ಕೊಪ್ಪಳ ಹೋಳಿ ಹಬ್ಬ 2.0 ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಮಾ. 4ರಂದು ಕೊಪ್ಪಳದಲ್ಲಿ ಕಳೆದ ವರ್ಷಕ್ಕಿಂತಲೂ ಮತ್ತಷ್ಟು ರಂಗು ರಂಗಿನಿಂದ ಆಚರಣೆ ಮಾಡಲಾಗುತ್ತದೆ ಎಂದು ಕೊಪ್ಪಳ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಶನ್ ಅಧ್ಯಕ್ಷ ಹಾಗೂ ಸಂಸದ ರಾಜಶೇಖರ ಹಿಟ್ನಾಳ ಹೇಳಿದ್ದಾರೆ.
ಕೊಪ್ಪಳ: ಕೊಪ್ಪಳ ಹೋಳಿ ಹಬ್ಬ 2.0 ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಮಾ. 4ರಂದು ಕೊಪ್ಪಳದಲ್ಲಿ ಕಳೆದ ವರ್ಷಕ್ಕಿಂತಲೂ ಮತ್ತಷ್ಟು ರಂಗು ರಂಗಿನಿಂದ ಆಚರಣೆ ಮಾಡಲಾಗುತ್ತದೆ ಎಂದು ಕೊಪ್ಪಳ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಶನ್ ಅಧ್ಯಕ್ಷ ಹಾಗೂ ಸಂಸದ ರಾಜಶೇಖರ ಹಿಟ್ನಾಳ ಹೇಳಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮಾಹಿತಿ ನೀಡಿದರು. ಈ ವರ್ಷವೂ ತಾಲೂಕು ಕ್ರೀಡಾಂಗಣದಲ್ಲಿಯೇ ನಡೆಯಲಿದೆ. ಕಾರ್ಯಕ್ರಮ ಮತ್ತಷ್ಟು ಅದ್ಧೂರಿಯಾಗಿ ಮಾಡಬೇಕು. ಎಲ್ಲರೂ ಭಾಗಿಯಾಗಬೇಕು ಎನ್ನುವ ಕಾರಣಕ್ಕಾಗಿ ಕೊಪ್ಪಳ ಜಿಲ್ಲಾ ಅಥ್ಲೆಟಿಕ್ಸ್ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗಿಯಾಗಬೇಕು ಎಂದು ಮನವಿ ಮಾಡಿದರು.ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ. ಮಹಿಳೆಯರು ಮತ್ತು ಪುರುಷರಿಗೂ ಪ್ರತ್ಯೇಕ ವ್ಯವಸ್ಥೆ ಇರುತ್ತದೆ. ಸಿಸಿ ಕ್ಯಾಮೆರಾ ಕಣ್ಗಾವಲು ಸಹ ಇರುತ್ತದೆ. ಪೊಲೀಸ್ ಇಲಾಖೆಯೂ ಅಗತ್ಯ ಮುನ್ನೆಚ್ಚರಿಕೆಯನ್ನು ವಹಿಸುತ್ತದೆ ಎಂದರು.
ಈ ವರ್ಷ ಪಿಯು ಪರೀಕ್ಷೆ ಇರುವುದರಿಂದ ಸಮಸ್ಯೆಯಾಗಿದ್ದು, ಈಗಾಗಲೇ ಜಿಲ್ಲಾಡಳಿತದೊಂದಿಗೆ ಚರ್ಚೆ ಮಾಡಲಾಗಿದೆ. ಪರೀಕ್ಷೆಗೆ ತೊಂದರೆಯಾಗದಂತೆ ಸಮಯ ಬದಲಾಯಿಸಿಕೊಳ್ಳಲಾಗುವುದು. ಹೀಗಾಗಿ, ಕೆಲವೇ ದಿನಗಳಲ್ಲಿ ಸಮಯದ ಮಾಹಿತಿ ನೀಡಲಾಗುವುದು. ವಿದ್ಯಾರ್ಥಿಗಳ ಪರೀಕ್ಷಾ ಸಮಯ ಮುಗಿದ ಮೇಲೆಯೇ ಹೋಳಿ ಹಬ್ಬ ಆಚರಿಸಲಾಗುವುದು. ಈ ವರ್ಷ ಗಡಿಯಾರ ಕಂಬದಿಂದ ಮೆರವಣಿಗೆ ನಡೆಯಲಿದೆ ಎಂದರು.ಕಳೆದ ವರ್ಷದಂತೆ ಡಿಜೆ ಸೌಂಡ್, ರೇನ್ ಡ್ಯಾನ್ಸ್, ಖ್ಯಾತ ಕಲಾವಿದರಿಂದ ನಿರೂಪಣೆ ಇರುತ್ತದೆ. ಬೆಳಗ್ಗೆ ಉಪಾಹಾರ ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲದೆ ಬಣ್ಣ ಆಡಲು ಬರುವ ಸಾರ್ವಜನಿಕರಿಗೆ ಬಣ್ಣದ ಪ್ಯಾಕೆಟ್‌ಗಳನ್ನು ಅಥ್ಲೆಟಿಕ್ಸ್ ಅಸೋಸಿಯೇಶನ್ ಮೂಲಕ ವಿತರಣೆ ಮಾಡಲಾಗುವುದು ಎಂದರು.
ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ರಾಮಣ್ಣ ಹದ್ದಿನ, ಪರಶುರಾಮ ಕಿಡದಾಳ ಇದ್ದರು.ಅಭಿವೃದ್ಧಿ ಸಹಿಸದೆ ಬಿಜೆಪಿಯವರು ನನ್ನ ಮೇಲೆ ಗೂಬೆ ಕೂರಿಸುವ ಹುನ್ನಾರ: ಹುಲಿಕೆರೆ ಬಳಿ ರಸ್ತೆ ಮಾಡುವಾಗ ಸುಮ್ಮನಿದ್ದವರು ಆನಂತರ ವಿರೋಧ ಮಾಡಿದ್ದು ಯಾಕೆ? ಎಂಎಲ್‌ಸಿ ಹೇಮಲತಾ ನಾಯಕ ಅವರು ಊರಲ್ಲಿ ಇರಲಿಲ್ಲವೇ? ಮೊದಲೇ ಪ್ರಶ್ನೆ ಮಾಡುವುದನ್ನು ಬಿಟ್ಟು, ನಿರ್ಮಾಣವಾದ ಮೇಲೆ ಪ್ರಶ್ನೆ ಮಾಡಿ, ಪ್ರತಿಭಟನೆ ಮಾಡಿದ್ದು ಯಾಕೆ ಎಂದು ಸಂಸದ ರಾಜಶೇಖರ ಹಿಟ್ನಾಳ ಖಾರವಾಗಿಯೇ ಪ್ರಶ್ನೆ ಮಾಡಿದ್ದಾರೆ.
ಹುಲಿಕೆರೆಯಲ್ಲಿ ರಸ್ತೆ ಮಾಡುವಂತೆ ನಾನು ಹೇಳಿಲ್ಲ. ಆದರೆ, ಶ್ರೀ ಶಿವರಾತ್ರೇಶ್ವರ ದೇವಸ್ಥಾನ ಸಮಿತಿಯವರು ಹಾಗೂ ದರಗಾ ಸಮಿತಿಯವರು ಬಂದಿದ್ದರು, ನಾವು ಹೀಗೆ ರಸ್ತೆ ಮಾಡಿಕೊಳ್ಳುತ್ತೇವೆ ಎಂದರು. ನಾನು ಆಯಿತು ಮಾಡಿಕೊಳ್ಳಿ ಎಂದಿದ್ದೇನೆ. ನನಗೆ ಹೆಚ್ಚಿನ ಮಾಹಿತಿ ಇರಲಿಲ್ಲ ಎಂದರು.ಅಷ್ಟಕ್ಕೂ ಕೆರೆ ಒತ್ತುವರಿ ಮಾಡಿ ರಸ್ತೆ ನಿರ್ಮಾಣ ಮಾಡುತ್ತಿದ್ದರೆ ಅವರು ಹೋಗಿ ಜಿಲ್ಲಾಡಳಿತಕ್ಕೆ ದೂರು ಕೊಟ್ಟಿದ್ದರೂ ಆಗುತ್ತಿತ್ತು. ಆದರೆ, ಹಾಗೆ ಮಾಡದೆ ಪ್ರತಿಭಟನೆ ಮಾಡಿದ್ದಾರೆ. ರಸ್ತೆ ನಿರ್ಮಾಣ ಮಾಡುವುದನ್ನು ಇವರು ನೋಡಿರಲಿಲ್ಲವೇ? ಆಗ ಎಲ್ಲಿ ಹೋಗಿದ್ದರು? ಮಲಗಿದ್ದರೆ? ಅಥವಾ ಇಂಗ್ಲೆಂಡ್, ಅಮೆರಿಕಕ್ಕೆ ಹೋಗಿದ್ದರೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಿಜೆಪಿಯವರಿಗೆ ನನ್ನನ್ನು ಕಂಡರೆ ಆಗುವುದಿಲ್ಲ. ನಾನು ಅಭಿವೃದ್ಧಿ ಮಾಡುತ್ತಿರುವುದರಿಂದ ನನ್ನ ಬೆನ್ನ ಹಿಂದೆ ಬಿದ್ದಿದ್ದಾರೆ. ಸಣ್ಣದನ್ನು ದೊಡ್ಡದು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.ಜಿಲ್ಲಾಧಿಕಾರಿಗೆ ಮನವಿ ನೀಡಲು ಬಂದಾಗ ಪಕ್ಕದಲ್ಲಿಯೇ ಇದ್ದಿದ್ದರಿಂದ ಮನವಿ ಸ್ವೀಕಾರ ಮಾಡಿದ್ದೇನೆ, ಅದರಲ್ಲಿ ತಪ್ಪೇನು ಎಂದು ಪ್ರಶ್ನೆ ಮಾಡಿದರು.
ನಾನು ಯಾವುದನ್ನೂ ಕಾನೂನುಬಾಹಿರ ಮಾಡುವಂತೆ ಹೇಳಿಲ್ಲ. ಅಧಿಕಾರಿಗಳು ಕಾನೂನುಬಾಹಿರವಾಗಿದ್ದರೆ ಕ್ರಮಕೈಗೊಳ್ಳುತ್ತಾರೆ. ಇವರು ಪ್ರತಿಭಟನೆ ಮಾಡುವುದನ್ನು ಬಿಟ್ಟು, ಜಿಲ್ಲಾಧಿಕಾರಿಗಳಿಗೆ ಹೇಳಿದ್ದರೆ ಅವರೇ ಕ್ರಮವಹಿಸುತ್ತಿದ್ದರು. ಇದೆಲ್ಲವನ್ನು ಅಭಿವೃದ್ಧಿ ಸಹಿಸದೆ ಮಾಡುತ್ತಿರುವುದು ಎಂದರು.