ಹಿಂಗಾರು ಬಿಳಿಜೋಳ 105 ರೈತರು ನೋಂದಣಿ ಮಾಡಿಸಿದ್ದು 4865 ಕ್ವಿಂಟಲ್‌ ಖರೀದಿ ಸೇರಿದಂತೆ ಒಟ್ಟು 2594 ರೈತರಿಂದ ರಾಗಿ, ಬಿಳಿಜೋಳ ಸೇರಿ 90787 ಕ್ವಿಂಟಲ್‌ ಖರೀದಿ ಮಾಡಲಾಗುತ್ತಿದೆ

ಹೂವಿನಹಡಗಲಿ: ದೇಶದ ಸಮಗ್ರ ಅಭಿವೃದ್ಧಿಯಲ್ಲಿ ರೈತನ ಪಾತ್ರ ಬಹಳ ಪ್ರಮುಖವಾಗಿದೆ. ದೇಶದ ಆರ್ಥಿಕತೆಯ ಬೆನ್ನೆಲುಬು ರೈತನಾಗಿದ್ದಾನೆಂದು ಶಾಸಕ ಕೃಷ್ಣನಾಯ್ಕ ಹೇಳಿದರು.

ಇಲ್ಲಿನ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದಿಂದ 2025-26ನೇ ಸಾಲಿನ ಮುಂಗಾರು ಹಂಗಾಮಿನ ರಾಗಿ, ಬಿಳಿಜೋಳ ಮತ್ತು ಹಿಂಗಾರು ಬಿಳಿಜೋಳ ರೈತರ ಉತ್ಪನ್ನಗಳನ್ನು ಖರೀದಿಸಲು ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು.

ತಾಲೂಕಿನ ವಿವಿಧ ಕಡೆಗಳಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆದಿದ್ದ ರಾಗಿ ಮಾರಾಟಕ್ಕೆ 2308 ನೋಂದಣಿ ಮಾಡಿದ ರೈತರು 71599 ಕ್ವಿಂಟಲ್‌, 181 ರೈತರಿಂದ 14322 ಕ್ವಿಂಟಲ್‌ ಮುಂಗಾರು ಹಂಗಾಮಿನ ಬಿಳಿ ಜೋಳ ಖರೀದಿ ಮತ್ತು ಹಿಂಗಾರು ಬಿಳಿಜೋಳ 105 ರೈತರು ನೋಂದಣಿ ಮಾಡಿಸಿದ್ದು 4865 ಕ್ವಿಂಟಲ್‌ ಖರೀದಿ ಸೇರಿದಂತೆ ಒಟ್ಟು 2594 ರೈತರಿಂದ ರಾಗಿ, ಬಿಳಿಜೋಳ ಸೇರಿ 90787 ಕ್ವಿಂಟಲ್‌ ಖರೀದಿ ಮಾಡಲಾಗುತ್ತಿದೆ ಎಂದರು.

ತಾಲೂಕಿನಲ್ಲಿ ತುಂಗಭದ್ರೆ ಹರಿಯುತ್ತಿದ್ದರೂ ಈ ಕ್ಷೇತ್ರವನ್ನು ಸಮಗ್ರ ನೀರಾವರಿ ಮಾಡಲು ಸಾಧ್ಯವಾಗಿಲ್ಲ, ಸಿಂಗಟಾಲೂರು ಏತ ನೀರಾವರಿ ಯೋಜನೆಯಿಂದ 35 ಸಾವಿರ ಎಕರೆ ನೀರಾವರಿ ಪ್ರದೇಶವಿದೆ. ಆದರೆ ಸರಿಯಾಗಿ ನಿರ್ವಹಣೆ ಇಲ್ಲದೇ ರೈತರು ನೀರಾವರಿ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಮಳೆಗಾಲ ಸೇರಿದಂತೆ ಇತರೆ ಸಂದರ್ಭದಲ್ಲಿ ನದಿ ತುಂಬಿ ಹರಿಯುತ್ತಿದೆ ಆದರೆ, ಅದನ್ನು ತಡೆದು ಸದ್ಭಳಕೆ ಮಾಡಿಕೊಳ್ಳಲು ಆಗದ ಕಾರಣ ಸಮುದ್ರ ಸೇರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕೃಷಿ ಕ್ರಾಂತಿ ಆಗಬೇಕಾದರೆ ನೀರನ್ನು ಸರಿಯಾಗಿ ಸದ್ಬಳಕೆ ಮಾಡಿಕೊಂಡು ರೈತರಿಗೆ ಸಕಾಲದಲ್ಲಿ ನೀರಾವರಿ ಸೌಲಭ್ಯ ನೀಡಬೇಕು. ಸರ್ಕಾರ ರೈತರ ಉತ್ಪನ್ನಗಳಿಗೆ ಸೂಕ್ತ ಬೆಂಬಲ ಬೆಲೆ ನೀಡಿದರೆ ರೈತ ಸಮುದಾಯ ತುಸು ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದೆ ಎಂದರು.

