ಕನ್ನಡಪ್ರಭ ವಾರ್ತೆ ಹಲಗೂರು

ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆ ಆವರಣದ ಕುವೆಂಪು ಭವನದಲ್ಲಿ ಅಕ್ಕರೆಯ ಅಂಗಳ ವಿಶೇಷ ಬೇಸಿಗೆ ಶಿಬಿರಕ್ಕೆ ಗ್ರಾಮ ಪಂಚಾಯತಿ ಆಡಳಿತಾಧಿಕಾರಿ ವೈ.ಡಿ.ಅನಿಲ್ ಕುಮಾರ್ ಚಾಲನೆ ನೀಡಿದರು.

ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯತ್ ಮಂಡ್ಯ, ತಾಲೂಕು ಪಂಚಾಯತ್ ಮಳವಳ್ಳಿ ಹಾಗೂ ಹಲಗೂರು ಗ್ರಾಮ ಪಂಚಾಯತಿ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗ್ರಾಪಂ ಪಿಡಿಒ ಕೆ.ಚೆಂದಿಲ್ ಮಾತನಾಡಿ, ಮಕ್ಕಳಿಗಾಗಿ ಆಯೋಜಿಸಿರುವ ವಿಶೇಷ ಶಿಬಿರವು ಗ್ರಾಮೀಣ ಭಾಗದ ಮಕ್ಕಳಿಗೆ ಮನರಂಜನೆಯ ಜೊತೆಗೆ ವಿವಿಧ ಕೌಶಲ್ಯಗಳನ್ನು ಕಲಿಸುವುದು ಹಾಗೂ ಅವರಲ್ಲಿರುವ ಸುಪ್ತ ಪ್ರತಿಭೆ ಹೊರತರುವ ಉದ್ದೇಶ ಹೊಂದಿದೆ ಎಂದರು.

ಹವಾಮಾನದಲ್ಲಿ ಬಿಸಿಲಿನ ತಾಪ ಇಂದು ಜಾಸ್ತಿಯಾಗಿದೆ. ಮಕ್ಕಳು ಬಿಸಿಲಿನಲ್ಲಿ ಆಟ ಆಡುವುದು, ಬಿಸಿಲಿನ ತಾಪಮಾನ ನೀಗಿಸಿಕೊಳ್ಳಲು ಕೆರೆಕಟ್ಟೆಗಳಲ್ಲಿ ಸ್ನಾನ ಮಾಡಲು ಹೋಗುವುದು ಅಪಾಯಕಾರಿ. ಆದುದರಿಂದ ಇಂತಹ ಕಾರ್ಯಕ್ರಮವನ್ನು ಮಕ್ಕಳಿಗಾಗಿ ಆಯೋಜಿಸಲಾಗಿದೆ. ಇದನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು. ಪೋಷಕರು ನಿಮ್ಮ ಮಕ್ಕಳನ್ನು ಇಂತಹ ಶಿಬಿರಕ್ಕೆ ಸೇರಿಸಿ ಎಂದು ಸಲಹೆ ನೀಡಿದರು.

ವಿಷಯಾಧಾರಿತ ತರಬೇತಿಯನ್ನು ನುರಿತ ತಜ್ಞರು ಹಾಗೂ ಪರಿಣತರ ಮೂಲಕ ನೀಡಲಾಗುತ್ತದೆ. ಶಿಬಿರವು ಏ.17ರಿಂದ ಆರಂಭಗೊಂಡು ಮೇ 24ರವರೆಗೆ ನಡೆಯಲಿದೆ ಎಂದರು.


ಕೆಪಿಎಸ್‌ ಶಾಲೆ ಉಪ ಪ್ರಾಂಶುಪಾಲೆ ಅನುರಾಧ ಮಾತನಾಡಿ, ಬೇಸಿಗೆ ರಜೆಯಲ್ಲಿ ಮಕ್ಕಳ ಕ್ರಿಯಾಶೀಲತೆಯನ್ನು ಹೆಚ್ಚಿಸಲು ಅಕ್ಕರೆಯ ಅಂಗಳ ಶಿಬಿರ ಮಹತ್ವದ್ದಾಗಿದೆ. ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಂಡು ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದು ಹೇಳಿದರು. ಈ ವೇಳೆ ಗ್ರಾಪಂ ಲೆಕ್ಕಾಧಿಕಾರಿ ಆನಂದ್, ಗ್ರಂಥಾಲಯ ಮೇಲ್ವಿಚಾರಕ ಶಿವನಂಜು ಸೇರಿದಂತೆ ಇತರರಿದ್ದರು.

