ಬೆಂ. ಉತ್ತರಕ್ಕೆ ರಾಜೀವ್‌ ಗೌಡ ಕೈ ಅಭ್ಯರ್ಥಿ

| Published : Mar 22 2024, 02:15 AM IST / Updated: Mar 22 2024, 01:22 PM IST

ಸಾರಾಂಶ

ಬೆಂಗಳೂರಿನ 3 ಕ್ಷೇತ್ರಗಳಗೆ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ರಾಜೀವ್ ಗೌಡ, ಸೌಮ್ಯ ರೆಡ್ಡಿ ಕಣಕ್ಕೆ ಇಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ತೀವ್ರ ಕುತೂಹಲ ಹುಟ್ಟಿಸಿದ್ದ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಪ್ರಬಲ ಅಭ್ಯರ್ಥಿ ಹುಡುಕಾಟ ನಡೆಸಿದ್ದ ಕಾಂಗ್ರೆಸ್‌ ಪಕ್ಷ ಕಡೆಗೂ ಪ್ರೊ। ರಾಜೀವ್‌ ಗೌಡ ಅವರಿಗೆ ಟಿಕೆಟ್‌ ನೀಡಬೇಕಾಗಿ ಬಂತು.

ಆರಂಭದಿಂದಲೂ ರಾಜೀವ್‌ಗೌಡ ಆಕಾಂಕ್ಷಿಯಾಗಿದ್ದರೂ ಕಾಂಗ್ರೆಸ್‌ ನಾಯಕತ್ವ ಪ್ರಬಲ ಸ್ಪರ್ಧಿ ಕಣಕ್ಕೆ ಇಳಿಸಬೇಕು ಎಂಬ ಕಾರಣಕ್ಕೆ ಶಾಸಕ ಪ್ರಿಯಕೃಷ್ಣ ಅವರನ್ನು ಕಣಕ್ಕೆ ಇಳಿಸುವ ಪ್ರಯತ್ನ ನಡೆಸಿತ್ತು. ಆದರೆ ಪ್ರಿಯಕೃಷ್ಣ ಅವರು ತಮ್ಮ ತಂದೆ ಎಂ.ಕೃಷ್ಣಪ್ಪ ಅವರಿಗೆ ಸಚಿವ ಸ್ಥಾನ ನೀಡಿದರೆ ಮಾತ್ರ ಸ್ಪರ್ಧಿಸುವುದಾಗಿ ಷರತ್ತು ವಿಧಿಸಿದ್ದರು. ಹೀಗಾಗಿ ಹಲವು ಸುತ್ತಿನ ಮನವೊಲಿಕೆ ಸಭೆಗಳ ನಂತರವೂ ಪ್ರಿಯಕೃಷ್ಣ ಷರತ್ತು ಸಡಿಲಿಸದ ಕಾರಣ ಬೇರೆ ಅಭ್ಯರ್ಥಿ ಹುಡುಕಾಟಕ್ಕೆ ಮುಂದಾಗಿತ್ತು.

ಇದೇ ವೇಳೆ ಬಿಜೆಪಿಯಲ್ಲಿ ಟಿಕೆಟ್‌ ವಂಚಿತರಾಗಿದ್ದ ಮಾಜಿ ಸಂಸದ ಸದಾನಂದಗೌಡ ಅವರ ಹೆಸರು ಈ ಕ್ಷೇತ್ರಕ್ಕೆ ಕೇಳಿಬಂತು. ಅಂತಿಮವಾಗಿ ಸದಾನಂದಗೌಡರು ಬಿಜೆಪಿ ತೊರೆಯುವುದಿಲ್ಲ ಎಂಬ ಸೂಚನೆ ಬಂದ ನಂತರ ರಾಜೀವ್‌ಗೌಡ ಹೆಸರನ್ನು ಅಂತಿಮಗೊಳಿಸಲಾಯಿತು.

ಇನ್ನು ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಮನ್ಸೂರ್ ಅಲಿಖಾನ್‌, ಎಸ್.ಎ.ಹುಸೇನ್‌ ಹಾಗೂ ಬಿಡಿಎ ಆಯುಕ್ತ ಎನ್‌.ಎ.ಹ್ಯಾರಿಸ್‌ ಹಾಗೂ ಅವರ ಪುತ್ರ ನಲಪಾಡ್ ಹೆಸರು ಚರ್ಚೆಯಲ್ಲಿತ್ತು. ಅಂತಿಮವಾಗಿ ಕೆ.ರೆಹಮಾನ್‌ ಖಾನ್‌ ಪುತ್ರ ಮನ್ಸೂರ್‌ ಅಲಿಖಾನ್‌ ಅವರಿಗೆ ಅವಕಾಶ ದೊರೆತಿದೆ.ಕೊನೆಗೂ ಸೌಮ್ಯಾರೆಡ್ಡಿ ಕಣಕ್ಕೆ

ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಮೊದಲಿನಿಂದಲೂ ಸೌಮ್ಯಾರೆಡ್ಡಿ ಅವರನ್ನು ಕಣಕ್ಕೆ ಇಳಿಸುವ ಇರಾದೆ ಕಾಂಗ್ರೆಸ್‌ ನಾಯಕತ್ವಕ್ಕೆ ಇತ್ತು. ಆದರೆ, ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಪುತ್ರಿಯನ್ನು ಕಣಕ್ಕೆ ಇಳಿಸುವ ಮನಸ್ಸು ಇರಲಿಲ್ಲ. ಆದರೆ, ಖುದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತೀವ್ರ ಮನವೊಲಿಕೆ ನಂತರ ರಾಮಲಿಂಗಾರೆಡ್ಡಿ ಅವರು ಪುತ್ರಿಯನ್ನು ಕಣಕ್ಕೆ ಇಳಿಸಲು ಒಪ್ಪಿಗೆ ನೀಡಿದರು.