ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ತಾಲೂಕಿನ ನಂದಿ ಗ್ರಾಮದಲ್ಲಿರುವ ಐತಿಹಾಸಿಕ ಪುರಾಣ ಪ್ರಸಿದ್ದ ಶ್ರೀಭೋಗನಂಧೀಶ್ವರನ ಆಲಯಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಹುರುಳಗುರ್ಕಿ ಗ್ರಾಮದ ವೆಂಕಟೇಗೌಡ ಹಾಗೂ ಕುಟುಂಬಸ್ಥರು ಬರೋಬ್ಬರಿ 2 ಕೋಟಿಗೂ ಅಧಿಕ ಮೊತ್ತದ ಹಣ ಖರ್ಚು ಮಾಡಿ ಭವ್ಯವಾದ ಬ್ರಹ್ಮ ರಥ ನಿರ್ಮಾಣ ಮಾಡಿಸಿ ದೇವಾಲಯಕ್ಕೆ ಸೋಮವಾರ ಹಸ್ತಾಂತರ ಮಾಡಿದರು.ಶ್ರೀಭೋಗನಂಧೀಶ್ವರನ ನೂತನ ಬ್ರಹ್ಮ ರಥಕ್ಕೆ ಧರ್ಮಸ್ಥಳದ ಅರ್ಚಕರಿಂದ ವಿಧಿವಿಧಾನಗಳೊಂದಿಗೆ ನೂತನ ವಸ್ತ್ರ, ಹೂ ತಳಿರು ತೋರಣ ಗಳಿಂದ ಸಿಂಗರಿಸಿ ವಿಶೇಷ ಪೂಜಾ ಕೈಂಕರ್ಯವನ್ನು ನೆರವೇರಿಸಲಾಯಿತು. ಬಳಿಕ ದೇವಾಲಯದ ಸುತ್ತಲೂ ಒಂದು ಪ್ರದಕ್ಷಿಣೆ ಹಾಕುವ ಮೂಲಕ ಬೆಳ್ಳಿ ರಥವನ್ನು ಲೋಕಾರ್ಪಣೆ ಗೊಳಿಸಲಾಯಿತು.
ವೆಂಕಟೇಗೌಡರ ಕೊಡುಗೆಹಳೆಯ ಕಾಲದ ರಥ ಬಳಕೆಗೆ ಯೋಗ್ಯವಾಗಿರಲಿಲ್ಲ. ರಥೋತ್ಸವದ ವೇಳೆ ಎಲ್ಲಂದರಲ್ಲಿ ಕೆಟ್ಟು ನಿಲ್ಲುತ್ತಿತ್ತು. ಕಳೆದ ಬಾರಿ 2023ರಲ್ಲಿ ರಥದ ಅಚ್ಚು ಮುರಿದು ರಥ ಕದಲೇ ಇಲ್ಲ. ಇದನ್ನು ಮನಗಂಡ ಉದ್ಯಮಿ ವೆಂಕಟೇಗೌಡರು ದಕ್ಷಿಣ ಕನ್ನಡದ ಕುಂದಾಪುರದ ಕುಂಭಾಶಿಯ ವಿಶ್ವಕರ್ಮ ಕರಕುಶಲ ಕೇಂದ್ರದಲ್ಲಿ ಸಾಗುವಾನಿ ಹಾಗೂ ಭೋಗಿ ಮರ ಬಳಸಿ ಭವ್ಯವಾದ ರಥ ನಿರ್ಮಾಣ ಮಾಡಿಸಿ, ನೂತನ ರಥವನ್ನ ಕಾರ್ತಿಕ ಸೋಮವಾರದಂದು ಅಧಿಕೃತವಾಗಿ ದೇವಾಲಯಕ್ಕೆ ಹಸ್ತಾಂತರಿಸಿದರು. ಬಳಿಕ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಿದರು.ಬ್ರಹ್ಮರಥದ ದಾನಿ ವೆಂಕಟೇಗೌಡ ಮಾತನಾಡಿ, ನಾನು ನಂದಿ ಗ್ರಾಮದಲ್ಲೇ ವಿದ್ಯಾಬ್ಯಾಸ ಮಾಡಿದವನಾಗಿದ್ದು, ನಾನು ಶಿವರಾತ್ರಿ ಸಮಯದಲ್ಲೂ ಈ ದೇವಾಲಯಕ್ಕೆ ಬಂದು ಹೋಗುತ್ತಿದ್ದೆ. ದೇವರ ಪ್ರೇರಣೆ ಎಂಬಂತೆ ಈಗ ಬ್ರಹ್ಮ ರಥ ನಿರ್ಮಾಣವಾಗಿ ಲೋಕಾರ್ಪಣೆಯಾಗಿದೆ ಎಂದರು.
ಕೊಲ್ಲೂರು ರಥದ ಮಾದರಿಬ್ರಹ್ಮ ರಥ ಶಿಲ್ಪಿ ರಾಜಗೋಪಾಲ್ ಆಚಾರ್ ಮಾತನಾಡಿ, ವೆಂಕಟೇಗೌಡರು ರಥ ಮಾಡಿಸಲು ನಮ್ಮ ಬಳಿ ಬಂದಾಗ ಬಹಳಷ್ಟು ರಥಧ ಮಾದರಿಗಳನ್ನ ತೋರಿಸಿದ್ದೇವು, ಆದರೆ ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿನ ರಥ ಕಂಡ ವೆಂಕಟೇಗೌಡರು ಅದೇ ಮಾದರಿಯ ರಥ ಬೇಕು ಅಂತ ತಿಳಿಸಿದರು. ರಥೋತ್ಸವ ಮತ್ತು ಕಾರ್ತಿಕ ಸೋಮವಾರದ ಪ್ರಯುಕ್ತ ದೇವಾಲ ಕ್ಕೆ ಸಹಸ್ರಾರು ಭಕ್ತರು ಆಗಮಿಸಿದ್ದರು. ಈವೇಳೆ ಆಗಮಿಸಿದ ಭಕ್ತರಿಗೆ ಅನ್ನ ಸಂತರ್ಪಣೆಯನ್ನು ವೆಂಕಟೇಗೌಡ ಮತ್ತು ಕುಟುಂಬಸ್ಥರು ಏರ್ಪಡಿಸಿದ್ದರು.
ಈ ವೇಳೆ ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ಉಪವಿಭಾಗಾಧಿಕಾರಿ ಡಿ.ಎಚ್.ಅಶ್ವನ್, ತಹಸಿಲ್ದಾರ್ ಎಂ.ಅನಿಲ್, ಬ್ರಹ್ಮ ರಥ ಶಿಲ್ಪಿ ರಾಜಗೋಪಾಲ್ ಆಚಾರ್, ಗ್ರಾಮಸ್ಥರಾದ ಜಿ.ಆರ್. ಶ್ರೀನಿವಾಸ್, ಲಿಂಗಾರೆಡ್ಡಿ, ಆನಂದ್ ಕುಮಾರ್ ಮತ್ತಿತರರು ಇದ್ದರು.