ನಾಳೆ ಎನ್‌.ಆರ್‌.ರಂಗಯ್ಯ ಪ್ರಶಸ್ತಿ ಪ್ರದಾನ

ಕನ್ನಡಪ್ರಭ ವಾರ್ತೆ ಮಂಡ್ಯಕರ್ನಾಟಕ ಸಂಘದಿಂದ ಎನ್‌.ಆರ್‌.ರಂಗಯ್ಯ ಸಹಕಾರ ಪ್ರಶಸ್ತಿ ಪ್ರದಾನ ಸಮಾಂಭ ಏ.20ರಂದು ಬೆಳಗ್ಗೆ 11 ಗಂಟೆಗೆ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಡೆಯಲಿದೆ.

ಅಧ್ಯಕ್ಷತೆಯನ್ನು ವಿಧಾನಪರಿಷತ್‌ ಸದಸ್ಯ ಮಧು ಜಿ.ಮಾದೇಗೌಡ ವಹಿಸುವರು. ಬೆಂಗಳೂರಿನ ಸಹಕಾರ ಸಂಘಗಳ ಇಲಾಖೆ ಹೆಚ್ಚುವರಿ ನಿರ್ದೇಶಕ ಹೆಚ್‌.ಜಯದೇವ್‌ ಅವರು ಹಿರಿಯ ಸಹಕಾರಿ ಎಸ್‌.ಎಲ್‌.ಮೋಹನ್‌ ಅವರಿಗೆ ಪ್ರಶಸ್ತಿ ಪ್ರದಾನ ಮಾಡುವರು.ಮುಖ್ಯ ಅತಿಥಿಯಾಗಿ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್‌ ಪಾಲ್ಗೊಳ್ಳಲಿದ್ದು, ಖ್ಯಾತ ವೈದ್ಯೆ ಡಾ.ಎನ್‌.ಆರ್‌.ರಾಜೇಶ್ವರಿ ಉಪಸ್ಥಿತರಿರುವರು. ಕವಯತ್ರಿ ಭವಾನಿ ಲೋಕೇಶ್‌ ಅಭಿನಂದನಾ ನುಡಿಗಳನ್ನಾಡುವರು.

ಎಸ್‌.ಎಲ್‌.ಮೋಹನ್‌ ಪರಿಚಯ:ಕೆ.ಆರ್‌.ಪೇಟೆ ತಾಲೂಕಿನ ಶೀಳನೆರೆ ಗ್ರಾಮದ ಎಸ್‌ಎಲ್‌.ಮೋಹನ್‌ 10ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ತಮ್ಮೂರಿನ ಸರ್ಕಾರಿ ಶಾಲೆಯ ಶ್ರೇಯೋಭಿವೃದ್ಧಿಗೆ ಶ್ರಮಿಸಿದರು. ವಿವಿಧ ಸಹಕಾರ ಸಂಘಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಶೀಳನೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಏಳು ಬಾರಿ ನಿರ್ದೇಶಕರಾಗಿ, ಮೂರು ಬಾರಿ ನಿರ್ದೇಶಕರಾಗಿ ಸಂಘವನ್ನು ಅಭಿವೃದ್ಧಿಪಥದಲ್ಲಿ ಮುನ್ನಡೆಸಿದ್ದಾರೆ. ಎರಡು ಬಾರಿ ಟಿಎಪಿಸಿಎಂಎಸ್‌ ನಿರ್ದೇಶಕರಾಗಿ, ರಾಜ್ಯ ಮಾರಾಟ ಮಹಾಮಂಡಳಿಯ ಹಾಲಿ ನಿರ್ದೇಶಕಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಹಕಾರ ಪ್ರಶಸ್ತಿಯು 20 ಸಾವಿರ ರು. ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.