ಸಾರಾಂಶ
ಪುರಸಭೆ ಸಾಮಾನ್ಯ ಸಭೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ಸಿಎಂ ಎಸ್ ಎಂ ಕೃಷ್ಣ ಗೆ ಶ್ರದ್ಧಾಂಜಲಿ
ಕನ್ನಡಪ್ರಭ ವಾರ್ತೆ, ತರೀಕೆರೆಮಹಾತ್ಮ ಗಾಂಧೀಜಿ ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಇಂತಹ ಅಮೂಲ್ಯ ಸ್ವಾತಂತ್ರ್ಯವನ್ನು ಗೌರವಿಸಿ ನಡೆದುಕೊಳ್ಳಬೇಕು ಎಂದು ಸದಸ್ಯ ಟಿ.ಜಿ. ಲೋಕೇಶ್ ಹೇಳಿದರು.
ಪುರಸಭಾ ಸಭಾಂಗಣದಲ್ಲಿ ಅಧ್ಯಕ್ಷ ವಸಂತಕುಮಾರ್ ನೇತೃತ್ವದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಹಾತ್ಮ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ, ಸಾಹಿತಿ ನಾ. ಡಿಸೋಜ ಸೇರಿದಂತೆ ಆಗಲಿದ ಗಣ್ಯರಿಗೆ, ಕುಂಭ ಮೇಳದಲ್ಲಿ ಕಾಲ್ತುಳಿತದಿಂದ ಅಗಲಿದವರಿಗೆ ಸಂತಾಪ ಸೂಚಿಸಿ, ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ದೇಶವನ್ನು ಆರ್ಥಿಕ ಸಂಕಟದಿಂದ ಪಾರು ಮಾಡಿದ್ದರು. ಮಾಜಿ ಮುಖ್ಯಮಂತ್ರಿ ಎಸ್. ಎಂ ಕೃಷ್ಣ ಅಂಗನವಾಡಿ, ಅಕ್ಷರ ದಾಸೋಹ ಇತ್ಯಾದಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸಿದರು ಎಂದು ತಿಳಿಸಿದರು.ಸದಸ್ಯ ಟಿ ದಾದಾಪೀರ್ ಮಾತನಾಡಿ ಮಹಾತ್ಮ ಗಾಂಧೀಜಿ ಆಫ್ರಿಕಾದಲ್ಲಿ ವರ್ಣಭೇದ ನೀತಿ ವಿರುದ್ಧ ಹೋರಾಡಿದರು. ಇಡೀ ಜಗತ್ತಿಗೆ ಗಾಂಧೀಜಿ ಅವರ ಅಹಿಂಸಾತ್ಮಕ ಸತ್ಯಾಗ್ರಹ ಮಾದರಿ. ಭಾರತದ ಮಹಿಳೆಯರ ಸಹನೆ, ಸಂಯಮ ಗಾಂಧಿ ತತ್ವ ಗಳನ್ನು ಎತ್ತಿ ಹಿಡಿದಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸರಳ ವ್ಯಕ್ತಿ. ದೇಶಕ್ಕೆ ಮರೆಯಲಾಗದಂತಹ ಕೊಡುಗೆ ನೀಡಿದ್ದಾರೆ. ಎರಡು ಬಾರಿ ಪ್ರಧಾನಮಂತ್ರಿಯಾಗಿದ್ದವರು. ಸಾಹಿತಿ ನಾ ಡಿಸೋಜಾ ಮಲೆನಾಡಿನ ಸಮಸ್ಯೆಗಳನ್ನು ಬಹಳ ಚೆನ್ನಾಗಿ ಅರಿತಿದ್ದರು. ತಮ್ಮ ಕೃತಿಗಳಲ್ಲಿ ಮಲೆನಾಡಿನ ಸಮಸ್ಯೆಗಳನ್ನು ಚಿತ್ರಿಸಿದ್ದಾರೆ. ಪ್ರೊ.ಮುಜಾಫರ್ ಅಸಾದಿ ಅವರು ಹಲವು ವಿಶ್ವವಿದ್ಯಾನಿಲಯಗಳಲ್ಲಿ ಸೇವೆ ಸಲ್ಲಿಸಿದ್ದು ಸಾಹಿತಿ ಮತ್ತು ಚಳುವಳಿಗಾರರಾಗಿದ್ದರು. ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.ಸದಸ್ಯ ಟಿ.ಜಿ. ಶಶಾಂಕ ಮಾತನಾಡಿ ಮಹಾತ್ಮ ಗಾಂಧೀಜಿ ಅಹಿಂಸಾ ತತ್ವದ ಪರಿಕಲ್ಪನೆ ಸೃಷ್ಟಿ ಮಾಡಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ದೇಶದ ಆರ್ಥಿಕ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಸರ್ಕಾರ ಅವರಿಗೆ ಭಾರತ ರತ್ನ ನೀಡಿ ಗೌರವಿಸಬೇಕು ಎಂದು ಮನವಿ ಮಾಡಿದರು. ಸದಸ್ಯ ಟಿ. ಎಂ.ಭೋಜರಾಜ್ ಮಾತನಾಡಿ ಗಾಂಧೀಜಿ ಅವರ ಕೊಡುಗೆ ಅಪಾರ. ದೂರ ದೃಷ್ಟಿ ಹೊಂದಿದ್ದ ಮನಮೋಹನ್ ಸಿಂಗ್ ಇಡೀ ಜಗತ್ತು ಜಾಗತಿಕ ಹಣದುಬ್ಬರದಲ್ಲಿ ಮುಳುಗಿದಾಗ ಜಗತ್ತಿನ ಅನೇಕ ಬಲಿಷ್ಠ ರಾಷ್ಟ್ರಗಳಿಗೆ ಅರ್ಥ ವ್ಯವಸ್ಥೆ ಸಲಹೆ ನೀಡಿ ಹಣದುಬ್ಬರದಿಂದ ಕಾಪಾಡಿದ್ದರು. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಜಾಗತಿಕ ಭೂಪಟದಲ್ಲಿ ಬೆಂಗಳೂರಿಗೆ ಐಟಿ-ಬಿಟಿ ಹೆಗ್ಗಳಿಕೆ ತಂದುಕೊಟ್ಟರು. ಕುಂಭಮೇಳದಲ್ಲಿ ಅಗಲಿದ ಎಲ್ಲ ಭಕ್ತರಿಗೂ ಸದ್ಗತಿ ದೊರೆಯಲಿ ಎಂದು ಕೋರಿದರು.
ಪುರಸಭೆ ನಾಮಿನಿ ಸದಸ್ಯರಾದ ಆದಿಲ್ ಭಾಷಾ, ಟಿ. ಜಿ. ಮಂಜುನಾಥ, ಸದಸ್ಯ ಟಿ.ಜಿ. ಅಶೋಕ್ ಕುಮಾರ್, ಪುರಸಭೆ ಉಪಾಧ್ಯಕ್ಷ ಗಿರಿಜಾ ಪ್ರಕಾಶ್ ವರ್ಮಾ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್, ಪುರಸಭೆ ಸದಸ್ಯರು, ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್, ವ್ಯವಸ್ಥಾಪಕ ವಿಜಯ್ ಕುಮಾರ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.