ನರಸಿಂಹರಾಜಪುರಅಡಕೆ ಬೆಳೆಗೆ ಎಲೆ ಚುಕ್ಕಿ ರೋಗ ತೀವ್ರವಾಗಿ ಹರಡುತ್ತಿದ್ದು ರೈತರು ಮುಂಜಾಗ್ರತೆ ಕ್ರಮ ಅನುಸರಿಸಿ ರೋಗವನ್ನು ಹತೋಟಿಗೆ ತರಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೃಷಿ ಮೇಲ್ವಿಚಾರಕ ಹನುಮಂತಪ್ಪ ಸಲಹೆ ನೀಡಿದರು.
- ವರ್ಕಾಟೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರೈತ ಕ್ಷೇತ್ರ ಪಾಠಶಾಲೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಅಡಕೆ ಬೆಳೆಗೆ ಎಲೆ ಚುಕ್ಕಿ ರೋಗ ತೀವ್ರವಾಗಿ ಹರಡುತ್ತಿದ್ದು ರೈತರು ಮುಂಜಾಗ್ರತೆ ಕ್ರಮ ಅನುಸರಿಸಿ ರೋಗವನ್ನು ಹತೋಟಿಗೆ ತರಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೃಷಿ ಮೇಲ್ವಿಚಾರಕ ಹನುಮಂತಪ್ಪ ಸಲಹೆ ನೀಡಿದರು.
ಸೋಮವಾರ ವರ್ಕಾಟೆ ಗಣಪತಿ ರಂಗಮಂದಿರದಲ್ಲಿ ಧ.ಗ್ರಾ.ಯೋಜನೆಯ ಎನ್.ಆರ್.ಪುರ ವಲಯದ ವರ್ಕಾಟೆ ಕಾರ್ಯಕ್ಷೇತ್ರದ ಆಶ್ರಯದಲ್ಲಿ ರೈತರು, ಸ್ವಸಹಾಯ ಸಂಘದ ಸದಸ್ಯರಿಗೆ ಏರ್ಪಡಿಸಿದ್ದ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಡಕೆ ಎಲೆ ಚುಕ್ಕಿ ರೋಗದ ಹತೋಟಿಗೆ ವೈಜ್ಞಾನಿಕವಾಗಿ ಔಷಧಿ ಸಿಂಪಡಣೆ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಅಡಕೆ ರೋಗ ತಜ್ಞ ವಿಜ್ಞಾನಿಗಳನ್ನು ಕರೆಸಿ ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ಮಾಹಿತಿ ನೀಡಲಾಗುವುದು.ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ರೈತರಿಗೆ ಅನೇಕ ಸೌಲಭ್ಯಗಳಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಗ್ರಾಮದ ಅಭಿವೃದ್ಧಿ ಕನಸು ಕಂಡಿದ್ದು ಅವರ ಕನಸು ನನಸು ಮಾಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.ಸಭೆಯಲ್ಲಿ ಉಪಸ್ಥಿತರಿದ್ದ ಕೃಷಿ ಇಲಾಖೆ ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ ರಂಜಿತ ಮಾತನಾಡಿ, ಕೃಷಿ ಇಲಾಖೆಯಿಂದ ರೈತರಿಗೆ ಹಲವು ಸೌಲಭ್ಯ ಸಿಗಲಿದೆ. ಮುಖ್ಯವಾಗಿ ರೈತರು ಪ್ರತಿ 2 ವರ್ಷಕ್ಕೊಮ್ಮೆ ಮಣ್ಣು ಪರೀಕ್ಷೆ ಮಾಡಿಸಬೇಕು. ಬೇಸಿಗೆ ಸಮಯದಲ್ಲಿ ಮಣ್ಣು ಪರೀಕ್ಷೆಗೆ ಸಕಾಲವಾಗಿದೆ. ಅತಿಯಾದ ರಾಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿ ಬರುಡಾಗುತ್ತದೆ. ಸಾವಯವ ಗೊಬ್ಬರ ಬಳಕೆ ಮಾಡಿ ಭೂಮಿ ಕಾಪಾಡಿಕೊಳ್ಳಿ ಎಂದು ಕರೆ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಅಧ್ಯಕ್ಷ ದೀಪಕ್ ಮಾತನಾಡಿ, ಎಲೆ ಚುಕ್ಕಿ ರೋಗ ಎಲ್ಲಾ ಗ್ರಾಮಗಳಲ್ಲೂ ಹರಡುತ್ತಿದೆ. ಈ ಬಗ್ಗೆ ಎಲ್ಲಾ ರೈತರು ಜಾಗ್ರತೆಗೊಳ್ಳುವ ಅಗತ್ಯವಿದೆ. ಮಣ್ಣು ಪರೀಕ್ಷೆ ಮಾಡಿಸಿ ಅದರ ಫಲಿತಾಂಶದ ಆಧಾರದ ಮೇಲೆ ಗೊಬ್ಬರ, ಪೋಷಕಾಂಶಗಳನ್ನು ನೀಡಬೇಕು ಎಂದರು. ವರ್ಕಾಟೆ ಗಣಪತಿ ಸಂಘದ ಅಧ್ಯಕ್ಷ ತಿಮ್ಮಣ್ಣಗೌಡ ಉದ್ಘಾಟಿಸಿದರು.ಸಭೆಯಲ್ಲಿ ಒಕ್ಕೂಟದ ಉಪಾಧ್ಯಕ್ಷ ಸತೀಶ್, ಸೇವಾ ಪ್ರತಿನಿಧಿ ಭಾನುಮತಿ ಇದ್ದರು. ಸೀಮಾ ಸ್ವಾಗತಿಸಿದರು.ಶೋಭಾ ವಂದಿಸಿದರು.