ರೈತರಿಂದ ಹಣ ವಸೂಲಿ ಆರೋಪ ಸುಳ್ಳು: ರೈತ ಸಂಘ ಸಂಚಾಲಕ ಕನಕಂಚೇನಹಳ್ಳಿ ಪ್ರಸನ್ನಕುಮಾರ್

| Published : Mar 22 2024, 02:15 AM IST

ರೈತರಿಂದ ಹಣ ವಸೂಲಿ ಆರೋಪ ಸುಳ್ಳು: ರೈತ ಸಂಘ ಸಂಚಾಲಕ ಕನಕಂಚೇನಹಳ್ಳಿ ಪ್ರಸನ್ನಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಅರಸೀಕೆರೆ ತಾಲೂಕು ಆಡಳಿತ ಕಚೇರಿ ಮುಂಭಾಗದಲ್ಲಿ ರಾಜ್ಯ ರೈತ ಸಂಘ ಸಂಚಾಲಕ ಕನಕಂಚೇನಹಳ್ಳಿ ಪ್ರಸನ್ನಕುಮಾರ್ ಹಾಗೂ ಬೆಂಬಲಿಗರು ತಮ್ಮ ಮೇಲೆ ರೈತ ಸಂಘದ ಹೆಸರಿನಲ್ಲಿ ಸುಳ್ಳು ಆಪಾದನೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ತಾಲೂಕು ಆಡಳಿತ ಕಚೇರಿ ಮುಂಭಾಗದಲ್ಲಿ ರಾಜ್ಯ ರೈತ ಸಂಘ ಸಂಚಾಲಕ ಕನಕಂಚೇನಹಳ್ಳಿ ಪ್ರಸನ್ನಕುಮಾರ್ ಹಾಗೂ ಬೆಂಬಲಿಗರು ತಮ್ಮ ಮೇಲೆ ರೈತ ಸಂಘದ ಹೆಸರಿನಲ್ಲಿ ಸುಳ್ಳು ಆಪಾದನೆ ಮಾಡಿ ತಹಸೀಲ್ದಾರ್‌ಗೆ ಮನವಿ ನೀಡಿದ್ದು ತಾವು ಹೋರಾಟ ಮಾಡಿರುವ ಅಗತ್ಯ ದಾಖಲೆಗಳ ಸಮೇತ ಬಹಿರಂಗ ಚರ್ಚೆಗೆ ಸಿದ್ದವಿದ್ದು ಚರ್ಚೆಗೆ ಬರುವಂತೆ ಸವಾಲು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕ ಕಚೇರಿ ಎದುರು ಅಗತ್ಯ ದಾಖಲೆಗಳನ್ನು ಸುರಿದು ಪ್ರತಿಭಟನೆ ನಡೆಸಿ ಸುಳ್ಳು ಆಪಾದನೆ ಮಾಡಿರುವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮಾ.೧೮ ರಂದು ರಾಜ್ಯ ರೈತ ಸಂಘ, ಹಸಿರು ಸೇನೆ ಮತ್ತು ನವ ಕರ್ನಾಟಕ ರೈತ ಸಂಘ ಆಶ್ರಯದಲ್ಲಿ ನಡೆದ ಸಾಂಕೇತಿಕ ಪ್ರತಿಭಟನೆ ಹಾಗೂ ತಹಸೀಲ್ದಾರ್ ರುಕೀಯಾ ಬೇಗಂಗೆ ಕೆಲ ರೈತರಿಂದ ಸರ್ಕಾರಿ ಜಮೀನನ್ನು ಮಂಜೂರು ಮಾಡಿಸಿ ಕೊಡುತ್ತೇವೆಂದು ಅಮಾಯಕ ರೈತರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ತಮ್ಮ ಮೇಲೆ ಸುಳ್ಳು ಆಪಾದನೆ ಹೊರಿಸಿ ಮನವಿ ಸಲ್ಲಿಸಿದ್ದಾರೆ. ಇದು ಸತ್ಯಕ್ಕೆ ದೂರವಾದ ಮಾತು ಎಂದು ಹೇಳಿದರು.