ರೈತರ ಉತ್ಪನ್ನ ಖರೀದಿ ಕೇಂದ್ರದಲ್ಲಿ ರೈತರಿಗೆ ತೂಕ ಹಾಗೂ ಖರೀದಿ ವಿಚಾರದಲ್ಲಿ ಅನ್ಯಾಯ ಆಗದಂತೆ ಟಿಎಪಿಸಿಎಂಎಸ್‌ನ ವ್ಯವಸ್ಥಾಪಕರು ಮತ್ತು ನಿರ್ದೇಶಕರು ನೋಡಿಕೊಳ್ಳಬೇಕೆಂದು ಸೂಚಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಸಿದ್ದಪ್ಪ ಹೊಸಮನಿ ಮಾತನಾಡಿ, ರೈತರಿಗೆ ಸೂಕ್ತ ಬೆಂಬಲ ಬೆಲೆ ನೀಡಿದರೆ ಸರ್ಕಾರದ ಬಳಿ ಕೈ ಚಾಚುವುದನ್ನು ನಿಲ್ಲಿಸುತ್ತಾನೆ. ಬಿತ್ತನೆ ಬೀಜ, ರಸ ಗೊಬ್ಬರ ಹಾಗೂ ಔಷಧಿಗಳನ್ನು ಸಕಾಲದಲ್ಲಿ ಪೂರೈಕೆ ಮಾಡಿ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಅಧಿಕಾರಿಗಳು ಮತ್ತು ಸರ್ಕಾರ ನಡೆದುಕೊಳ್ಳಬೇಕೆಂದು ಹೇಳಿದರು.

ಟಎಪಿಸಿಎಂಎಸ್‌ನ ಅಧ್ಯಕ್ಷ ಮಲ್ಕಿ ಒಡೆಯರ್‌ ನಾಗಭೂಷಣ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಶರಣಬಸಪ್ಪ, ಆಹಾರ ಇಲಾಖೆ ಭಾರತಿ, ಟಿಎಪಿಸಿಎಂಎಸ್‌ ಉಪಾಧ್ಯಕ್ಷ ಎಲ್‌.ಚಂದ್ರನಾಯ್ಕ, ನಿರ್ದೇಶಕರಾದ ಟಿ.ಮಹಾಂತೇಶ, ಎಂ.ಸಂಧ್ಯಾ, ಕೆ.ಮಂಜುನಾಥ, ನಿಂಗಪ್ಪ ಬೆನ್ನೂರು, ಎಂ.ನೆಪೋಲಿಯನ್‌, ಕೆ.ಎಸ್‌. ರಾಜಶೇಖರಗೌಡ, ಬಿ.ಎಂ. ವೀರಯ್ಯ, ಜಿ.ಮಲ್ಲಪ್ಪ, ಹಕ್ಕಂಡಿ ಮಹಾದೇವ, ಹಣ್ಣಿ ಸುಮಾ, ಮೂಲಿಮನಿ ರಾಜಾಸಾಬ್‌, ವ್ಯವಸ್ಥಾಪಕ ಸೊಪ್ಪಿನ ವೀರಣ್ಣ ಉಪಸ್ಥಿತರಿದ್ದರು.