ಯುಗದಲ್ಲಿರುವ ನಾವು ಬದುಕಿನ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡೋಣ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಜಿಲ್ಲಾ ಜನಜಾಗೃತಿ ಸಮಿತಿ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ್‌ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಗ್ರಾಮೀಣ ಮಹಿಳೆಯರಿಗೆ ಉತ್ತಮ ಆರ್ಥಿಕ, ಸಾಮಾಜಿಕ ಸಬಲತೆ ತಂದುಕೊಟ್ಟಿದೆ. ಉತ್ತಮ ಸಾಂಸ್ಕೃತಿಕ ವಿಚಾರ ನೀಡುವ ಮೂಲಕ ಉತ್ತಮ ಬದುಕಿನ ಮಾರ್ಗದರ್ಶನ ನೀಡುತ್ತಿದೆ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ತಾಲೂಕು ಯೋಜನಾಧೀಕಾರಿ ರಘುರಾಮ, ಧರ್ಮಸ್ಥಳ ಯೋಜನೆ ಮೇಲ್ವಿಚಾರಕಿ ನೇತ್ರಾವತಿ ಮಂಡಗನಾಳ, ಸೇವಾ ಪ್ರತಿನಿಧಿ ಶಿಲ್ಪಾ ಸುಲಾಖೆ, ನಾಗರತ್ನಾ ಅಪ್ಪಾಜಿ, ಉಪನ್ಯಾಸಕ ಶ್ರೀಧರ ಉರಣಕರ, ಮಂಜುನಾಥ ಹಡಪದ, ಅಜಿತಕುಮಾರ, ಪರಸಪ್ಪ ಮಾಯನಗೌಡ್ರ, ಧರ್ಮೆಂದ್ರ ಕುನ್ನೂರ, ಚೈತ್ರಾ ಮುದ್ದಣ್ಣನವರ, ಸೋಮನಾಥ ಪೂಜಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.