ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ರಾಜ್ಯದ ಬೀದರ್‌ನಿಂದ ಚಾಮರಾಜನಗರದವರೆಗೂ ಜನರು ಮಾತನಾಡುವ ಶೈಲಿ ಬೇರೆಯಿದ್ದರೂ ಕೂಡ ಎಲ್ಲೆಡೆ ಕನ್ನಡವನ್ನು ಅಚ್ಚುಕಟ್ಟಾಗಿ ಮಾತನಾಡುತ್ತಾರೆ ಎಂದು ಡಿವೈಎಸ್‌ಪಿ ಬಿ.ಚಲುವರಾಜು ಅಭಿಪ್ರಾಯಪಟ್ಟರು.ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಶನಿವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ದೇಶ ಮತ್ತು ರಾಜ್ಯ ಎಲ್ಲಾ ರೀತಿಯಲ್ಲೂ ವೈವಿದ್ಯತೆಯಿಂದ ಕೂಡಿದೆ. ಮಂಡ್ಯ ಜಿಲ್ಲೆಯಲ್ಲಿ ಕನ್ನಡಕ್ಕೆ ಅತಿ ಹೆಚ್ಚು ಆದ್ಯತೆ ಇದೆ ಎಂದರು.
ಸಂವಿಧಾನದ ನಾಲ್ಕನೇ ಅಂಗವಾಗಿರುವ ಪತ್ರಕರ್ತರು ಮಾಡುವ ಕೆಲವು ಸುದ್ದಿಗಳು ಹಾಗೂ ವಿಶೇಷ ಲೇಖನಗಳು ಶಾಲಾ ಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿರಬೇಕು. ಮಕ್ಕಳು ಬೇರೆ ಕಡೆ ಗಮನಕೊಡದೆ ಓದುವ ಕಡೆ ಹೆಚ್ಚು ಗಮನಹರಿಸುವಂತಹ ವರದಿಗಳನ್ನು ಪ್ರಕಟಿಸಿದರೆ ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು.ಕೆಂಬಾರೆ ಪ್ರೌಢಶಾಲೆ ಮುಖ್ಯಶಿಕ್ಷಕ ತಿಮ್ಮರಾಯಿಗೌಡ ಮಾತನಾಡಿ, ಪತ್ರಕರ್ತರ ಹುದ್ದೆಗೆ ಘನತೆ ತಂದುಕೊಟ್ಟವರು ಡಿ.ವಿ.ಗುಂಡಪ್ಪನವರು. ಇಂತಹ ಮಹನೀಯರು ನಡೆಸಿಕೊಂಡು ಬಂದಂತಹ ಅತ್ಯಂತ ಜವಾಬ್ದಾರಿಯುತ ಹಾಗೂ ಸಮಾಜಕ್ಕೆ ಗೌರವ ತರುವ ಕಾಯಕದಲ್ಲಿ ನಿರತರಾಗಿರುವ ಪತ್ರಕರ್ತರ ವೃತ್ತಿ ಹೆಮ್ಮೆತರುವ ವಿಚಾರ. ಪತ್ರಕರ್ತರಿಗೆ ಹಲವಾರು ಸವಾಲು ಸಮಸ್ಯೆಗಳಿರುತ್ತವೆ. ಅವೆಲ್ಲವನ್ನೂ ಮೀರಿ ತಮ್ಮ ವ್ಯಕ್ತಿತ್ವವನ್ನು ಹೆಚ್ಚಿಸಿಕೊಳ್ಳುವಂತಹ ಕೆಲಸ ಮಾಡಲು ಸಾಕಷ್ಟು ಅವಕಾಶಗಳಿರುತ್ತವೆ ಎಂದು ಹೇಳಿದರು.
ಇದೇ ವೇಳೆ ರಾಷ್ಟ್ರಮಟ್ಟದ ಜಾನಪದ ಕಲಾವಿದೆ ತಾಲೂಕಿನ ತೊಳಲಿ ಗ್ರಾಮದ ಕು.ಚೈತ್ರ ಮತ್ತು ತಾಲೂಕಿನ ಪ್ರಥಮ ಮಹಿಳಾ ಆಟೋ ಚಾಲಕಿ ಬದರಿಕೊಪ್ಪಲಿನ ವಸುಂಧರ ಅವರನ್ನು ಸನ್ಮಾನಿಸಲಾಯಿತು. ರಸ್ತೆ ಅಪಘಾತದಲ್ಲಿ ಗಾಯಗೊಂಡು ಶಸ್ತ್ರ ಚಿಕಿತ್ಸೆಗೊಳಗಾಗಿದ್ದ ಸಂಘದ ಸದಸ್ಯ ಎಂಎನ್.ತರುಣ್‌ಕುಮಾರ್ ಅವರಿಗೆ ಜಿಲ್ಲಾ ಸಂಘದ ವತಿಯಿಂದ ನೀಡಿದ್ದ 5 ಸಾವಿರ ರು.ಗಳ ಚೆಕ್ ವಿತರಿಸಲಾಯಿತು.ಸಮಾರಂಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಸಿ.ಎನ್.ಮಂಜುನಾಥ್ ಪ್ರಾಸ್ತಾವಿಕ ನುಡಿ ನುಡಿದರು. ಸಂಘದ ಅಧ್ಯಕ್ಷ ಕೆ.ಸೀತಾರಾಮು ಅಧ್ಯಕ್ಷತೆ ವಹಿಸಿದ್ದರು. ಇದಕ್ಕೂ ಮುನ್ನ ಕನ್ನಡಾಂಬೆಯ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.
ಸಂಘದ ಮಾಜಿ ಅಧ್ಯಕ್ಷ ಪಿ.ಜೆ.ಜಯರಾಮು, ಪದಾಧಿಕಾರಿಗಳಾದ ಚನ್ನಕೇಶವ, ವಸಂತಕುಮಾರ್, ಯು.ವಿ.ಉಲ್ಲಾಸ್, ಎನ್.ಮಹೇಶ್, ಸದಸ್ಯರಾದ ಕೃಷ್ಣಾಚಾರ್, ಬಿ.ಆರ್.ಕುಮಾರ್, ನಾರಾಯಣ, ಬಿ.ಎಚ್.ರವಿ, ಪುಟ್ಟರಾಜು, ಯೋಗೇಶ್, ಶ್ರೀನಿವಾಸ್, ವಸಂತ್‌ಕುಮಾರ್, ಕೌಶಿಕ್‌ಗೌಡ, ಭಗವಾನ್ ಚಕ್ರವರ್ತಿ, ತರುಣ್‌ಕುಮಾರ್, ದೇ.ರಾ.ಜಗದೀಶ್ ಸೇರಿದಂತೆ ಪತ್ರಿಕಾ ವಿತರಕರು ಮತ್ತು ಆಟೋ ಚಾಲಕರು ಇದ್ದರು.