ಸಾರಾಂಶ
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನ. 27 ರಿಂದ ಡಿ. 6 ವರೆಗೂ ಉತ್ತರ ಕರ್ನಾಟಕದ 6 ಜಿಲ್ಲೆಗಳ ವ್ಯಾಪ್ತಿಯ ಅಭ್ಯರ್ಥಿಗಳ ನೇಮಕಾತಿ ರ್‍ಯಾಲಿ ನಡೆಯಲಿದ್ದು, ಈಗಾಗಲೇ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಬೆಳಗಾವಿ, ಕಲಬುರಗಿ, ಕೊಪ್ಪಳ, ಯಾದಗಿ, ರಾಯಚೂರು, ಬೀದರ್ ಜಿಲ್ಲೆಯ ಅಭ್ಯರ್ಥಿಗಳು ಭಾಗಿ
ನ. 27ರಿಂದ ಡಿ. 6ವರೆಗೂ ನೇಮಕಾತಿ ರ್‍ಯಾಲಿ ಕನ್ನಡಪ್ರಭ ವಾರ್ತೆ ಕೊಪ್ಪಳನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನ. 27 ರಿಂದ ಡಿ. 6 ವರೆಗೂ ಉತ್ತರ ಕರ್ನಾಟಕದ 6 ಜಿಲ್ಲೆಗಳ ವ್ಯಾಪ್ತಿಯ ಅಭ್ಯರ್ಥಿಗಳ ನೇಮಕಾತಿ ರ್‍ಯಾಲಿ ನಡೆಯಲಿದ್ದು, ಈಗಾಗಲೇ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನ. 27ರಂದು ಜಿಲ್ಲಾವಾರು ನಿಗದಿಯಂತೆ ನಡೆಯಲಿದೆ.
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಈಗಾಗಲೇ ಆಯ್ಕೆ ಪ್ರಕ್ರಿಯೆ ದಿನಾಂಕ ನಿಗದಿ ಮಾಡಿ, ಮಾಹಿತಿ ನೀಡಲಾಗಿದ್ದು, ಅದರಂತೆ ಅಭ್ಯರ್ಥಿಗಳು ಆಗಮಿಸಲಿದ್ದಾರೆ. ಕೊನೆಯ ದಿನವಾದ ಡಿ.6ರಂದು ಉಳಿದ ಎಲ್ಲಾ ಜಿಲ್ಲಾ ಅಭ್ಯರ್ಥಿಗಳಿಗೆ ಭಾಗವಹಿಸಲು ಅವಕಾಶ ನೀಡಲಾಗಿದೆ.ಇದಕ್ಕಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಅಭ್ಯರ್ಥಿಗಳ ಆಯ್ಕೆಗೂ ಮುನ್ನ ಓಟದ ಪರೀಕ್ಷೆ ಇರುತ್ತದೆ. ಇದಕ್ಕಾಗಿಯೂ ಸಿದ್ಧತೆ ಮಾಡಿಕೊಳ್ಳಲಾಗಿದೆ.ಯಾವ ಯಾವ ಜಿಲ್ಲೆಯವರು:
ನ. 27ರಿಂದ ಡಿ. 4 ರವರೆಗೂ ನಿತ್ಯ 900 ವಿದ್ಯಾರ್ಥಿಗಳಂತೆ ಬೆಳಗಾವಿ ಮತ್ತು ಕಲಬುರಗಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ನಿಗದಿ ಮಾಡಲಾಗಿದೆ. ಡಿ. 5ರಂದು ಕೊಪ್ಪಳ, ಬೀದರ, ರಾಯಚೂರು, ಯಾದಗಿರಿ ಜಿಲ್ಲೆಯ 855 ಅಭ್ಯರ್ಥಿಗಳು ಹಾಗೂ ಡಿ. 6ರಂದು ಅರ್ಜಿ ಸಲ್ಲಿಸಿದ ಇತರೆ ಜಿಲ್ಲೆಯ 542 ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ.ದಾಖಲೆ ಪರಿಶೀಲನೆ:
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಮೂಲಕ ದಾಖಲೆಯನ್ನು ಆಯಾ ದಿನ ಪ್ರಾರಂಭದಲ್ಲಿ ಪರಿಶೀಲನೆ ನಡೆಸಲಾಗುವುದು. ದಾಖಲೆಗಳ ಪರಿಶೀಲನೆ ಮುಗಿಯುತ್ತಿದ್ದಂತೆ ಅಭ್ಯರ್ಥಿಗಳನ್ನು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ. 100 ಅಭ್ಯರ್ಥಿಗಳಂತೆ ತಂಡವನ್ನು ರಚನೆ ಮಾಡಿ, ಮೊದಲು ಓಟವನ್ನು ನಡೆಸಲಾಗುತ್ತದೆ. ಓಟದಲ್ಲಿ ನಿಗದಿತ ಸಮಯದಲ್ಲಿ ನಿಗದಿತ ಗುರಿಯನ್ನು ತಲುಪುವ ಅಭ್ಯರ್ಥಿಗಳನ್ನು ಮುಂದಿನ ಆಯ್ಕೆ ಪ್ರಕ್ರಿಯೆಗೆ ಆಯ್ಕೆ ಮಾಡಲಾಗುತ್ತದೆ. ಇದಾದ ಮೇಲೆ ಎತ್ತರ, ಎದೆ ಅಳತೆ ಹೀಗೆ ದೈಹಿಕ ಪರೀಕ್ಷೆ ನಡೆಯಲಿದೆ. ಇದಾದ ಮೇಲೆ ಮುಂದಿನ ಪ್ರಕ್ರಿಯೆ ನಡೆಯಲಿದೆ.ನೇಮಕಾತಿ ತರಬೇತಿ:
ಸೇನಾ ನೇಮಕಾತಿಯ ಕುರಿತು ಈಗಾಗಲೇ ಆಯಾ ಜಿಲ್ಲೆಯಲ್ಲಿ ತರಬೇತಿಯನ್ನು ಸಹ ನೀಡಲಾಗಿದೆ. ಕೊಪ್ಪಳ ಜಿಲ್ಲೆಯಲ್ಲಿಯೂ ಈ ಕುರಿತು ಸಾಕಷ್ಟು ಜಾಗೃತಿ ಮೂಡಿಸಿ, ತರಬೇತಿ ನೀಡಲಾಗಿದೆ. ಆದರೂ ಕೊಪ್ಪಳ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಸಂಖ್ಯೆ ಕೇವಲ 450 ಮಾತ್ರ. ಜಿಲ್ಲೆಯಲ್ಲಿಯೇ ಸೇನಾ ನೇಮಕಾತಿ ರ್‍ಯಾಲಿ ನಡೆಯುತ್ತಿದ್ದರೂ ನಿರೀಕ್ಷೆಯಷ್ಟು ಸ್ಪಂದನೆ ಸಿಕ್ಕಿಲ್ಲ.