ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ನೀಟ್ ಪ್ರವೇಶ ಪರೀಕ್ಷೆಯಲ್ಲಿನ ಭ್ರಷ್ಟಾಚಾರ ಹಾಗೂ ಪರೀಕ್ಷಾ ಅಕ್ರಮದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಎಐಡಿಎಸ್ಒ ಸಂಘಟನೆಯ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಮೈಸೂರಿನ ಹಳೆಯ ಜಿಲ್ಲಾಧಿಕಾರಿ ಕಚೇರಿ ಬಳಿ ಮಂಗಳವಾರ ಪ್ರತಿಭಟಿಸಿದರು.ಈ ವೇಳೆ ಎಐಡಿಎಸ್ಒ ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ ಮಾತನಾಡಿ, ಜೂ.4ರಂದು ಪ್ರಕಟಗೊಂಡ ನೀಟ್ ಪರೀಕ್ಷಾ ಫಲಿತಾಂಶದ ಪಾರದರ್ಶಕತೆಯ ಕುರಿತು ದೇಶವ್ಯಾಪಿ ವಿದ್ಯಾರ್ಥಿಗಳು ಹಾಗೂ ಪೋಷಕರು ಹಲವಾರು ಪ್ರಶ್ನೆಗಳನ್ನು ಎತ್ತಿದ್ದಾರೆ. ಯುಜಿಸಿ ಪರೀಕ್ಷಾ ಮಾರ್ಗಸೂಚಿ ಅನ್ವಯ ಅಂಕಗಳನ್ನು ನೀಡಿದ್ದಲ್ಲಿ ವಿದ್ಯಾರ್ಥಿಗಳು ಪಡೆಯಬಹುದಾದ ಅಂಕಗಳೊಂದಿಗೆ, ಪ್ರಸ್ತುತ ಒಂದಿಷ್ಟು ವಿದ್ಯಾರ್ಥಿಗಳು ಪಡೆದಿರುವ ಅಂಕಗಳು ಹೊಂದಿಕೆಯಾಗುತ್ತಿಲ್ಲ. ಕೆಲವು ವಿದ್ಯಾರ್ಥಿಗಳಿಗೆ ಹೆಚ್ಚುವರಿ ಅಂಕ ನೀಡಿರುವುದಾಗಿ ಎನ್ ಟಿಎ ಸಮಜಾಯಿಸಿ ನೀಡಿದೆ. ಆದರೆ, ಹೆಚ್ಚುವರಿ ಶುಲ್ಕಗಳನ್ನು ನೀಡಿರುವ ಮಾನದಂಡವು ಸಂಪೂರ್ಣವಾಗಿ ಪಕ್ಷಪಾತಿಯಾಗಿದೆ ಎಂದು ಆರೋಪಿಸಿದರು.
ಈ ವರ್ಷ ಪ್ರಕಟಿಸಲಾಗಿದ್ದ ಮಾರ್ಗಸೂಚಿ ಅನ್ವಯ ಹೆಚ್ಚುವರಿ ಅಂಕಗಳನ್ನು ನೀಡಲು ಅವಕಾಶವಿಲ್ಲ. ಆಶ್ಚರ್ಯಕರ ಎಂಬಂತೆ, ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಸಮಾನ ಅಂಕಗಳನ್ನು ಗಳಿಸಿದ್ದಾರೆ. ಇದರೊಂದಿಗೆ, ಪರೀಕ್ಷೆಗೂ ಮುನ್ನವೇ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿದ್ದವು ಅಥವಾ ಈ ಕುರಿತು ಸಮರ್ಪಕ ತನಿಖೆ ನಡೆಸಲಾಗಿಲ್ಲ ಎಂಬ ಆರೋಪವಿದೆ. ಅನಿರೀಕ್ಷಿತ ಕೆಟ್ಟ ಫಲಿತಾಂಶದಿಂದಾಗಿ ಈಗಾಗಲೇ ಕೆಲವು ವಿದ್ಯಾರ್ಥಿಗಳು ಆತ್ಮಹತ್ಯೆಗೆ ತುತ್ತಾಗಿದ್ದಾರೆ. ಒಟ್ಟಾರೆಯಾಗಿ ನೀಟ್ ಪರೀಕ್ಷೆ ಫಲಿತಾಂಶದಲ್ಲಿನ ಪಾರದರ್ಶಕತೆ ಕೊರತೆ ಮತ್ತು ಭ್ರಷ್ಟಾಚಾರದ ಕುರಿತು ಸಾಕಷ್ಟು ಆರೋಪಗಳು ಕೇಳಿ ಬಂದಿವೆ. ಪರೀಕ್ಷೆಗೂ ಮುನ್ನವೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪವು ಕೇಳಿ ಬರುತ್ತಿದ್ದರು, ಈ ಬಗ್ಗೆ ಸೂಕ್ತ ತನಿಖೆ ನಡೆಸದೆ ಇರುವುದು ಸರಿಯಲ್ಲ ಎಂದು ಅವರು ಖಂಡಿಸಿದರು.