ಶಾಮನೂರು ಚಿನ್ನದ ಚಮಚ ಬಾಯಲ್ಲಿ ಹಿಡಿದು ಹುಟ್ಟಿದವರೂ ಅಲ್ಲ. ಗುಮಾಸ್ತನಾಗಿ ಕೆಲಸ ಪ್ರಾರಂಭಿಸಿ ಎಲ್ಲರ ವಿಶ್ವಾಸ ಗಳಿಸಿ ಬಾಪೂಜಿ ಸಂಸ್ಥೆಯಲ್ಲಿ ಸಂಬಂಧ ಬೆಳೆಸಿಕೊಂಡು ಅದನ್ನು ದೇಶದಲ್ಲೇ ಅತ್ಯುತ್ತಮ ವಿದ್ಯಾಸಂಸ್ಥೆಯಾಗಿ ಬೆಳೆಸಿದ ಅಜಾತಶತ್ರು ಎಂದು ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಬಣ್ಣಿಸಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶಾಮನೂರು ಚಿನ್ನದ ಚಮಚ ಬಾಯಲ್ಲಿ ಹಿಡಿದು ಹುಟ್ಟಿದವರೂ ಅಲ್ಲ. ಗುಮಾಸ್ತನಾಗಿ ಕೆಲಸ ಪ್ರಾರಂಭಿಸಿ ಎಲ್ಲರ ವಿಶ್ವಾಸ ಗಳಿಸಿ ಬಾಪೂಜಿ ಸಂಸ್ಥೆಯಲ್ಲಿ ಸಂಬಂಧ ಬೆಳೆಸಿಕೊಂಡು ಅದನ್ನು ದೇಶದಲ್ಲೇ ಅತ್ಯುತ್ತಮ ವಿದ್ಯಾಸಂಸ್ಥೆಯಾಗಿ ಬೆಳೆಸಿದ ಅಜಾತಶತ್ರು ಎಂದು ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಬಣ್ಣಿಸಿದರು.ನಗರದ ಬೆಕ್ಕಿನ ಕಲ್ಮಠದ ಸಭಾಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಶಿವಮೊಗ್ಗ ಶಾಖೆ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಶಾಮನೂರು ಶಿವಶಂಕರಪ್ಪ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಶಾಮನೂರು ಶಿವಶಂಕರಪ್ಪನವರು ಶ್ರೀಮಂತರು ಎಂದು ಜನರು ಅವರನ್ನು ಪ್ರೀತಿಸಿಲ್ಲ. ಪಂಚಪೀಠದ ಶ್ರೀಗಳನ್ನು ಒಟ್ಟು ಮಾಡಿ ಸಮಾವೇಶ ನಡೆಸಿ ಐತಿಹಾಸಿಕವಾಗಿ ಸಮಾಜಕ್ಕೆ ಮಾರ್ಗದರ್ಶನ ದೊರೆಯುವಂತೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರು ರಾಜಕೀಯದಲ್ಲಿ ಇದ್ದರೂ ಕೂಡ ರಾಜಕೀಯ ಲೇಪವನ್ನು ಮೈಗಂಟಿಸಿಕೊಂಡಿಲ್ಲ ಎಂದು ಸ್ಮರಿಸಿದರು. ಒಳ್ಳೆಯ ಕೆಲಸ ಯಾವುದೇ ಪಕ್ಷದವರೂ ಮಾಡಿದರೂ ಸಹ ಅದನ್ನು ಹೊಗಳಿ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದಾರೆ. ಅದಕ್ಕೆ ಉದಾಹರಣೆ ಎಂದರೆ ಶಿವಮೊಗ್ಗದ ಎಂಪಿ ರಾಘವೇಂದ್ರ ಅವರು ಬೇರೆ ಪಕ್ಷದಲ್ಲಿದ್ದರೂ ಸಹ ಅವರ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದರು. ಅದು ಅವರ ಗುಣಕ್ಕೆ ಉದಾಹರಣೆ ಎಂದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಮಾತನಾಡಿ, ಶಾಮನೂರು ಶಿವಶಂಕರಪ್ಪ ಸಮಾಜದ ಮೇರು ಪರ್ವತ. ಅಜಾತಶತ್ರು. ಸಾರ್ವಜನಿಕ ಬದುಕಿನಲ್ಲಿ ಅವರು ಮಾಡಿದ ಕೆಲಸಗಳನ್ನು ಊಹಿಸಲು ಸಾಧ್ಯವಿಲ್ಲ. ಅವರ ಯೋಗ್ಯತೆಗೆ ಎರಡು ಬಾರಿ ಸಿಎಂ ಸ್ಥಾನ ಸಿಗುವ ಸಂದರ್ಭವಿತ್ತು. ಆದರೆ, ಅಧಿಕಾರಕ್ಕೆ ಅವರು ಅಂಟಿಕೊಂಡಿರಲಿಲ್ಲ. ಅವರ ವಿಚಾರಧಾರೆ ಸಮಾಜಕ್ಕೆ ಮತ್ತು ಯುವ ಶಕ್ತಿಗೆ ಪ್ರೇರಕ ಎಂದು ಹೇಳಿದರು.ಸಮಾಜದ ಜಿಲ್ಲಾಧ್ಯಕ್ಷ ರುದ್ರಮುನಿ ಸಜ್ಜನ್ ಮಾತನಾಡಿ, ಮೂರು ಬಾರಿ ಸಮಾಜದ ರಾಷ್ಟ್ರೀಯ ಅಧ್ಯಕ್ಷರಾಗಿ ಯಶಸ್ವಿಯಾಗಿ ಮುನ್ನಡೆಸಿದ್ದರು. ಗಟ್ಟಿ ಮಾತಿನ ವ್ಯಕ್ತಿ. ಸರ್ಕಾರ ಅವರದೇ ಆಗಿದ್ದರೂ ತಪ್ಪಾದಾಗ ನಿರ್ಧಾಕ್ಷಿಣ್ಯವಾಗಿ ಖಂಡಿಸುತ್ತಿದ್ದರು. ಅಧಿಕಾರ ಶಾಶ್ವತವಲ್ಲ, ಮಂತ್ರಿ ಸ್ಥಾನ ಹೋದರೆ ಹೋಗಲಿ, ಹೆಲಿಕಾಪ್ಟರ್ ಹತ್ತಿ ದಾವಣಗೆರೆಗೆ ಹೋಗಿ ಬಿಡುತ್ತೇನೆ ಎಂದು ಮುಖ್ಯಮಂತ್ರಿಗೇ ನೇರವಾಗಿ ಹೇಳುವ ಧೈರ್ಯ ಅವರಲ್ಲಿತ್ತು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೌನಾಚರಣೆ ಮಾಡಲಾಯಿತು.ಸಭೆಯಲ್ಲಿ ಪ್ರಮುಖರಾದ ತಾರಾನಾಥ್ , ಬಸವರಾಜಪ್ಪ, ಎಸ್.ಪಿ. ದಿನೇಶ್, ಮಹಾಲಿಂಗ ಶಾಸ್ತ್ರಿ, ರೇಣುಕಾರಾಧ್ಯ, ವಾಗ್ದೇವಿ, ಮಲ್ಲಿಕಾರ್ಜುನಸ್ವಾಮಿ, ಸಮಾಜದ ಮುಖಂಡರು ಉಪಸ್ಥಿತರಿದ್ದರು.