ಸಾರಾಂಶ
ಕನ್ನಡಪ್ರಭ ವಾರ್ತೆ ಸಕಲೇಶಪುರ
ಫೆ. ೭ರಂದು ಆಳ್ವಾಸ್ ಪ್ರತಿಷ್ಠಾನ ಹಮ್ಮಿಕೊಂಡಿರುವ ‘ಆಳ್ವಾಸ್ ನುಡಿಸಿರಿ ವಿರಾಸತ್’ ಎಂಬ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಲಿದ್ದು, ಈ ಮೂಲಕ ಪಟ್ಟಣವು ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತೆರೆದುಕೊಳ್ಳಲಿದೆ. ನಿರಂತರವಾಗಿ ಫೆ. ೧೬ವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.ವಿರಾಸತ್ ಸಾಂಸ್ಕೃತಿಕ ಸಮಾರಂಭದಲ್ಲಿ ಸಾಕಷ್ಟು ಮನರಂಜನೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದರಿಂದ ಈ ಸಮಾರಂಭದಲ್ಲಿ ಸುಮಾರು ಹತ್ತು ಸಾವಿರಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆ ಇದೆ. ಇದಾದ ನಂತರ ಸಕಲೇಶ್ವರಸ್ವಾಮಿ ರಥೋತ್ಸವದ ಪ್ರಯುಕ್ತ ಸಕಲೇಶ್ವರಸ್ವಾಮಿ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿವೆ. ಫೆಬ್ರವರಿ ೧೧ ರಂದು ರೋಟರಿ ಸಂಸ್ಥೆ ನಿರ್ಮಾಣ ಮಾಡಿರುವ ಹೇಮಾವತಿ ಪ್ರತಿಮೆ ಅನಾವರಣ ಕಾರ್ಯಕ್ರಮ ನಡೆಯಲಿದ್ದು, ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಗಣ್ಯರು ಭಾಗವಹಿಸಲಿದ್ದಾರೆ. ಫೆಬ್ರವರಿ ೧೨ರಂದು ಸಕಲೇಶ್ವರ ಸ್ವಾಮೀಜಿ ಘಳಿಗೆ ರಥೋತ್ಸವ ನಡೆಯಲಿದ್ದು, ದೇವಾಲಯದಲ್ಲಿ ಅನೇಕ ಹೋಮ- ಹವನ ಹಮ್ಮಿಕೊಳ್ಳಲಾಗಿದೆ. ಫೆಬ್ರವರಿ ೧೩ ರಂದು ಬ್ರಹ್ಮರಥೋತ್ಸವ ಪಟ್ಟಣದ ಮುಖ್ಯ ಬೀದಿಯಲ್ಲಿ ಜರಗಲಿದ್ದು, ಸಾವಿರಾರು ಜನರು ರಥೋತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ.
ಅಂದೇ ತಾಲೂಕು ಒಕ್ಕಲಿಗರ ಸಮಾಜವೂ ಸಹ ಶತೋತ್ತರ ರಜತ ಹುಣ್ಣಿಮೆ ಹಾಗೂ ಕೆಂಪೇಗೌಡ ಪ್ರತಿಮೆ ಅನಾವರಣದ ಅಂಗವಾಗಿ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದು, ತಾಲೂಕಿಗೆ ಆಗಮಿಸುತ್ತಿರುವ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಪುರಪ್ರವೇಶವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಲಿದೆ. ನಂತರ ಸಕಲೇಶ್ವರಸ್ವಾಮಿ ದೇವಸ್ಥಾನದಲ್ಲಿ ಶ್ರೀಗಳ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ಜರುಗಲಿವೆ.