‘ಪ್ರೊ.ನಂಜುಂಡಸ್ವಾಮಿಯವರ ಹಾದಿಯಲ್ಲಿ ೩೫ ವರ್ಷಗಳಿಂದ ಎತ್ತಿನ ಹೊಳೆ ಯೋಜನೆ, ಸಾರ್ವಜನಿಕ ಆಸ್ಪತ್ರೆ, ವೈದ್ಯರ ಕೊರತೆ, ರಸ್ತೆ, ಜಾನುವಾರು, ಸರ್ಕಾರಿ ಬಗರ್ ಹುಕುಂ ಜಮೀನು ಹೀಗೆ ಹತ್ತು ಹಲವು ಹೋರಾಟ ಮಾಡಿಕೊಂಡು ಬಂದಿದ್ದು ಇದಕ್ಕೆ ಅಗತ್ಯ ದಾಖಲೆಗಳನ್ನು ಶೇಖರಿಸಿ ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳ ಉತ್ತರ ಹೇಳಿಕೆಗಳನ್ನು ದಾಖಲೆಗಳ ಸಮೇತ ತಾಲೂಕಿನ ಜನರ ಮುಂದೆ ಇಡುತ್ತೇನೆ. ನನ್ನ ಹಾಗೂ ಬೆಂಬಲಿಗರ ಮೇಲೆ ಬಂದಿರುವ ಆರೋಪವನ್ನು ಹಿಂಪೆಯಡಬೇಕು’ ಎಂದು ಒತ್ತಾಯಿಸಿದರು.

ತಾಲೂಕಿನ ಯಾವ ರೈತರ ಹತ್ತಿರ ಹಣವನ್ನು ವಸೂಲಿಯಾಗಲೀ, ಆಮಿಷವಾಗಲೀ, ಇಲ್ಲಸಲ್ಲದ ಹೇಳಿಕೆ ನೀಡಿಲ್ಲ. ಪಾದಯಾತ್ರೆ ಮಾಡಿ ರಾಷ್ಟ್ರಪತಿ, ಪ್ರಧಾನ ಮಂತ್ರಿ ,ಮುಖ್ಯಮಂತ್ರಿ, ರಾಜ್ಯಪಾಲರು, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಅವರ ಹತ್ತಿರ ಚರ್ಚೆ ಮಾಡಿದ್ದೇವೆ. ಸುಳ್ಳು ಆರೋಪ, ಪ್ರಚಾರಗಳಿಂದ ಪ್ರಯೋಜನವಿಲ್ಲ, ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಅಯೂಬ್ ಪಾಶ, ಎಜಾಜ್ ಪಾಶ, ನಂಜಮ್ಮ, ಮಹಮ್ಮದ್ ದಸ್ತಗಿರಿ, ಜವೇನಹಳ್ಳಿ ನಿಂಗಪ್ಪ, ಚಂದ್ರಪ್ಪ ರೆಡ್ಡಿ, ಅಬ್ದುಲ್ ಕುನ್ನಿ, ಹನುಮಂತ, ಮಮತಾ, ಕಾಂತರಾಜು, ಶಿವಣ್ಣ, ಗಂಗಣ್ಣ, ಅರೇಹಳ್ಳಿ ರಮೇಶ್, ಶಶಿಕುಮಾರ್, ರಂಜಾನ್, ಕೋಲಾರದ ರೆಡ್ಡಪ್ಪ ಇದ್ದರು

ರೈತ ಸಂಘದ ಗೌರವ ಅಧ್ಯಕ್ಷ ಜವನಳ್ಳಿ ನಿಂಗಪ್ಪ, ಜಿಲ್ಲಾ ಕಾರ್ಯದರ್ಶಿ ಆಯೂಬ್ ಪಾಷಾ, ಏಜಾಬಾ ಪಾಷಾ, ದಸ್ತಗಿರಿ, ನಂಜಮ್ಮ ಉಪಸ್ಥಿತರಿದ್ದರು.

ಅರಸೀಕೆರೆ ತಾಲೂಕು ಕಚೇರಿ ಮುಂಭಾಗ ಬುಧವಾರ ರಾಜ್ಯ ರೈತ ಸಂಚಾಲಕ ಕನಕಂಚೇನಹಳ್ಳಿ ಪ್ರಸನ್ನಕುಮಾರ್ ಹಾಗೂ ಬೆಂಬಲಿಗರು ತಮ್ಮ ಮೇಲೆ ಸುಳ್ಳು ಆರೋಪ ಹೊರಿಸಿದ್ದಾರೆ ಎಂದು ಕೆಲವು ದಾಖಲೆಗಳನ್ನು ಚೀಲಗಳಲ್ಲಿ ಸುರಿದು ಆಕ್ರೋಶ ವ್ಯಕ್ತಪಡಿಸಿದರು.