ಕಾರಟಗಿ: ವಿದ್ಯಾರ್ಥಿಗಳು ಕೇವಲ ಉತ್ತಮ ಅಂಕ ಗಳಿಸುವುದಷ್ಟೇ ಸಾಕಾಗುವುದಿಲ್ಲ. ವಿದ್ಯೆಯೊಂದಿಗೆ ಸಂಸ್ಕಾರ, ಶಿಸ್ತು, ಪ್ರಾಮಾಣಿಕತೆ ಹಾಗೂ ಮಾನವೀಯ ಮೌಲ್ಯ ಅಳವಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಉತ್ತಮ ಸ್ಥಾನಮಾನ ಗಳಿಸಿ, ಪೋಷಕರಿಗೆ ಹೆಮ್ಮೆಯ ಮಕ್ಕಳಾಗಲು ಸಾಧ್ಯವಾಗುತ್ತದೆ ಎಂದು ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಅಮರೇಶ ಮೈಲಾಪುರ ಹೇಳಿದರು.

ಅವರು ಇಲ್ಲಿನ ಸಿ. ಮಲ್ಲಿಕಾರ್ಜುನ ನಾಗಪ್ಪ ಪದವಿ ಕಾಲೇಜಿನಲ್ಲಿ ಎಂಟು, ಒಂಬತ್ತು ಹಾಗೂ ಹತ್ತನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.

ತಾವು ಇದೇ ಶಾಲೆಯ ೧೯೯೪ನೇ ಸಾಲಿನ ಹತ್ತನೇ ತರಗತಿಯ ಹಳೆಯ ವಿದ್ಯಾರ್ಥಿಯಾಗಿದ್ದನ್ನು ಸ್ಮರಿಸಿಕೊಂಡ ಅವರು, ವಿದ್ಯಾರ್ಥಿ ಜೀವನದ ಸಿಹಿ ನೆನಪು ಹಂಚಿಕೊಂಡರು.ಅಂದು ಶಾಲೆಯ ವಿದ್ಯಾರ್ಥಿ ಸಂಸತ್ತಿನಲ್ಲಿ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಅನುಭವ ವಿವರಿಸುತ್ತಾ ಶಾಲೆಯು ನೀಡಿದ ಶಿಕ್ಷಣ, ಶಿಸ್ತು, ನಾಯಕತ್ವದ ಗುಣ ಹಾಗೂ ಶಿಕ್ಷಕರ ಮಾರ್ಗದರ್ಶನವೇ ತಮ್ಮ ಜೀವನದ ಯಶಸ್ಸಿಗೆ ಭದ್ರ ಬುನಾದಿಯಾಗಿದೆ ಎಂದು ತಿಳಿಸಿದರು.

ಈ ಶಾಲೆಯೇ ನನ್ನ ವ್ಯಕ್ತಿತ್ವ ರೂಪಿಸಿದೆ. ಇಂದು ನಾನು ಸಮಾಜದಲ್ಲಿ ಗುರುತಿಸಿಕೊಂಡಿದ್ದರೆ ಅದಕ್ಕೆ ಈ ಶಾಲೆ, ನನ್ನ ಶಿಕ್ಷಕರು ಹಾಗೂ ಪೋಷಕರ ಪ್ರೋತ್ಸಾಹವೇ ಕಾರಣ. ನಿಮ್ಮ ಕನಸು ದೊಡ್ಡದಾಗಿಟ್ಟುಕೊಳ್ಳಿ. ನಿರಂತರ ಪರಿಶ್ರಮ, ಆತ್ಮವಿಶ್ವಾಸ ಮತ್ತು ಸಮಯದ ಸದ್ಬಳಕೆಯಿಂದ ಯಾವುದೇ ಗುರಿ ಸಾಧಿಸಬಹುದು ಎಂದು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು.

ಹತ್ತನೇ ತರಗತಿಯ ವಿದ್ಯಾರ್ಥಿಗಳು ಪರೀಕ್ಷೆ ಆತ್ಮವಿಶ್ವಾಸದಿಂದ ಎದುರಿಸಿ, ಮೊಬೈಲ್ ಹಾಗೂ ಅನಗತ್ಯ ವ್ಯಸನಗಳಿಂದ ದೂರವಿದ್ದು, ಏಕಾಗ್ರತೆಯಿಂದ ಅಧ್ಯಯನ ನಡೆಸಿ ಜೀವನದಲ್ಲಿ ಉನ್ನತ ಸಾಧನೆ ಮಾಡುವಂತೆ ಕರೆ ನೀಡಿದರು.


ಇದೇ ವೇಳೆ ಅಮರೇಶ ಮೈಲಾಪುರ, ನಿವೃತ್ತ ಶಿಕ್ಷಕ ಅನುಸೂಯ ಕಂಚಿಮಠ ಹಾಗೂಫಕ್ರುದ್ದೀನ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಿ.ಎಂ.ಎನ್ ಪದವಿ ಕಾಲೇಜಿನ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ವೀರಭದ್ರಪ್ಪ ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ವೀರನಗೌಡ ಪಾಟೀಲ್, ರವಿನಾಯಕ, ವಿಜಯ ವೈದ್ಯ, ಮಧುಮತಿ, ಸಿ.ಎಚ್.ಗೀತಾ, ಸುರೇಶ್ ಸಜ್ಜನ್ ಇದ್ದರು.