ಫೆಬ್ರವರಿ ೧೪ರಂದು ಪಟ್ಟಣದ ಹೊರವಲಯದ ರಾಟೇಮನೆ ಸಮೀಪ ಆದಿಚುಂಚನಗಿರಿ ಶಾಖಾ ಮಠ ನಿರ್ಮಾಣಕ್ಕಾಗಿ ಭೂಮಿ ಪೂಜೆಗಾಗಿ ಹೋಮ ಹವನ ನಡೆಯಲಿವೆ. ಇದಾದ ನಂತರ ತಾಲೂಕು ಒಕ್ಕಲಿಗರ ಸಮಾಜ ನಿರ್ಮಾಣ ಮಾಡಿರುವ ೧೩ ಅಡಿ ಎತ್ತರದ ಕೆಂಪೇಗೌಡರ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಗಣ್ಯರು, ಮಠಾಧೀಶರು ಪಾಲ್ಗೊಳ್ಳಲಿದ್ದಾರೆ. ಅದೇ ದಿನ ೧೦೦೮ ಸುಮಂಗಲಿಯರ ಪೂರ್ಣಕುಂಭದೊಂದಿಗೆ ಪಟ್ಟಣದ ರಾಜಬೀದಿಯಲ್ಲಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳ ಮೆರವಣಿಗೆ ನಡೆಯಲಿದೆ. ನಂತರ ಆದಿಚುಂಚನಗರಿ ಮಠದ ವತಿಯಿಂದ ಹಮ್ಮಿಕೊಂಡಿರುವ ‘ಗುರು ತೋರಿದ ದಾರಿ’ ತಿಂಗಳ ಮಾಮನ ತೇರು ಶತೋತ್ತರ ರಜತ (೧೨೫ನೇ)ಹುಣ್ಣಿಮೆ ಕಾರ್ಯಕ್ರಮ ನಡೆಯಲಿದ್ದು, ಇದೆ ವೇದಿಕೆಯಲ್ಲಿ ಸ್ವಾಮೀಜಿಗಳ ರಜತ ತುಲಾಭಾರ ನಡೆಯಲಿದೆ. ಅಂದು ಸಂಜೆ ಬಾಲಗಂಗಾಧರನಾಥ ಸ್ವಾಮೀಜಿಗಳ ಬೆಳದಿಂಗಳೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಫೆಬ್ರವರಿ ೧೫ರಂದು ತಾಲೂಕು ಒಕ್ಕಲಿಗರ ಸಮಾಜ ಹಾಗೂ ಆದಿಚುಂಚನಗಿರಿ ಮಠದ ವತಿಯಿಂದ ಕೃಷಿ ಮೇಳ ಎಪಿಎಂಸಿ ಅವರಣದಲ್ಲಿ ನಡೆಯಲಿದೆ.
ವಿರಾಸತ್ ಕಾರ್ಯಕ್ರಮದ ಯಶಸ್ಸಿಗಾಗಿ ಈಗಾಗಲೇ ತಾತ್ಕಾಲಿಕವಾಗಿ ಸ್ಥಾಪಿಸಲಾಗಿರುವ ಸಂಸ್ಥೆ ವತಿಯಿಂದ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ, ರೋಟರಿ ಸಂಸ್ಥೆ ಸಹ ಹೇಮಾವತಿ ಪ್ರತಿಮೆ ಅನಾವರಣಕ್ಕಾಗಿ ಬಾಕಿ ಉಳಿದಿರುವ ಕೆಲಸಗಳಿಗೆ ವೇಗ ನೀಡಿದೆ. ತಾಲೂಕು ಒಕ್ಕಲಿಗರ ಸಂಘದ ಪದಾಧಿಕಾರಿಗಳು ಸಹ ಈ ಎಲ್ಲ ಕಾರ್ಯಕ್ರಮದ ಯಶಸ್ಸಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ.ಗಂಗಾರತಿ: ಇದೇ ಮೊದಲ ಬಾರಿಗೆ ಫೆ.೧೩ರಂದು ಸಂಜೆ ಹೊಳೇಮಲ್ಲೇಶ್ವರ ದೇವಸ್ಥಾನ ಎದುರಿನ ಹೇಮಾವತಿ ನದಿಯಲ್ಲಿ ನಡೆಯಲಿರುವ ಗಂಗಾರತಿ ವಿಶೇಷವಾಗಿದೆ.
ಝಗಮಗಿಸುವ ಪೇಟೆ ಬೀದಿಗಳು: ವಾರಗಳ ಕಾಲ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಕಲೇಶ್ವರಸ್ವಾಮಿ ಜಾತ್ರಾ ವಸ್ತುಪ್ರದರ್ಶನ ಸಹ ಆರಂಭವಾಗಲಿದೆ. ಪುರಸಭೆ ಪಟ್ಟಣದ ಮುಖ್ಯ ಬೀದಿಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಿದ್ದರೆ, ಧಾರ್ಮಿಕ ಕಾರ್ಯಕ್ರಮಕ್ಕಾಗಿ ವಿವಿಧ ಸಂಘ ಸಂಸ್ಥೆಗಳು ಪಟ್ಟಣದ ಪ್ರಮುಖ ಬೀದಿಗಳನ್ನು ತಳಿರು ತೋರಣ, ಬಂಟಿಂಗ್ಸ್‌ಗಳಿಂದ ಅಲಂಕರಿಸುತ್ತಿವೆ.