ಸಾರಾಂಶ
ಕನ್ನಡಪ್ರಭ ವಾರ್ತೆ, ಕೊಳ್ಳೇಗಾಲ
ಕಳೆದ ನಾಲ್ಕು ವರ್ಷಗಳಿಂದಲೂ ಚಾಮರಾಜನಗರ ಹಾಗೂ ಮೈಸೂರು ಭಾಗದ ಜನರು ಸ್ವಯಂ ಉದ್ಯೋಗದಿಂದ ತಮ್ಮ ಜೀವನವನ್ನು ಉತ್ತಮ ಪಡಿಸಿಕೊಳ್ಳಲಿ ಎಂಬ ಸದುದ್ದೇಶದಿಂದ ಅನೇಕ ತರಬೇತಿಗಳನ್ನು ಗಂಗಾ ಚಾರಿಟಬಲ್ ಟ್ರಸ್ಟ್ ಆಯೋಜನೆ ಮಾಡುತ್ತಾ ಬಂದಿದ್ದು, ಈ ಟ್ರಸ್ಟ್ ಸೇನೆ ಅಭಿನಂದನಾರ್ಹ, ಮುಂದಿನ ದಿನಗಳಲ್ಲಿ ಗಂಗಾ ಟ್ರಸ್ಟ್ ತನ್ನ ಸಮಾಜಮುಖಿ ಸೇವೆಗಳನ್ನು ಮಾಡುವಂತಾಗಲಿ ಎಂದು ಜಿಪಂ ಮಾಜಿ ಅಧ್ಯಕ್ಷ ರಾಮಚಂದ್ರ ಹೇಳಿದರು.ಅವರು ಪಟ್ಟಣದ ಸಿಡಿಎಸ್ ಸಮುದಾಯ ಭವನದಲ್ಲಿ ಗಂಗಾ ಚಾರಿಟಬಲ್ ಟ್ರಸ್ಟ್, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ, ಪಶುಸಂಗೋಪನೆ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಕುರಿ, ಮೇಕೆ ಸಾಕಾಣಿಕೆ ಮತ್ತು ಮೇವು ನಿರ್ವಹಣೆ ಕುರಿತು ಎರಡು ದಿನಗಳ ಉಚಿತ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿ, ಕೋವಿಡ್ ವೇಳೆ ದೇಶ ಮತ್ತು ರಾಜ್ಯದ ಜನರು ಏನೆಲ್ಲಾ ಸಂಕಷ್ಟಗಳನ್ನು ಅನುಭವಿಸಿದ್ದೇವೆ ಎಂದು ನಾವೆಲ್ಲ ನೋಡಿದ್ದೇವೆ. ನಮ್ಮೆಲ್ಲಾ ಅನೇಕ ಯುವಕರು ಇಂಜಿನಿಯರಿಂಗ್, ವೈದ್ಯ ಇತರೆ ಬೇರೆ ವ್ಯಾಸಂಗ ಮಾಡಿ ನಿರುದ್ಯೋಗಿಗಳು ಆಗಿದ್ದಾರೆ.
ಅಂತಹ ಯುವಕರು ಇಂತಹ ತರಬೇತಿಗಳಲ್ಲಿ ಭಾಗವಹಿಸಿ ಆರ್ಥಿಕವಾಗಿ ಪ್ರಾಬಲ್ಯ ಹೊಂದಲು ಮುಂದಾಗಬೇಕು,ಸರ್ಕಾರ ಜನರನ್ನು ಸ್ವಯಂ ಉದ್ಯೋಗದ ಮೂಲಕ ಪ್ರೇರೇಪಿಸಲು ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದು ಇಂತಹ ಸಂಸ್ಥೆಗಳು ಆ ಕಾರ್ಯಕ್ರಮಗಳನ್ನು ನಿಮಗೆ ತಲುಪಿಸುವ ನಿಟ್ಟಿನಲ್ಲಿ ಸಮರ್ಥ ಕೆಲಸ ಮಾಡುತ್ತಿದೆ. ಇಂತಹ ತರಬೇತಿಗಳನ್ನು ದುರುಪಯೋಗಪಡಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು, ಈ ಸಂಸ್ಥೆ ಇಂತಹ ಅನೇಕ ತರಬೇತಿಗಳನ್ನು ಆಯೋಜಿಸಿ ಯುವಕರು ಸ್ವಾವಲಂಬಿ ಜೀವನ ನಡೆಸಲು ಅನುವು ಮಾಡಿಕೊಡಬೇಕು ಎಂದರು.
ಬೆಂಗಳೂರು ವರಾಹ ಅಭಿವೃದ್ಧಿ ಯೋಜನೆ ಉಪನಿರ್ದೇಶಕ ಡಾ.ಶಿವಲಿಂಗಯ್ಯ ಮಾತನಾಡಿ, ಗಂಗಾ ಚಾರಿಟಬಲ್ ಟ್ರಸ್ಟ್ ನ ಪದಾಧಿಕಾರಿಗಳು ಗ್ರಾಮೀಣ ಮಟ್ಟದಲ್ಲಿ ನಿರುದ್ಯೋಗ ಯುವಕ ಯುವತಿಯರ ಸ್ವಯಂ ಉದ್ಯೋಗಕ್ಕಾಗಿ ಉತ್ತಮ ರೀತಿಯ ತರಬೇತಿ ನಡೆಸುತ್ತಿದ್ದಾರೆ. ಚಾ.ನಗರ ಜಿಲ್ಲೆಯಲ್ಲಿ ಹೈನುಗಾರಿಕೆ ಸಾಕಾಣಿಕೆ ಮಾಡಲು ಉತ್ತಮವಾದ ಅವಕಾಶಗಳಿವೆ, ಈ ಹಿನ್ನೆಲೆ ಆಸಕ್ತ ಯುವಕ, ಯವತಿಯರು ಇಂತಹ ತರಬೇತಿಗಳಲ್ಲಿ ಭಾಗವಹಿಸಿ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ರಾಜ್ ಕಾಮಯ್ಯ, ಕಾರ್ಯದರ್ಶಿ ದಿವ್ಯ ಶ್ರೀ, ನಿವೃತ್ತ ಕೃಷಿ ನಿರ್ದೇಶಕ ಶಿವರಾಮೇಗೌಡ ,
ಜಿಲ್ಲಾ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಸಹಾಯಕ ನಿರ್ದೇಶಕ ಡಾ. ಮೂರ್ತಿ, ಯಳಂದೂರು ಪಶುಸಂಗೋಪನೆ ಇಲಾಖೆಯ ಡಾ.ಶಿವರಾಜು,ತೋಟಗಾರಿಕೆ ಇಲಾಖೆಯ ಗಂಗಾಧರ್, ನಿವೃತ್ತ ನಿರ್ದೇಶಕ ಶಿವಾನಂದ್, ರೈತ ಮುಖಂಡ ಅರುಣ್ ಕುಮಾರ್, ನಾರಾಯಣ್, ರಾಜಣ್ಣ ಇನ್ನಿತರಿದ್ದರು