ನಗರಸಭಾ ವ್ಯಾಪ್ತಿಯ ಅನಧಿಕೃತ ಆಸ್ತಿಗೆ ಬಿ- ಖಾತೆಯಲ್ಲಿ ದಾಖಲಿಸಲು ಅವಕಾಶ

| Published : Feb 23 2025, 12:31 AM IST

ನಗರಸಭಾ ವ್ಯಾಪ್ತಿಯ ಅನಧಿಕೃತ ಆಸ್ತಿಗೆ ಬಿ- ಖಾತೆಯಲ್ಲಿ ದಾಖಲಿಸಲು ಅವಕಾಶ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಅಂಬೇಡ್ಕರ್ ಭವನ, ರಂಗನಾಥ ನಗರದ ಸಮುದಾಯ ಭವನ, ನಗರಸಭೆ ಕಚೇರಿ, ರೇಷ್ಮೆ ಇಲಾಖೆ ಕಟ್ಟಡದಲ್ಲಿ ನಗರಸಭೆ ಸಿಬ್ಬಂದಿ ಇರುತ್ತಾರೆ. ಸಾರ್ವಜನಿಕರು ತಮ್ಮ ಆಸ್ತಿಗೆ ಸಂಬಂಧಿಸಿದ ದಾಖಲಾತಿಗಳನ್ನು ಸಲ್ಲಿಸಿ ಇದರ ಅನುಕೂಲ ಪಡೆಯಬಹುದು. 7 ದಿನದಲ್ಲಿ ಇ- ಆಸ್ತಿ ಮಾಡಿಕೊಡಲಾಗುವುದು. ನಗರಸಭೆ ಸಿಬ್ಬಂದಿ ವಿಳಂಭ ಮಾಡಿದರೆ ನಮ್ಮ ಗಮನಕ್ಕೆ ತನ್ನಿ ಎಂದರು.

ಕನ್ನಡಪ್ರಭ ವಾರ್ತೆ ಶಿರಾ

ನಗರಸಭಾ ವ್ಯಾಪ್ತಿಯ ಅನಧಿಕೃತ ಬಡಾವಣೆಗಳ ಕಟ್ಟಡ ಮಾಲೀಕರು, ನಿವೇಶನದಾರರು ಮೂರು ತಿಂಗಳೊಳಗೆ ಬಿ- ಖಾತಾಗೆ ದಾಖಲಿಸಲು ಅವಕಾಶ ನೀಡಲಾಗಿದೆ. ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಿ ಎಂದು ರಾಜ್ಯ ಸರಕಾರದ ದೆಹಲಿ ವಿಶೇಷ ಪ್ರತಿನಿಧಿ ಡಾ.ಟಿ.ಬಿ.ಜಯಚಂದ್ರ ಹೇಳಿದರು.

ನಗರಸಭಾ ಆವರಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಶಿರಾದಲ್ಲಿ ಇ- ಖಾತೆ ಅಭಿಯಾನ ಆರಂಭಿಸಿ ಕಳೆದ ಒಂದು ವರ್ಷದಲ್ಲಿ ಸುಮಾರು 6 ಸಾವಿರಕ್ಕೂ ಅಧಿಕ ಇ- ಖಾತೆ ಮಾಡಲಾಗಿದೆ. ಇಷ್ಟು ಇ-ಖಾತೆಗಳು ಎಲ್ಲಿಯೂ ಆಗಿಲ್ಲ. ಇದಕ್ಕೆ ನಗರಸಭೆ ಪೌರಾಯುಕ್ತರು ಹಾಗೂ ಸಿಬ್ಬಂದಿಗೆ ಧನ್ಯವಾದ ತಿಳಿಸುತ್ತೇನೆ ಎಂದರು. 94 ಸಿಸಿ ಅಡಿಯಲ್ಲಿ ಹಕ್ಕು ಪತ್ರ ಪಡೆದಿರುವ ಸ್ವತ್ತುಗಳು, ಶಿರಾ ಅಭಿವೃದ್ಧಿ ಪ್ರಾಧಿಕಾರದಿಂದ ಅನುಮೋದೆಯಾಗಿರುವ ಬಡಾವಣೆಯಲ್ಲಿರುವ ಸ್ವತ್ತುಗಳು, ಗ್ರಾಮ ಠಾಣಾದಲ್ಲಿರುವ ಸ್ವತ್ತುಗಳು, ನಿಗಮ ಮಂಡಳಿಗಳ ಮೂಲಕ ನೀಡಿರುವ ಸ್ವತ್ತುಗಳು ಎ- ಖಾತಾ ಆಗುತ್ತವೆ ಹಾಗೂ ಆಸ್ತಿದಾರರು 2024ರ ಸೆಪ್ಟೆಂಬರ್ 10ಕ್ಕಿಂತ ಮುಂಚೆ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿಯಾಗಿರುವವರು ಮಾತ್ರ ಬಿ-ಖಾತಾ ಮಾಡಿಸಲು ಅರ್ಹರಿರುತ್ತಾರೆ. ಭೂ ಪರಿವರ್ತನೆಯಾಗಿ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾಗದ ಬಡಾವಣೆಗಳಲ್ಲಿನ ಹಾಗೂ ಭೂಪರಿವರ್ತನೆಯಾಗದೆ ಉಪವಿಭಜನೆ ಮಾಡಿ ನಿವೇಶನಗಳಾಗಿ ಮಾರಾಟ ಮಾಡಿರುವ ನಿವೇಶನ, ಕಟ್ಟಡಗಳನ್ನು ಅನಧಿಕೃತ ಆಸ್ತಿಗಳೆಂದು ಪರಿಗಣಿಸಿ ಬಿ-ಖಾತಾದಲ್ಲಿ ನಮೂದಿಸಲಾಗುವುದು. ಬಿ-ಖಾತೆ ಪಡೆಯುವುದರಿಂದ ಮಾಲೀಕರ ಸ್ವತ್ತಿಗೆ ಹಕ್ಕು ದಾಖಲಾಗುತ್ತದೆ. ನಗರಸಭೆಗೆ ತೆರಿಗೆಯೂ ಬರುತ್ತದೆ ಎಂದರು.