ರಾಜ್ಯ ಮಟ್ಟದಲ್ಲಿ ಜಂಟಿ ಪ್ರವೇಶ ಪರೀಕ್ಷೆಗಳು ಜಾರಿಯಲ್ಲಿದ್ದಾಗ, ಭ್ರಷ್ಟಾಚಾರದ ಕಾರಣ ಒಡ್ಡಿಯೇ ಅಖಿಲ ಭಾರತ ಮಟ್ಟದ ನೀಟ್ ಪರೀಕ್ಷೆಯನ್ನು ಪ್ರಾರಂಭಿಸಲಾಗಿತ್ತು. ಭ್ರಷ್ಟಾಚಾರದ ಕುರಿತು ತನಿಖೆ ನಡೆಸಿ ಸಂಬಂಧಪಟ್ಟವರಿಗೆ ಸೂಕ್ತ ಶಿಕ್ಷೆ ವಿಧಿಸುವುದರ ಬದಲಿಗೆ ಪರೀಕ್ಷಾ ಪದ್ಧತಿಯನ್ನು ಬದಲಾಯಿಸುವುದು ಪರಿಹಾರವಲ್ಲ ಎಂದು ನಾವು ಆ ಸಂದರ್ಭದಲ್ಲಿ ಎಚ್ಚರಿಕೆ ನೀಡಿದ್ದೆವು. ನಮ್ಮ ಎಚ್ಚರಿಕೆಯು ಇಂದು ನಿಜವಾಗಿದೆ. ಸರ್ಕಾರದ ನಿಷ್ಕಾಳಜಿ ಮತ್ತು ಪರೀಕ್ಷಾ ವ್ಯವಸ್ಥೆಯ ಸಂಪೂರ್ಣ ವ್ಯಾಪಾರಿಕರಣದಿಂದಾಗಿ, ಇಡೀ ವೈದ್ಯಕೀಯ ಪ್ರವೇಶ ಪರೀಕ್ಷೆಯು ಕುಸಿತಕ್ಕೊಳಗಾಗುತ್ತಿದೆ. ಮತ್ತು ಅಮಾಯಕ ವಿದ್ಯಾರ್ಥಿಗಳು ಇದರ ಬಲಿಪಶುಗಳಾಗಿದ್ದಾರೆ ಎಂದು ಅವರು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ಒಟ್ಟು ಪ್ರಕರಣದ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಮತ್ತು ಇದರಲ್ಲಿ ಭಾಗಿಯಾದ ಎಲ್ಲಾ ವ್ಯಕ್ತಿಗಳಿಗೂ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.ಎಐಡಿಎಸ್ಓ ಉಪಾಧ್ಯಕ್ಷರಾದ ನಿತಿನ್, ಸ್ವಾತಿ, ಪದಾಧಿಕಾರಿಗಳಾದ ಚಂದ್ರಿಕಾ, ಹೇಮಾ, ಅಂಜಲಿ ತೇಜು ಹಾಗೂ ನೂರಾರು ಪಿಯು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ನೀಟ್ ಪರೀಕ್ಷೆ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆಗ್ರಹಮೈಸೂರು: ವೈದ್ಯಕೀಯ ಪ್ರವೇಶಕ್ಕೆ ನಡೆದಿರುವ ನೀಟ್– ಯುಜಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಕೆ.ಆರ್. ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಆಗ್ರಹಿಸಿದ್ದಾರೆ.ಈ ಬಾರಿಯ ನೀಟ್ ಪರೀಕ್ಷೆ ಫಲಿತಾಂಶವು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ, ನ್ಯಾಯ ಒದಗಿಸಲು ಹಗರಣದ ಪಾರದರ್ಶಕ ತನಿಖೆಯಾಗಬೇಕು. ಈ ಮೊದಲು ಜೂ.14 ರಂದು ನೀಟ್ ಫಲಿತಾಂಶ ಘೋಷಣೆ ದಿನಾಂಕ ನಿಗದಿಯಾಗಿತ್ತು. ಆದರೆ, ಜೂ.4 ರಂದು ಲೋಕಸಭೆ ಚುನಾವಣೆಯ ಫಲಿತಾಂಶದ ದಿನ ನೀಟ್ ಫಲಿತಾಂಶ ಪ್ರಕಟಿಸಿರುವುದು ಜನರ ಗಮನ ಬೇರೆಡೆ ಸೆಳೆಯಲು ಮಾಡಿದ ತಂತ್ರವಾಗಿರಬಹುದೆಂಬ ಅನುಮಾನ ಮೂಡಿದೆ ಎಂದು ಆರೋಪಿಸಿದ್ದಾರೆ.ನೀಟ್ ಫಲಿತಾಂಶದ ವಿರುದ್ಧ ತಮಿಳುನಾಡು ಸೇರಿದಂತೆ ಬೇರೆ ಬೇರೆ ರಾಜ್ಯಗಳು ಧ್ವನಿ ಎತ್ತಿವೆ. ಈ ರಾಜ್ಯಗಳೊಂದಿಗೆ ಕರ್ನಾಟಕವೂ ಸೇರಿದರೆ ಒಳ್ಳೆಯದು. ರಾಜ್ಯಕ್ಕೆ ನೀಟ್ ಗಿಂತ ಈ ಹಿಂದಿನಂತೆ ಸಿಇಟಿ ಇದ್ದರೆ ಉತ್ತಮ ಎಂದು ತಿಳಿಸಿದ್ದಾರೆ.