ಸಾರಾಂಶ
ಎಂ. ಪ್ರಹ್ಲಾದ್
ಕನಕಗಿರಿ: ಬೀದಿನಾಯಿಗಳೆಂದರೆ ನಿರ್ಲಕ್ಷ್ಯ ಮಾಡುವವರ ನಡುವೆ ಇಲ್ಲಿನ ಆಯುರ್ವೇದ ವೈದ್ಯರ ಸಹಕಾರದೊಂದಿಗೆ ಪಶು ಸಂಗೋಪನಾ ಇಲಾಖೆ, ಪಟ್ಟಣ ಪಂಚಾಯಿತಿಯವರು ಬೀದಿ ನಾಯಿಗಳಿಗೆ ರೇಬಿಸ್ ಲಸಿಕೆ ಹಾಕಿ, ಅವುಗಳ ಆರೋಗ್ಯ ರಕ್ಷಣೆ ಜತೆಗೆ ನಾಯಿ ಕಡಿತದಿಂದ ಜನಸಾಮಾನ್ಯರಿಗೆ ಉಂಟಾಗುವ ರೋಗ ತಡೆಯಲು ಮುಂದಾಗಿದ್ದಾರೆ.ಪಟ್ಟಣದಲ್ಲಿ ಬೀದಿನಾಯಿಗಳ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ವಾಲ್ಮೀಕಿ ವೃತ್ತದಿಂದ ತಾವರಗೇರಾ ರಸ್ತೆ ಹಾಗೂ ನವಲಿ ರಸ್ತೆಗಳಲ್ಲಿ ಮಾಂಸದಂಗಡಿಗಳ ಸಂಖ್ಯೆ ಹೆಚ್ಚಿರುವುದರಿಂದ ನಾಯಿಗಳ ಸಂಖ್ಯೆಯೂ ವಿಪರೀತವಾಗಿದೆ. ಪಟ್ಟಣದಲ್ಲಿ ಹುಡುಕಿದರೆ ೭೦-೮೦ ನಾಯಿಗಳು ಸಿಕ್ಕರೆ, ವಾಲ್ಮೀಕಿ ವೃತ್ತದ ಬಳಿಯೇ ೩೦ಕ್ಕೂ ಹೆಚ್ಚು ಬೀದಿ ನಾಯಿಗಳಿವೆ. ಈ ನಾಯಿಗಳು ವಾಹನ ಸವಾರರಿಗೆ ಅಪಾಯ ತಂದೊಡ್ಡುತ್ತವೆಯಲ್ಲದೇ, ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನಗಳಲ್ಲಿ ತೆರಳುವವರನ್ನು ಕಚ್ಚುವ ಸಾಧ್ಯತೆಗಳೇ ಹೆಚ್ಚಿವೆ.
ಪಶು ಇಲಾಖೆ ಸಿಬ್ಬಂದಿ ವಾಹನದೊಂದಿಗೆ ವಾಲ್ಮೀಕಿ ವೃತ್ತಕ್ಕೆ ಬಂದು ಡಾ. ರಂಗಾರೆಡ್ಡಿ ಅವರ ಆಸ್ಪತ್ರೆ ಮುಂಭಾಗ ಹಾಗೂ ತಾವರಗೇರಾ ರಸ್ತೆಯಲ್ಲಿನ ಬೀದಿನಾಯಿಗಳಿಗೆ ಲಸಿಕೆ ಹಾಕಿದ್ದಾರೆ. ಪ್ರಥಮ ದಿನವೇ ೧೫ ನಾಯಿಗಳಿಗೆ ಚುಚ್ಚುಮದ್ದು ಹಾಕಿದ್ದಾರೆ.ನ. 25ರಿಂದ 28ರ ಅವಧಿಯಲ್ಲಿ 40ಕ್ಕೂ ಹೆಚ್ಚು ನಾಯಿಗಳಿಗೆ ಲಸಿಕೆ ಹಾಕಲಾಗಿದೆ.
ಸಂಚಾರಿ ವಾಹನದ ಪಶು ವೈದ್ಯಾಧಿಕಾರಿ ಡಾ. ಹೀನಾ ಫಾತಿಮಾ, ಮುಸಲಾಪುರ ಪಶು ಇಲಾಖೆಯ ಡಾ. ವಿ. ಹರೀಶ, ಸಿಬ್ಬಂದಿ ಶಿವರಾಜ, ಹೊನ್ನೂರುಬಾಷಾ ಇತರರು ಲಸಿಕೆ ಹಾಕಿದರು.ಒಡನಾಟ ಕಂಡು ಅಚ್ಚರಿ: ಡಾ. ರಂಗಾರೆಡ್ಡಿ ಅವರು ಪಶು ಇಲಾಖೆಯ ವೈದ್ಯರು ಹಾಗೂ ಸಿಬ್ಬಂದಿ ಬಂದಾಗ ನಾಯಿಗಳೊಂದಿಗೆ ಒಡನಾಟ ಹಾಗೂ ಅವುಗಳನ್ನು ಹಿಡಿದು ಲಸಿಕೆ ಹಾಕಿಸಿದ ಪರಿಗೆ ಪಶುವೈದ್ಯರೇ ಅಚ್ಚರಿಗೊಂಡರು. ಡಾ. ರಂಗಾರಡ್ಡಿ ಕರೆದಾಗ ನಾಯಿಗಳು ಸನಿಹಕ್ಕೆ ಬಂದವು ಮತ್ತು ಲಸಿಕೆ ಹಾಕುವಾಗ ಯಾವುದೇ ಪ್ರತಿರೋಧ ತೋರಲಿಲ್ಲ. ಪಟ್ಟಣದ ಇನ್ನುಳಿದ ಭಾಗದಲ್ಲಿ ಬೀದಿನಾಯಿಗಳಿಗೆ ಲಸಿಕೆ ಹಾಕುವ ಕಾರ್ಯಕ್ಕೆ ತಾವು ಸಹಕಾರ ನೀಡುವುದಾಗಿ ಡಾ. ರಂಗಾರೆಡ್ಡಿ ಹೇಳಿದರು.
ಬೀದಿನಾಯಿಗಳೊಂದಿಗೆ ಡಾ. ರಂಗಾರೆಡ್ಡಿ ಅವರ ಒಡನಾಟವಿದೆ. ಅವರ ನೆರವು ಪಡೆದು ಪಟ್ಟಣದಲ್ಲಿ ಇನ್ನುಳಿದ ಬೀದಿ ನಾಯಿಗಳಿಗೂ ಲಸಿಕೆ ಹಾಕಿ ರೋಗ ಹರಡುವಿಕೆ ತಡೆಯಲಾಗುವುದು ಎಂದು ಪಶು ಇಲಾಖೆ ಕನಕಗಿರಿ ಸಹಾಯಕ ನಿರ್ದೇಶಕ ಡಾ. ಅರುಣ್ ಗುರು ಹೇಳಿದರು. ಬೀದಿನಾಯಿಗಳಿಗೆ ಲಸಿಕೆ ಹಾಕಿಸುವುದಕ್ಕೆ ಮುಂದಾಗಿರುವುದಕ್ಕೆ ಪಶು ಇಲಾಖೆ, ಪಪಂಗೆ ಧನ್ಯವಾದಗಳು. ಈ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆಗೂ ಇಲಾಖೆ ಮುಂದಾಗಬೇಕಿದೆ ಎಂದು ವೈದ್ಯ ಡಾ. ರಂಗಾರೆಡ್ಡಿ ಹೇಳಿದರು.