7 ದಿನದಲ್ಲಿ ಇ- ಆಸ್ತಿ ಕೈಗೆ:

ನಗರಸಭೆ ಪೌರಾಯುಕ್ತ ರುದ್ರೇಶ್.ಕೆ. ಮಾತನಾಡಿ, ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 3 ತಿಂಗಳೊಳಗಾಗಿ ಬಿ- ಖಾತೆಗಳನ್ನು ನೀಡುವಂತೆ ಆದೇಶಿಸಲಾಗಿದ್ದು, ಬಿ- ಖಾತಾದಲ್ಲಿ ದಾಖಲಿಸಲಾಗುವ ಆಸ್ತಿಗಳಿಗೆ ಮೊದಲ ಬಾರಿಗೆ ಸ್ವತ್ತಿಗೆ ಶೇ. 2 ರಷ್ಟು ತೆರಿಗೆ ವಿಧಿಸಲಾಗುವುದು. ಶಿರಾ ನಗರಸಭಾ ವ್ಯಾಪ್ತಿಯಲ್ಲಿ ಎ- ಖಾತಾ, ಬಿ- ಖಾತಾ ಅಭಿಯಾನ ಹಮ್ಮಿಕೊಂಡಿದ್ದು, ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದೆ.

ನಗರದ ಅಂಬೇಡ್ಕರ್ ಭವನ, ರಂಗನಾಥ ನಗರದ ಸಮುದಾಯ ಭವನ, ನಗರಸಭೆ ಕಚೇರಿ, ರೇಷ್ಮೆ ಇಲಾಖೆ ಕಟ್ಟಡದಲ್ಲಿ ನಗರಸಭೆ ಸಿಬ್ಬಂದಿ ಇರುತ್ತಾರೆ. ಸಾರ್ವಜನಿಕರು ತಮ್ಮ ಆಸ್ತಿಗೆ ಸಂಬಂಧಿಸಿದ ದಾಖಲಾತಿಗಳನ್ನು ಸಲ್ಲಿಸಿ ಇದರ ಅನುಕೂಲ ಪಡೆಯಬಹುದು. 7 ದಿನದಲ್ಲಿ ಇ- ಆಸ್ತಿ ಮಾಡಿಕೊಡಲಾಗುವುದು. ನಗರಸಭೆ ಸಿಬ್ಬಂದಿ ವಿಳಂಭ ಮಾಡಿದರೆ ನಮ್ಮ ಗಮನಕ್ಕೆ ತನ್ನಿ ಎಂದರು.

ನಗರಸಭೆ ಅಧ್ಯಕ್ಷ ಜೀಷಾನ್ ಮೊಹಮದ್, ಉಪಾಧ್ಯಕ್ಷ ಲಕ್ಷ್ಮೀಕಾಂತ್, ಸ್ಥಾಯಿ ಸಮಿತಿ ಅಧ್ಯಕ್ಷ ಅಜಯ್‌ಕುಮಾರ್, ನಗರಸಭೆ ಕಂದಾಯ ಅಧಿಕಾರಿ ಮಂಜುನಾಥ್, ನಗರಸಭೆ ಸದಸ್ಯರಾದ ಆರ್.ರಾಮು, ನಗರಸಭೆ ಆಶ್ರಯ ಸಮಿತಿ ಸದಸ್ಯ ವಾಜರಹಳ್ಳಿ ರಮೇಶ್, ಗ್ರಾಮಾಂತರ ಯುವ ಕಾಂಗ್ರೆಸ್ ಅಧ್ಯಕ್ಷ ಮಣಿಕಂಠ, ನಗರ ಅಧ್ಯಕ್ಷ ಅಂಜನ್ ಕುಮಾರ್ ಸೇರಿ ಹಲವರು ಹಾಜರಿದ್ದರು.