ಕೊಪ್ಪಳ ತಾಲೂಕಿನ ಗಿಣಗೇರಿ ಗ್ರಾಮದಲ್ಲಿ ಭೂ ಗ್ಯಾರಂಟಿ ಯೋಜನೆಯಡಿ ಫಲಾನುಭವಿಗಳಿಗೆ ಶಾಸಕ ರಾಘವೇಂದ್ರ ಹಿಟ್ನಾಳ ಹಕ್ಕುಪತ್ರ ವಿತರಿಸಿದರು.

ಕೊಪ್ಪಳ: ರಾಜ್ಯ ಸರ್ಕಾರ ಭೂ ರಹಿತರಿಗೂ ಭೂಮಿ ನೀಡುವ ಮೂಲಕ ಭೂ ಗ್ಯಾರಂಟಿಯನ್ನು 6ನೇ ಗ್ಯಾರಂಟಿಯನ್ನಾಗಿ ನೀಡುತ್ತಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಅವರು ಹೇಳಿದರು.

ತಾಲೂಕಿನ ಗಿಣಗೇರಿ ಗ್ರಾಮದಲ್ಲಿ ಭೂ ಗ್ಯಾರಂಟಿ ಯೋಜನೆಯಡಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು. ತಾಲೂಕಿನ ಅನೇಕ ಗ್ರಾಮಗಳಲ್ಲಿ ಕಂದಾಯ ಇಲಾಖೆಯಡಿ ಭೂ ವಿಷಯಕ್ಕೆ ಸಂಬಂಧಿಸಿದಂತೆ ಹಕ್ಕುಪತ್ರ ವಿತರಣೆ ಹಲವಾರು ಕಾರಣಗಳಿಂದ ತಡವಾಗಿತ್ತು. ಜಿಲ್ಲಾಧಿಕಾರಿ ಜತೆ ಈ ವಿಷಯದ ಕುರಿತು ಅನೇಕ ಸಭೆ ನಡೆಸಿದ್ದರ ಫಲವಾಗಿ ಎಲ್ಲ ಗ್ರಾಮಗಳಲ್ಲಿ ಭೂ ಗ್ಯಾರಂಟಿಗೆ ಸಂಬಂಧಿಸಿದ ಹಕ್ಕುಪತ್ರಗಳನ್ನು ವಿತರಣೆ ಮಾಡುವ ಕೆಲಸ ಮಾಡುತ್ತಿದ್ದೇವೆ ಎಂದರು.

ಕಂದಾಯ ಇಲಾಖೆ ಅಧಿಕಾರಿಗಳು ಮುತುವರ್ಜಿ ವಹಿಸಿ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಈಗ ಗಿಣಗೇರಿಯಲ್ಲಿ 40, ಕುಟುಗನಹಳ್ಳಿಯಲ್ಲಿ 37 ಹಕ್ಕುಪತ್ರ ವಿತರಣೆ ಮಾಡಿದ್ದೇವೆ ಎಂದರು.

ಗಿಣಗೇರಿ ಗ್ರಾಮಕ್ಕೆ ನೂತನವಾಗಿ ಮಂಜೂರು ಆಗಿರುವ ಕೆಪಿಎಸ್‌ ನಿರ್ಮಾಣದ ₹1 ಕೋಟಿ ವೆಚ್ಚದ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿದರು. ಕೊಪ್ಪಳ ತಾಲೂಕಿನ ಬೆಳವಿನಾಳ ಗ್ರಾಮದಲ್ಲಿ ₹20 ಲಕ್ಷ ವೆಚ್ಚದಲ್ಲಿ ವಾಲ್ಮೀಕಿ ಭವನ ನಿರ್ಮಾಣದ ಕಾಮಗಾರಿಗೆ ಅಡಿಗಲ್ಲು ಹಾಗೂ ₹12 ಲಕ್ಷ ವೆಚ್ಚದಲ್ಲಿ ವಾಲ್ಮೀಕಿ ಭವನ ಉದ್ಘಾಟಿಸಿದರು.

₹3.40 ಕೋಟಿ ವೆಚ್ಚದಲ್ಲಿ ಹಳೇಕನಕಾಪುರ, ಕನಕಾಪುರ ತಾಂಡಾ, ಹೊಸ ಕನಕಾಪುರ, ಗಿಣಗೇರಿ, ಬಸಾಪುರ, ಕುಟುಗನಹಳ್ಳಿ, ಕಿಡದಾಳ ಹಾಗೂ ಬೆಳವಿನಾಳ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅಡಿಗಲ್ಲು ನೆರವೇರಿಸಿದರು.

ಜಿಪಂ ಮಾಜಿ ಸದಸ್ಯರಾದ ಗೂಳಪ್ಪ ಹಲಿಗೇರಿ, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಬಾಲಚಂದ್ರನ್ ಮುನಿರಾಬಾದ್, ಗಾಳೆಪ್ಪ ಪೂಜಾರ್, ರಾಮಣ್ಣ ಕಲ್ಲನ್ನವರ್, ಸುಬ್ಬಣ್ಣಚಾರ್, ನಾಗರಾಜ ಚಳ್ಳೊಳ್ಳಿ, ಹನುಮಂತ ಜಲವರ್ಧನಿ, ಹನುಮೇಶ ಹೊಸಳ್ಳಿ, ಚಂದಪಾಶ ಕಿಲ್ಲೆದರ್, ಲಕ್ಷ್ಮಣ್ ಡೊಳ್ಳಿನ, ಮುದಿಯಪ್ಪ ಆದೋನಿ, ಪಂಪಣ್ಣ ಪೂಜಾರ್, ನಿಂಗಪ್ಪ ಮಜ್ಜಿಗಿ, ಹನುಮಂತಪ್ಪ ವಾಲ್ಮೀಕಿ, ರಮೇಶ ಕಿಡದಾಳ, ಗ್ಯಾನಪ್ಪ ಬಸಾಪುರ, ಗೋವಿಂದ ಚೌಡ್ಕಿ, ಬಸುರೆಡ್ಡಿ ಬೆಳವಿನಾಳ, ರಂಜಿತ ಚವಾಣ್, ಖಾದರ್ ಸಾಬ್, ಸುಮಂಗಲಾ ಇಂದಿರಗಿ, ಇಒ ದುಂಡೇಶ ತುರಾದಿ, ತಹಸೀಲ್ದಾರ್ ಬಸವರಾಜ, ಮಲ್ಲು ಪೂಜಾರ್, ಪರಶುರಾಮ್ ಕೆರೆಹಳ್ಳಿ, ಆನಂದ ಮುಗುಳಿ ಉಪಸ್ಥಿತರಿದ್ದರು.